ಕಲಬುರಗಿ : ಪ್ರತಿಭಟಿಸಿ,ಇಲ್ಲವೇ ರಾಜೀನಾಮೆ ನೀಡಿ ಸಂಸದರಿಗೆ ಬಿಆರ್ ಪಾಟೀಲ ಆಗ್ರಹ
ಕಲಬುರಗಿ : ಕಲಬುರಗಿಗೆ ಬರಬೇಕಿದ್ದ ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ ಅನೇಕ ಯೋಜನೆಗಳು ಕೈ ತಪ್ಪಿ ಹೋಗಿವೆ. ಸಂಸದ ಡಾ ಉಮೇಶ ಜಾಧವ ಅವರು ಇದರ ವಿರುದ್ಧ ಪ್ರತಿಭಟಿಸಬೇಕು ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಮಾಜಿ ಉಪಸಭಾಪತಿ,ಅಳಂದ ಮಾಜಿ ಶಾಸಕ ಬಿ.ಆರ್ ಪಾಟೀಲ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಏಮ್ಸ್, ಕೌಶಲ್ಯ ಶ್ರೇಷ್ಠತೆಯ ಕೇಂದ್ರ,ಕೇಂದ್ರ ಆಹಾರ ಪರಿವೀಕ್ಷಣಾ ಘಟಕ, ಜವಳಿ ಪಾರ್ಕು,ನಿಮ್ಝ, ರೈಲ್ವೆ ಕೋಚ್ ಫ್ಯಾಕ್ಟರಿ ಮೊದಲಾದ ಯೋಜನೆಗಳು ಕಲಬುರಗಿಯಿಂದ ಕೈ ಜಾರಿವೆ.
ಸೊಲಾಪುರ-ಕಲಬುರಗಿ -ಶಮ್ಸಾಬಾದ್,ಲಾತೂರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಯೋಜನೆ ಯುಪಿಎ ಸರ್ಕಾರದಲ್ಲಿ ಸರ್ವೇ ಆಗಿದ್ದು ಕಾಗದದಲ್ಲಿಯೇ ಉಳಿದಿವೆ.
ಇಷ್ಟೆಲ್ಲ ಅನ್ಯಾಯ ಆಗುತ್ತಿದ್ದರೂ ಸುಮ್ಮನಿರುವ ಸಂಸದರು ರಾಜೀನಾಮೆ ಕೊಟ್ಟು ಹೋರಾಟಕ್ಕಿಳಿದರೆ ನಾವು ಬೆಂಬಲಕ್ಕೆ ನಿಲ್ಲುತ್ತೇವೆ. ನಮ್ಮ ಮನವಿಗೆ ಸಂಸದರು ಸ್ಪಂದಿಸದಿದ್ದರೆ ಅವರ ಕಚೇರಿ ಎದರು ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದರು.
26 ರಂದು ಸಭೆ:
ಪ್ರಸ್ತುತ ವಿದ್ಯಮಾನಗಳ ಕುರಿತು ಚರ್ಚಿಸಲು ಮಾ.26 ರಂದು ಕನ್ನಡಭವನದಲ್ಲಿ ಸಮಾನಮನಸ್ಕರ ಸಭೆ ಕರೆಯಲಾಗಿದೆ.ಎಪ್ರಿಲ್ ನಲ್ಲಿ ನಗರದಲ್ಲಿ ಸರ್ವ ಪಕ್ಷಗಳ ಸಭೆ ಕರೆಯುವ ಉದ್ದೇಶವಿದ್ದು,ಧಾರ್ಮಿಕ ಮುಖಂಡರು ಸೇರಿದಂತೆ ವಿವಿಧ ಕ್ಷೇತ್ರದವರನ್ನು ಆಹ್ವಾನಿಸಲಾಗುವದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರೊ ಆರ್.ಕೆ ಹುಡಗಿ, ಶೌಕತ್ ಅಲಿ ಆಲೂರ,ದತ್ತಾತ್ರೇಯ ಇಕ್ಕಳಕಿ,ಗಣೇಶ ಪಾಟೀಲ ಉಪಸ್ಥಿತರಿದ್ದರು.