ಕಲಬುರಗಿ : ಕೆರೆ ರಸ್ತೆ ದುರಸ್ತಿಗೊಳಿಸಿ, ಪ್ಲಾಸ್ಟಿಕ್ ನಿಷೇಧಿಸಲು ಒತ್ತಾಯಿಸಿ ಪಾಲಿಕೆ ಮುಂದೆ ಪ್ರತಿಭಟನೆ
ಕಲಬುರಗಿ : ಸಂಪೂರ್ಣ ಹದಗೆಟ್ಟಿರುವ ಅಪ್ಪಾ ಪಬ್ಲಿಕ್ ಶಾಲೆ ಎದುರುಗಡೆ ಇರುವ ಟ್ಯಾಂಕ್ ಬಂಡ್ ರಸ್ತೆ ದುರಸ್ತಿಗೊಳಿಸುವಂತೆ ಹಾಗೂ ಪ್ಲಾಸ್ಟಿಕ್ ನಿಷೇಧಿಸುವಂತೆ ಒತ್ತಾಯಿಸಿ ಸೋಮವಾರ ಜೈ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಹಾನಗರ ಪಾಲಿಕೆಯ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಟ್ಯಾಂಕ್ ಬಂಡ್ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿದೆ. ರಸ್ತೆ ಹದಗೆಟ್ಟು ಹಲವಾರು ತಿಂಗಳಾದರೂ ಸಹ ದುರಸ್ತಿಗೊಳಿಸುವ ಕುರಿತು ಆಲೋಚನೆ ಇಲ್ಲ. ಪ್ರಮುಖ ಆಕರ್ಷಣೆ ಆಗಿರುವ ಅಪ್ಪಾ ಗಾರ್ಡನ್ ಇದೆ. ಹೀಗಾಗಿ ಆ ರಸ್ತೆಯಲ್ಲಿ ಪಾಲಕರು ಹಾಗೂ ಮಕ್ಕಳು ಸಂಚರಿಸುತ್ತಾರೆ. ರಸ್ತೆ ಹದಗೆಟ್ಟಿದ್ದರಿಂದ ಅಪಘಾತಗಳು ಸಂಭವಿಸಿ ಹಲವರು ಗಾಯಗೊಂಡು ಆಸ್ಪತ್ರೆಗೂ ಸೇರಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ನಗರದ ಸಾಕಷ್ಟು ರಸ್ತೆಗಳು ಹದಗೆಟ್ಟಿದ್ದರೂ ಸಹ ಪಾಲಿಕೆ ಹಾಗೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು ನಾಚಿಕೆಗೇಡಿತನದ್ದು ಎಂದು ಟೀಕಿಸಿರುವ ಅವರು, ಈ ಹಿಂದೆ ಪ್ಲಾಸ್ಟಿಕ್ ಮತ್ತು ನಾನ್ ಓವನ್ ಚೀಲಗಳನ್ನು ನಿಷೇಧಿಸುವ ಕುರಿತು 2020ರ ಸೆಪ್ಟೆಂಬರ್ 14ರಂದು ಪಾಲಿಕೆಯ ಆಯುಕ್ತರಿಗೆ ಮನವಿ ಮಾಡಿತ್ತು. ಆಯುಕ್ತರೂ ಸಹ ಆಸಕ್ತಿ ವಹಿಸಿ ಪ್ಲಾಸ್ಟಿಕ್ ವ್ಯಾಪಾರಿಗಳ ಮೇಲೆ ದಾಳಿ ಮಾಡಿದ್ದರು. ಆದಾಗ್ಯೂ, ಈಗ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಮತ್ತು ನಾನ್ ಓವನ್ ಚೀಲಗಳು ಬಳಕೆ ಆಗುತ್ತಿವೆ. ಇದರಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಕೂಡಲೇ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಮಂಜುನಾಥ್ ಬಿ. ಹಾಗರಗಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಗನ್ನಾಥ್ ಪಟ್ಟಣಶೆಟ್ಟಿ, ಮಹಿಮೂದ್ ಯಲಗಾರ್, ಬಾಲರಾಜ್ ಕೋನಳ್ಳಿ, ಶರಣು ಖಾನಾಪೂರೆ, ವಿವೇಕಾನಂದ್ ಪಾಂಡವ, ರಾಚಣ್ಣ ಪಾಟೀಲ್, ರಜನೀಶ್ ಕೌಂಟೆ, ಪ್ರಭು, ಸಂತೋಷ್ ಪಾಟೀಲ್, ಶಾಂತಕುಮಾರ್, ಆರ್.ಎಸ್. ಪಾಟೀಲ್, ಸಿದ್ದು ಹರಸೂರ್, ಮಹಿಪಾಲ್, ವಿವೇಕ್, ಸಂಗಮೇಶ್, ಗುರುರಾಜ್ ಮುಂತಾದವರು ಪಾಲ್ಗೊಂಡಿದ್ದರು.