ಜಗತ್ತಿನ ಬಲಿಷ್ಠ ಮಿಲಿಟರಿ ಪಡೆಗಳಲ್ಲಿ ಭಾರತಕ್ಕೆ 4ನೇ ಸ್ಥಾನ: ಮಿಲಿಟರಿ ಡೈರೆಕ್ಟ್ ವರದಿ

ನವದೆಹಲಿ: ಜಗತ್ತಿನ ಬಲಿಷ್ಠ ಮಿಲಿಟರಿ ಪಡೆಗಳಲ್ಲಿ ಭಾರತೀಯ ಸೇನೆ ನಾಲ್ಕನೇ ಸ್ಥಾನದಲ್ಲಿದೆ ಎಂದು ಮಿಲಿಟರಿ ಡೈರೆಕ್ಟ್ ವರದಿ ಹೇಳಿದೆ.

ಮಿಲಿಟರಿ ಡೈರೆಕ್ಟ್’ ವೆಬ್ಸೈಟ್ ಬಿಡುಗಡೆ ಮಾಡಿರುವ ಅಧ್ಯಯನ ವರದಿ ಪ್ರಕಾರ ಇಷ್ಟು ದಿನ ಜಗತ್ತಿನ ಸೂಪರ್ ಪವರ್ ರಾಷ್ಟ್ರ ಎಂದೇ ಕರೆಸಿಕೊಳ್ಳುತ್ತಿದ್ದ ಅಮೆರಿಕ ಸೇನೆ ಇದೀಗ 2ನೇ ಸ್ಥಾನಕ್ಕೆ ಕುಸಿದಿದ್ದು, ಅಚ್ಚರಿ ಬೆಳವಣಿಗೆಯಲ್ಲಿ ಚೀನಾ ಸೇನೆ ಅಗ್ರ ಸ್ಥಾನಕ್ಕೇರಿದೆ. ರಕ್ಷಣಾ ಕ್ಷೇತ್ರಕ್ಕೆ ಭಾರೀ ಅನುದಾನ ಮೀಸಲಿಡುವ ಹೊರತಾಗಿಯೂ ವಿಶ್ವದ 10 ಬಲಿಷ್ಟ ಸೇನೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ 79 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ.  ಭಾರತದ ಸೇನಾಪಡೆ ವಿಶ್ವದ ನಾಲ್ಕನೇ ಬಲಿಷ್ಟ ಸೇನೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪಟ್ಟಿಯಲ್ಲಿ 69 ಅಂಕ ಪಡೆದಿರುವ ರಷ್ಯಾ ಸೇನೆ ಮೂರನೇ ಸ್ಥಾನದಲ್ಲಿದ್ದು, 61 ಅಂಕ ಪಡೆದಿರುವ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಉಳಿದಂತೆ ಫ್ರಾನ್ಸ್ 58 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ಬ್ರಿಟನ್ 43 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಸರ್ವಶ್ರೇಷ್ಟ ಮಿಲಿಟರಿ ಬಲದ ಸೂಚ್ಯಂಕ’ ಅಧ್ಯಯನ ವರದಿಯಲ್ಲಿ ರಕ್ಷಣಾ ಕ್ಷೇತ್ರಕ್ಕೆ ಅನುದಾನ, ಸಕ್ರಿಯ ಮತ್ತು ಸಕ್ರಿಯವಲ್ಲದ ಸೇನಾ ಸಿಬಂದಿಗಳ ಸಂಖ್ಯೆ, ವಾಯುಪಡೆ, ನೌಕಾಬಲ, ಭೂಸೇನೆ ಮತ್ತು ಪರಮಾಣು ಶಸ್ತ್ರಗಳ ಸಂಪನ್ಮೂಲ, ಸರಾಸರಿ ವೇತನ, ಆಯುಧಗಳ ತೂಕವನ್ನು ಲೆಕ್ಕ ಹಾಕಲಾಗಿದೆ. ಒಟ್ಟು 100 ಅಂಕಗಳಲ್ಲಿ 82 ಅಂಕ ಗಳಿಸಿದ ಚೀನಾ ಅಗ್ರಸ್ಥಾನ ಪಡೆದಿದೆ. ಅಮೆರಿಕದ ಬಳಿ 14,441 ಯುದ್ಧವಿಮಾನಗಳಿದ್ದರೆ ರಷ್ಯಾದ ಬಳಿ 4,682 ಮತ್ತು ಚೀನಾದ ಬಳಿ 3,587 ಯುದ್ಧವಿಮಾನಗಳಿವೆ. ರಷ್ಯಾದ ಬಳಿ ಯುದ್ಧಟ್ಯಾಂಕ್ ಮತ್ತಿತರ ಭೂಸೇನೆಯಲ್ಲಿ ಬಳಸುವ 54,866 ವಾಹನಗಳಿದ್ದರೆ ಅಮೆರಿಕದ ಬಳಿ 50,326, ಚೀನಾದ ಬಳಿ 41,641 ವಾಹನಗಳಿವೆ. ಚೀನಾದ ಬಳಿ 406 ಯುದ್ಧನೌಕೆಗಳಿದ್ದರೆ, ರಶ್ಯಾದ ಬಳಿ 278 ಹಾಗೂ ಭಾರತ ಮತ್ತು ಅಮೆರಿಕದ ಬಳಿ 202 ಯುದ್ಧನೌಕೆಗಳಿವೆ

ಬಜೆಟ್ ಅನುದಾನ, ಸೇನಾ ಸಿಬಂದಿ, ವಾಯುಪಡೆ ಮತ್ತು ನೌಕಾಸೇನೆಯ ಬಲವನ್ನು ಪರಿಗಣಿಸಿದರೆ ಕಾಲ್ಪನಿಕ ಸೂಪರ್ ಸಂಘರ್ಷದಲ್ಲಿ ಚೀನಾ ವಿಶ್ವದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ರಕ್ಷಣಾ ಕ್ಷೇತ್ರಕ್ಕೆ ಬಜೆಟ್ನಲ್ಲಿ ಅನುದಾನ ಮೀಸಲಿಡುವ ವಿಶ್ವದ ಪ್ರಮುಖ ದೇಶಗಳಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದ್ದು ವಾರ್ಷಿಕ 732 ಬಿಲಿಯನ್ ಡಾಲರ್ ಅನುದಾನ ಮೀಸಲಿಡುತ್ತದೆ. ಆ ಬಳಿಕದ ಸ್ಥಾನದಲ್ಲಿರುವ ಚೀನಾ ಬಜೆಟ್ನಲ್ಲಿ ವಾರ್ಷಿಕವಾಗಿ 261 ಬಿಲಿಯನ್ ಡಾಲರ್, ಮೂರನೇ ಸ್ಥಾನದಲ್ಲಿರುವ ಭಾರತ ವಾರ್ಷಿಕ 71 ಬಿಲಿಯನ್ ಡಾಲರ್ ಅನುದಾನ ಮೀಸಲಿಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಯುದ್ಧ ಸಂಭವಿಸಿದರೆ ಗೆಲುವು ಯಾರಿಗೆ ?
ಒಂದು ವೇಳೆ ಯುದ್ಧ ಸಂಭವಿಸಿದರೆ ಚೀನಾವು ತನ್ನಲ್ಲಿರುವ ಬಲಿಷ್ಟ ನೌಕಾಪಡೆಯಿಂದಾಗಿ ಗೆಲುವು ಪಡೆಯುತ್ತದೆ. ಅಮೆರಿಕದ ಬಳಿಯಿರುವ ಸಶಕ್ತ ವಾಯುಪಡೆ ಆ ದೇಶಕ್ಕೆ ಗೆಲುವು ತಂದುಕೊಡುತ್ತದೆ. ರಷ್ಯಾ ಭೂಸೇನೆಯಿಂದಾಗಿ ಗೆಲುವು ಪಡೆಯಲಿದೆ ಎಂದು ‘ಮಿಲಿಟರಿ ಡೈರೆಕ್ಟ್’ ವೆಬ್ಸೈಟ್ ವರದಿ ಮಾಡಿದೆ. 14,141 ವಿಮಾನಗಳಿರುವ ಅಮೆರಿಕ ವೈಮಾನಿಕ ಯುದ್ಧದಲ್ಲಿ ಮೇಲುಗೈ ಸಾಧಿಸಬಹುದು. ರಷ್ಯಾದಲ್ಲಿ 4,682 ಮತ್ತು ಚೀನಾದಲ್ಲಿ 3,587 ವಿಮಾನಗಳಿವೆ. ಭೂಸೇನೆಯು ಭಾಗಿಯಾಗುವ ಯುದ್ಧಗಳಲ್ಲಿ ಬಳಕೆಯಾಗುವ 54,866 ಯುದ್ಧ ವಾಹನಗಳು ರಷ್ಯಾದಲ್ಲಿವೆ. ಇದು ವಿಶ್ವದಲ್ಲಿಯೇ ಅತಿಹೆಚ್ಚು. 50,326 ಯುದ್ಧವಾಹನಗಳೊಂದಿಗೆ ಅಮೆರಿಕ ಮತ್ತು 41,641 ಯುದ್ಧವಾಹನಗಳೊಂದಿಗೆ ಚೀನಾ ನಂತರದ ಸ್ಥಾನಗಳಲ್ಲಿವೆ. ಚೀನಾ ಬಳಿ 406 ಯುದ್ಧನೌಕೆಗಳಿದ್ದರೆ, ರಷ್ಯಾ ಬಳಿ 278 ಮತ್ತು ಅಮೆರಿಕ ಬಳಿ 202 ಯುದ್ಧನೌಕೆಗಳಿವೆ. ಭಾರತದ ನೌಕಾಪಡೆ ಬಳಿ ಇರುವ ಯುದ್ಧನೌಕೆಗಳ ಸಂಖ್ಯೆಯೂ 202 ಎಂಬುದು ಗಮನಾರ್ಹ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *