ಕಲಬುರಗಿ : ರೈಲ್ವೆ ವಲಯ ಸ್ಥಾಪನೆಗೆ ಸಂಸತ್ತಿನಲ್ಲಿ ಸಂಸದ ಡಾ. ಜಾಧವ್ ಪಟ್ಟು
ಕಲಬುರಗಿ : ಕಲಬುರಗಿಯಲ್ಲಿ ಮಂಜೂರಾಗಿದ್ದ ಪ್ರತ್ಯೇಕ ರೈಲ್ವೆ ವಲಯವನ್ನು ಕೇಂದ್ರ ಸರ್ಕಾರವು ಕೈಬಿಟ್ಟಿರುವ ಕ್ರಮವನ್ನು ಪುನರ್ ಪರಿಶೀಲಿಸಬೇಕು ಎಂದು ಸಂಸದ ಡಾ. ಉಮೇಶ್ ಜಾಧವ್ ಅವರು ಒತ್ತಾಯಿಸಿದರು.
ಬುಧವಾರ ಸಂಸತ್ತಿನ ಅಧಿವೇಶನದಲ್ಲಿ ಲೋಕಸಭೆ ಕಲಾಪದಲ್ಲಿ ಪ್ರಸ್ತಾಪಿಸಿದ ಅವರು, ಕಳೆದ 2014ರಲ್ಲಿ ಜಮ್ಮು, ಕಲಬುರಗಿ ಹಾಗೂ ಸಿಲ್ಚರ್‍ದಲ್ಲಿ ಪ್ರತ್ಯೇಕ ರೈಲ್ವೆ ವಲಯವನ್ನು ಘೋಷಿಸಲಾಗಿತ್ತು. ಕಲಬುರಗಿಯಲ್ಲಿ ಈ ಸಂಬಂಧ ಜಮೀನು ಗುರುತಿಸಲಾಗಿತ್ತು. ಆದಾಗ್ಯೂ, ಕೇಂದ್ರದ ಬಜೆಟ್‍ನಲ್ಲಿ ಪ್ರತ್ಯೇಕ ರೈಲ್ವೆ ವಲಯ ಸೇರಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಎರಡು ಪ್ರತ್ಯೇಕ ಹೊಸ ರೈಲ್ವೆ ವಲಯಗಳ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಕಲಬುರಗಿ ರೈಲ್ವೆ ವಲಯವನ್ನು ಅನಿರೀಕ್ಷಿತವಾಗಿ ಕೈಬಿಟ್ಟಿದ್ದು ಅಚ್ಚರಿ ತಂದಿದೆ ಎಂದು ಅವರು ಹೇಳಿದರು.
ಈ ಹಿಂದೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿಯವರು ಕಲಬುರಗಿಯಲ್ಲಿ ಪ್ರತ್ಯೇಕ ರೈಲ್ವೆ ವಲಯ ಸ್ಥಾಪನೆಯ ಕುರಿತು ಪ್ರಸ್ತಾಪ ಮಾಡಿದ್ದರು. ಅವರ ನಿಧನದ ನಂತರ ಆ ಪ್ರಸ್ತಾಪವು ಬಜೆಟ್‍ನಲ್ಲಿ ಸೇರಿಲ್ಲ. ಕೂಡಲೇ ಕಲಬುರಗಿಗೆ ಪ್ರತ್ಯೇಕ ರೈಲ್ವೆ ವಲಯ ಸ್ಥಾಪಿಸುವ ಮೂಲಕ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.