ರಂಗೇರಿದ ‘ಪಂಚ’ ಚುನಾವಣಾ ಕಣ..! ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ದೀದಿ ಅಬ್ಬರ..!
ದಿನೇ ದಿನೇ ಪಂಚ ರಾಜ್ಯಗಳಲ್ಲಿ ಚುನಾವಣಾ ಕಾವು ರಂಗೇರ್ತಿದೆ. ಪ್ರಾದೇಶಿಕ ಪಕ್ಷಗಳು ಮತ್ತು ರಾಷ್ಟ್ರೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಪಂಚ ರಾಜ್ಯ ಚುನಾವಣೆಯಲ್ಲಿ ಹೈವೋಲ್ಟೆಜ್ ಆಗಿರೋ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಲೇಬೇಕೆಂದು ಪಣ ತೊಟ್ಟಿರೋ ಬಿಜೆಪಿ ಭಾರೀ ಕಸರತ್ತು ನಡೆಸ್ತಿದೆ.
ಇತ್ತ ಟಿಎಂಸಿ ಕೂಡ ಭಾರೀ ಪ್ರಚಾರ ನಡೆಸ್ತಿದ್ದು ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇಂದು ಜಾಗ್ರಾಮ್ ಜಿಲ್ಲೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಈ ಹಿಂದೆ ಸಿಪಿಎಂ ಪಕ್ಷದವರೂ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ರು. ಈಗ ಬಿಜೆಪಿ ಕೂಡ ಅದೇ ರೀತಿ ಮಾಡ್ತಿದೆ ಅಂತಾ ಆರೋಪಿಸಿದ್ರು.
ಇತ್ತ, ತಮಿಳುನಾಡಿನಲ್ಲಿ MDMK ಪಕ್ಷ ಪ್ರಣಾಳಿಕೆ ರಿಲೀಸ್ ಮಾಡಿದೆ. ವೈಕೊ ನೇತೃತ್ವದ ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಮ್ ಪಕ್ಷ, 6 ಸ್ಥಾನಗಳಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದೆ.
ಕೇರಳದಲ್ಲಿ ಪಿ.ಸಿ.ಥಾಮಸ್ ನೇತೃತ್ವದ ಕಾಂಗ್ರೆಸ್ ಬಣ, ಬಿಜೆಪಿ ನೇತೃತ್ವದ ಎನ್ಡಿಎ ಜೊತೆ ಮೈತ್ರಿ ಮುರಿದುಕೊಳ್ಳಲು ನಿರ್ಧರಿಸಿರುವುದಾಗಿ ಘೋಷಿಸಿದೆ. ನಮಗೆ ಸ್ಥಾನ ನೀಡದೇ ಬಿಜೆಪಿ ನಮ್ಮ ಪಕ್ಷಕ್ಕೆ ಅವಮಾನ ಮಾಡಿದೆ ಅಂತಾ ಥಾಮಸ್ ಆರೋಪಿಸಿದ್ದಾರೆ.
ಇನ್ನು, ವಿಧಾನಸಭಾ ಚುನಾವಣೆ ನಡೆಯಲಿರುವ 4 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ದಾಖಲೆ ಪ್ರಮಾಣದಲ್ಲಿ ನಗದು, ವಸ್ತುಗಳನ್ನ ವಶಪಡಿಸಿಕೊಂಡಿರೋದಾಗಿ ಚುನಾವಣಾ ಆಯೋಗ ತಿಳಿಸಿದೆ. 4 ರಾಜ್ಯಗಳು ಹಾಗೂ ಪುದುಚೇರಿಯಲ್ಲಿ ಈವರೆಗೂ 331 ಕೋಟಿ ರೂಪಾಯಿ ಮೊತ್ತದ ವಸ್ತು ವಶಕ್ಕೆ ಪಡೆದಿದ್ದಾಗಿ ಆಯೋಗ ಹೇಳಿದೆ. ತಮಿಳುನಾಡಿನಲ್ಲಿ ಗರಿಷ್ಠ 127.64 ಕೋಟಿ, ಪಶ್ಚಿಮ ಬಂಗಾಳದಲ್ಲಿ 112.59 ಕೋಟಿ ಹಣವನ್ನ ವಶಕ್ಕೆ ಪಡೆಯಲಾಗಿದೆ.
ಒಟ್ನಲ್ನಿ, ದಿನದಿಂದ ದಿನಕ್ಕೆ ಪಂಚ ರಾಜ್ಯಗಳ ಚುನಾವಣಾ ಅಖಾಡ ಕಾವೇರ್ತಿದೆ. ಪ್ರಚಾರದ ಅಖಾಡದಲ್ಲಿ ಬಿಜೆಪಿ-ಕಾಂಗ್ರೆಸ್ ಜೊತೆಗೆ ಪ್ರಾದೇಶಿಕ ಪಕ್ಷಗಳೂ ಕೂಡ ಸದ್ದು ಮಾಡ್ತಿದ್ದು, ಅಧಿಕಾರದ ಗದ್ದುಗೆಗಾಗಿ ಭಾರೀ ಪೈಪೋಟಿ ನಡೆಸಿವೆ.