ನಿಮ್ಮನ್ನ ಶಾಶ್ವತವಾಗಿ ವಿರೋಧ ಪಕ್ಷದಲ್ಲೇ ಇಡ್ತೀವಿ ಅನ್ನೋ ಬಿಎಸ್ವೈ ಸವಾಲಿಗೆ ಸಿದ್ದರಾಮಯ್ಯ ಪ್ರತಿ ಸವಾಲ್..!
ವಿಧಾನಸಭೆಯಲ್ಲಿ ತೀವ್ರತರನಾದ ಚರ್ಚೆಯ ನಡುವೆಯೂ ಕೆಲವೊಮ್ಮೆ ಹಾಸ್ಯ ಚಟಾಕಿಗಳು ನಡೆದು ಸದನದಲ್ಲಿ ಆಡಳಿತ ಪಕ್ಷ ವಿರೋಧ ಪಕ್ಷ ಎನ್ನುವ ಬೇಧವಿಲ್ಲದೇ ನಗೆಗಡಲಲ್ಲಿ ತೇಲಿಸುತ್ತದೆ. ಈ ನಡುವೆ ಕೆಲವೊಮ್ಮೆ ಸದನದಲ್ಲಿ ನಾನಾ ನೀನಾ ಎನ್ನುವ ಸವಾಲ್ಗಳೂ ಎದುರಾಗುವುದಿದೆ. ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಸಿಎಂ ಬಿಎಸ್ವೈ ನಡುವೆ ಅಂತಹದ್ದೇ ಒಂದು ಸವಾಲಿಗೆ ವೇದಿಕೆಯಾಗಿತ್ತು. ಹಾಗಾದ್ರೆ ಸಿಎಂ ಮತ್ತು ವಿಪಕ್ಷ ನಾಯಕರ ನಡುವೆ ನಡೆದ ಆ ಮಾತುಕತೆ ಏನು ಇಲ್ಲಿದೆ ನೋಡಿ ಡೀಟೈಲ್ಸ್..!
ವಿಧಾನಸಭೆಯ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಿಎಸ್ವೈ, ಮಾಜಿ ಸಿಎಂ ಸಿದ್ದರಾಮಯ್ಯಗೆ ‘ಸಿಎಂ’ ಸವಾಲ್ ಹಾಕಿದ್ರು. ನೀವು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎನ್ನುವ ತಿರುಕನ ಕನಸು ಕಾಣ್ತಿದ್ದೀರಾ, ಆದರೆ ಅದು ಸಾಧ್ಯವಿಲ್ಲ, ಶಾಶ್ವತವಾಗಿ ನೀವು ವಿರೋಧ ಪಕ್ಷದಲ್ಲೇ ಇರುತ್ತೀರಾ ಎಂದು ಸವಾಲು ಹಾಕಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲಿ ಉಪಚುನಾವಣೆ ಬರ್ತಿದೆ. ಜನರು ಯಾರನ್ನು ಗೆಲ್ಲಿಸ್ತಾರೆ ನೋಡೋಣ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಸವಾಲೆಸೆದಿದ್ದಾರೆ.
ಇನ್ನು ಈ ಸವಾಲಿಗೆ ಉತ್ತರಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಬಿಎಸ್ವೈಗೆ ಮರುಸವಾಲು ಹಾಕಿದ್ರು. ಅಲ್ಲಾ ನಾನೂ ಸಿಎಂ ಆಗಿದ್ದೆ, ಇದೇ ಸಂದರ್ಭದಲ್ಲಿ ನಾವೂ ಕೂಡಾ ಎಲ್ಲಾ ಉಪಚುನಾವಣೆಯನ್ನು ಗೆದ್ದಿದ್ದೇವೆ, ಬೈ ಎಲೆಕ್ಷನ್ ಗೆಲ್ಲೋದು ದೊಡ್ಡ ಮಾತಲ್ಲ ಆದ್ರೆ ಅಸೆಂಬ್ಲಿ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಪ್ರತಿಸವಾಲು ಹಾಕಿದ್ರು. ಇನ್ನು ಇದಕ್ಕೆ ಉತ್ತರಿಸಿದ ಸಿಎಂ ಬಿಎಸ್ವೈ, ನಿಮ್ಮೋರ ಕಡೆಯಲ್ಲಿ ಸೈನ್ ಹಾಕಿ ಕೊಡಿಸಿ, ಅಸೆಂಬ್ಲಿ ವಿಸರ್ಜನೆ ಮಾಡಿ ಜನರ ಮುಂದೆ ಹೋಗೋಣ ಎಂದು ಸಿದ್ದರಾಮಯ್ಯರಿಗೇ ಪ್ರತಿಸವಾಲು ಹಾಕಿದ್ರು. ಸಿಎಂ ಬಿಎಸ್ವೈ ಹೀಗೆ ಹೇಳುತ್ತಿದ್ದಂತೆಯೇ ಉತ್ತರಿಸಿದ ಕಾಂಗ್ರೆಸ್ ನಾಯಕರು, ಬನ್ನಿ ಸಾರ್, ಚುನಾವಣೆ ಎದುರಿಸಲು ನಾವು ರೆಡಿ ಅಂತ ಒಕ್ಕೊರಲಿನಿಂದ ಹೇಳಿದ್ರು. ಇದೇ ವೇಳೆ ಮಾತನಾಡಿದ ಜೆಡಿಎಸ್ ನಾಯಕ ಹೆಚ್.ಡಿ ರೇವಣ್ಣ ಕೂಡಾ ಚುನಾವಣೆ ಎದುರಿಸಲು ನಾವೂ ಸಿದ್ಧ ಎಂದು ಕಾಂಗ್ರೆಸ್ ಜೊತೆ ದನಿಗೂಡಿಸಿದ್ರು. ಒಟ್ಟಿನಲ್ಲಿ ಇಂದು ವಿಧಾನಸಭೆಯಲ್ಲಿ ಅನೇಕ ವಿಶೇಷ ಘಟನೆಗಳಿಗೆ ಸಾಕ್ಷಿಯಾಯಿತು.