ಕಲಬುರಗಿ : ಪೌರಕಾರ್ಮಿಕರಿಗೆ ಗುಣಮಟ್ಟದ ಪೌಷ್ಠಿಕ ಉಪಾಹಾರ ಕೊಡಿ:ಡಿ.ಸಿ. ವಿ.ವಿ.ಜ್ಯೋತ್ಸ್ನಾ
ಕಲಬುರಗಿ : ಕಲಬುರಗಿ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಯೋಜನೆಯಡಿ ಗುಣಮಟ್ಟದ ಪೌಷ್ಠಿಕ ಉಪಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲಿ ಜಿಲ್ಲಾ ಮಟ್ಟದ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ನೇಮಕಾತಿ ಪ್ರತಿಬಂಧಕ ಮತ್ತು ಪುನರ್ವಸತಿ ಅಧಿನಿಯಮ-2013ರ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಪಹಾರ ಪೌಷ್ಠಿಕವಾಗಿದ್ದು, ಗುಣಮಟ್ಟದಿಂದ ಕೂಡಿರಬೇಕು ಮತ್ತು ಅದರ ಪ್ರಮಾಣವು ಹೆಚ್ಚಾಗಿರಬೇಕು. ಉಪಹಾರದಲ್ಲಿ ಮೊಟ್ಟೆ ಸಹ ನೀಡುವಂತೆ ಸೂಚಿಸಿದ ಡಿ.ಸಿ. ಅವರು ಉಪಹಾರ ಗುಣಮಟ್ಟ ಪರಿಶೀಲನೆಗೆ ಅಧಿಕಾರಿಗಳು ಸ್ವತ ಬೆಳಗಿನ ಉಪಹಾರ ಸೇವಿಸುವ ಮೂಲಕ ಪರೀಕ್ಷಿಸಬೇಕು ಎಂದರು.
ಕಲಬುರಗಿ ನಗರದಲ್ಲಿ ಒಳಚರಂಡಿ ಸ್ವಚ್ಛತೆಗೆ ಸಕ್ಕಿಂಗ್ ಮತ್ತು ಜಟ್ಟಿಂಗ್ ಸೇರಿ ಒಟ್ಟು 6 ಯಂತ್ರಗಳಿವೆ. “ಅಮೃತ “ ಯೋಜನೆಯಡಿ ಮತ್ತೆ 5 ಯಂತ್ರಗಳನ್ನು ಖರೀದಿಸಲು ಪ್ರಸ್ತಾಪಿಸಲಾಗಿದೆ. ದಿನದಿಂದ ದಿನಕ್ಕೆ ಕಲಬುರಗಿ ನಗರ ಬೆಳೆಯುತ್ತಿದ್ದು, ಈ ಸಂಖ್ಯೆಯ ಯಂತ್ರಗಳು ದೈನಂದಿನ ಸಮಸ್ಯೆಗಳ ನಿವಾರಣೆಗೆ ಸಾಲಬಹುದೇ ಎಂಬುದರ ಕುರಿತು ಅಧ್ಯಯನ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು ಇನ್ನುಳಿದಂತೆ ಜಿಲ್ಲೆಯ ಇತರೆ ಸ್ಥಳೀಯ ಸಂಸ್ಥೆಗಳಲ್ಲಿ ತಲಾ ಒಂದು ಸಕ್ಕಿಂಗ್ ಯಂತ್ರವಿದ್ದು, ಹೆಚ್ಚಿನ ಯಂತ್ರ ಅವಶ್ಯಕತೆವಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ ಅವರಿಗೆ ನಿರ್ದೇಶನ ನೀಡಿದರು.
ಸಫಾಯಿ ಕರ್ಮಚಾರಿಗಳಿಗೆ ಗುಣಮಟ್ಟದ ಸುರಕ್ಷಾ ಪರಿಕರಗಳನ್ನು ಪೂರೈಸಬೇಕು. ಯಂತ್ರ ಚಾಲನೆ ಕುರಿತು ಕಾರ್ಮಿಕರಿಗೆ ಸೂಕ್ತ ತರಬೇತಿ ನೀಡಬೇಕು. ಪೌರಕಾರ್ಮಿಕರು ಸೇರಿದಂತೆ ಸ್ವಚ್ಛತಾ ಕಾರ್ಮಿಕರಿಗೆ ಆರೋಗ್ಯ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳ ಮೂಲಕ ಆಗಾಗ ಸಮಗ್ರ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಸೂಚಿಸಿದರು.
ಪೌರಕಾರ್ಮಿಕರಿಗೆ ಉಪಹಾರದೊಂದಿಗೆ ಮೊಟ್ಟೆ: ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ಮಾತನಾಡಿ ಪಾಲಿಕೆಯಿಂದ ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ ಸರಬರಾಜಿಗೆ ಈಗಾಗಲೆ ಟೆಂಡರ್ ಕರೆಯಲಾಗಿದ್ದು, ವಾರದಲ್ಲಿ ಎರಡು ಬಾರಿ (ಬುಧವಾರ ಮತ್ತು ರವಿವಾರ) ಉಪಹಾರದೊಂದಿಗೆ ಮೊಟ್ಟೆ ನೀಡಲು ನಿರ್ಧರಿಸಿದೆ. ಉಳಿದಂತೆ ಸೋಮವಾರ ಉಪ್ಪಿಟು ಮತ್ತು ಸೀರಾ, ಮಂಗಳವಾರ ಪೋಹಾ (ಅವಲಕ್ಕಿ) ಮತ್ತು ಮೋಸರು, ಬುಧವಾರ ಅನ್ನ ಮತ್ತು ಸಾರು, ಗುರುವಾರ ಇಡ್ಲಿ, ಚಟ್ನಿ ಮತ್ತು ಸಾಂಬಾರ್, ಶುಕ್ರವಾರ ಸುಸಲಾ ಮತ್ತು ಮೊಸರು, ಶನಿವಾರ ಸೆಟ್ದೋಸಾ ಮತ್ತು ಸಾಗು ಹಾಗೂ ರವಿವಾರ ಪುಳಿಯೊಗೆರೆ/ಲೇಮನ್ ರೈಸ್ ನೀಡಲಾಗುವುದು. ಉಪಹಾರವು 400 ಗ್ರಾಂ ಪ್ರಮಾಣದಲ್ಲಿರಲಿದ್ದು, ಪ್ರತಿದಿನ ಬೆಳಗಿನ ಉಪಾಹಾರದ ಜೊತೆಗೆ ಕಡ್ಡಾಯವಾಗಿ ಚಹಾ ಸಹ ನೀಡಲಾಗುತ್ತಿದೆ ಎಂದು ಉಪಾಹಾರದ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ. ದಿಲೀಶ್ ಸಾಸಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ, ಡಿ.ಐ.ಸಿ. ಜಂಟಿ ನಿರ್ದೇಶಕ ಮಾಣಿಕ ವಿ. ರಘೋಜಿ, ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತ ನರಸಿಂಹರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.