ತಾರಫೈಲ ಗುಲಾಬವಾಡಿ ಸಾರ್ವಜನಿಕ ಶೌಚಾಲಯ ದುರಸ್ಥಿಗೆ ಆಗ್ರಹ
ಕಲಬುರಗಿ ನಗರದ ವಾರ್ಡ ನಂ.48ರಲ್ಲಿ ಬರುವ ತಾರಫೈಲ ಹಾಗೂ ಗುಲಾಬವಾಡಿ ಬಡಾವಣೆಯಲ್ಲಿ ಸಾರ್ವಜನಿಕ ಶೌಚಾಲಯಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು, ಇವುಗಳ ದುರಸ್ಥಿ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಜೈಕನ್ನಡಿಗರ ಸೇನೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಇಲ್ಲಿನ ಸಾರ್ವಜನಿಕ ಶೌಚಾಲಯಗಳು ದುರಸ್ಥಿ ಇಲ್ಲದೆ ಹಾಳಾಗಿ ಹೋಗಿರುವುದರಿಂದ ಬಡಾವಣೆಯ ನಾಗರಿಕರು ಮತ್ತು ಮಹಿಳೆಯರು ಬಹಿರ್ದೆಸೆಗೆಂದು ರೈಲ್ವ ಹಳಿಯ ಬಳಿ ಹೋಗಿ ಬರುತ್ತಿದ್ದಾರೆ.
ಉಪಯೋಗಕ್ಕೆ ಯೋಗ್ಯವಿಲ್ಲದ ಈ ಶೌಚಾಲಯಗಳನ್ನು ದುರಸ್ಥಿ ಕೈಗೊಂಡು ಇದರ ನಿರ್ವಾಹಣೆಯನ್ನು ನೋಡಿಕೊಂಡು ಹೋಗುವ ಮೂಲಕ ಇಲ್ಲಿನ ನಾಗರಿಕರು ವಿಶೇಷವಾಗಿ ಮಹಿಳೆಯರು ಎದುರಿಸುತ್ತಿರುವ ಗಂಭೀರವಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಮ್ಮ ಮನವಿಯಲ್ಲಿ ಜೈಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ ನೇತೃತ್ವದ ನಿಯೋಗ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಆಗ್ರಹಿಸಿದೆ.
ಬರುವ ಒಂದು ವಾರದೊಳಗೆ ಕೆಟ್ಟುಹೋಗಿರುವ ಇಲ್ಲಿನ ಸಾರ್ವಜನಿಕ ಶೌಚಾಲಯಗಳ ದುರಸ್ಥಿ ಕಾರ್ಯಕೈಗೊಳ್ಳಲು ಕ್ರಮ ಆದೇಶಿಸಬೇಕು, ತಮ್ಮ ಈ ಮನವಿಗೆ ಸ್ಪಂಧಿಸದಿದ್ದಲ್ಲಿ ಬೀದಿಗಿಳಿದು ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ನಿಯೋಗದಲ್ಲಿ ಶೇಷಗಿರಿ ಮರತೂರಕರ, ಸುನೀಲ ಪಾಣೆಗಾಂವ, ಸಾಗರ ಸಿಂಗೆ, ಅಮರ ಯಾದವ, ಭೀಮಾ ಶೇಖರ ಸೇರಿದಂತೆ ಹಲವರಿದ್ದರು.