By-Elections – ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆ: ಇಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ
ಬೆಂಗಳೂರು(ಮಾ. 23): ಮುಂದಿನ ತಿಂಗಳು 17ರಂದು ನಡೆಯಲಿರುವ ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಆರಂಭಗೊಂಡಿದೆ. ಮಾರ್ಚ್ 30ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶ ಇದೆ. ಕೆಲ ಕ್ಷೇತ್ರಗಳಿಗೆ ಪಕ್ಷಗಳಿಂದ ಅಭ್ಯರ್ಥಿಗಳು ಇನ್ನೂ ಅಂತಿಮಗೊಂಡಿಲ್ಲ. ಬಿಜೆಪಿಯಿಂದ ಮೂರೂ ಕ್ಷೇತ್ರಗಳಿಗೆ ಇಂದು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷ ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಿದೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಹೆಸರನ್ನು ಹೈಕಮಾಂಡ್ಗೆ ಕಳುಹಿಸಿದೆ. ಆದರೆ, ಜಾರಕಿಹೊಳಿ ಅವರು ಸ್ಪರ್ಧೆಗೆ ಇನ್ನೂ ಪೂರ್ಣ ಮನಸ್ಸು ಮಾಡಿಲ್ಲ. ಇಂದು ವರಿಷ್ಠರೊಂದಿಗೆ ಮಾತನಾಡಿ ಅವರು ನಿರ್ಧರಿಸಲಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರವು ಬಿಜೆಪಿಯ ಸುರೇಶ್ ಅಂಗಡಿ ನಿಧನದಿಂದ ತೆರವುಗೊಂಡಿದೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್ನ ಬಿ ನಾರಾಯಣರಾವ್ ನಿಧನದಿಂದ ಖಾಲಿ ಉಳಿದಿದೆ. ಮಸ್ಕಿ ಕ್ಷೇತ್ರ ಕಳೆದ ವರ್ಷ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದಾಗಿನಿಂದಲೂ ಖಾಲಿ ಇದೆ. ಹೀಗಾಗಿ, ಈ ಮೂರು ಕ್ಷೇತ್ರಗಳಿಗೆ ಈಗ ಉಪಚುನಾವಣೆ ಆಗುತ್ತಿದೆ. ಇದೇ ಜನವರಿಯಲ್ಲಿ ಜೆಡಿಎಸ್ ಶಾಸಕ ಎಂಸಿ ಮನಗೂಳಿ ನಿಧನದಿಂದ ತೆರವಾಗಿರುವ ಸಿಂದಗಿ ಕ್ಷೇತ್ರಕ್ಕೂ ಇದೇ ಅವಧಿಯಲ್ಲಿ ಉಪಚುನಾವಣೆ ನಡೆಯುವ ನಿರೀಕ್ಷೆ ಇತ್ತು. ಆದರೆ, ಕಾರಣಾಂತರದಿಂದ ಚುನಾವಣಾ ಆಯೋಗವು ಸಿಂದಗಿ ಉಪಚುನಾವಣೆಯನ್ನು ಇನ್ನೂ ಘೋಷಣೆ ಮಾಡಿಲ್ಲ.
ಬಸವಕಲ್ಯಾಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ದಿವಂಗತ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಮಸ್ಕಿ ಕ್ಷೇತ್ರದಲ್ಲಿ ಬಸವನಗೌಡ ಆರ್ ತುರವಿಹಾಳ ಅವರು ಕೈ ಅಭ್ಯರ್ಥಿಯಾಗಿದ್ದಾರೆ. ಈ ಮುಂಚೆ ಬಿಜೆಪಿಯಲ್ಲಿದ್ದ ತುರವಿಹಾಳ ಅವರು ಕಳೆದ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ ವಿರುದ್ಧ ಅಲ್ಪಮತಗಳ ಅಂತರದಿಂದ ಸೋಲಪ್ಪಿದ್ದರು. ಪ್ರತಾಪ್ ಗೌಡ ಅವರು ಬಿಜೆಪಿಗೆ ವಲಸೆ ಬಂದ ಹಿನ್ನೆಲೆಯಲ್ಲಿ ತುರವಿಹಾಳ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಈಗ ಬಸವಕಲ್ಯಾಣ ಮತ್ತು ಮಸ್ಕಿ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅನುಕಂಪದ ಮೇಲೆ ಗೆಲ್ಲುವ ಉತ್ಸಾಹದಲ್ಲಿದೆ.
ಜೆಡಿಎಸ್ ಪಕ್ಷ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಸಯದ್ ಯಾಸ್ರಾಬ್ ಅಲಿ ಖದ್ರಿ ಅವರನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಮಸ್ಕಿ ಮತ್ತು ಬೆಳಗಾವಿ ಕ್ಷೇತ್ರಗಳಿಗೆ ಸದ್ಯದಲ್ಲೇ ಅಭ್ಯರ್ಥಿ ಪ್ರಕಟಿಸಲಿದೆ.
ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ಸ್ಪರ್ಧಿಸಿದರೆ ಬಹಳಷ್ಟು ಬಿಸಿ ಏರುವುದು ನಿಶ್ಚಿತ. ಬಿಜೆಪಿಯನ್ನು ಸೋಲಿಸಲೆಂದೇ ಪ್ರಬಲ ನಾಯಕ ಸತೀಶ್ ಜಾರಕಿಹೊಳಿಯನ್ನು ನಿಲ್ಲಿಸುವುದು ಕಾಂಗ್ರೆಸ್ನ ರಣತಂತ್ರ. ಆದರೆ, ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿರುವ ಸತೀಶ್ ಜಾರಕಿಹೊಳಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ವರಿಷ್ಠರ ಜೊತೆ ಮಾತನಾಡಿ ಅವರು ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.ಇನ್ನು, ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ಗಾಗಿ ಬಿಜೆಪಿಯೊಳಗೆ ಭಾರೀ ಪೈಪೋಟಿ ಇದೆ. 15ಕ್ಕೂ ಹೆಚ್ಚು ಮಂದಿ ಟಿಕೆಟ್ಗಾಗಿ ಪ್ರಯತ್ನ ಪಟ್ಟಿದ್ದರು. ಆದರೆ, ರಾಜ್ಯ ಘಟಕದಿಂದ 6 ಮಂದಿಯ ಹೆಸರನ್ನು ಹೈಕಮಾಂಡ್ಗೆ ಕಳುಹಿಸಲಾಗಿದೆ. ಇದರಲ್ಲಿ ಅಂತಿಮವಾಗಿ ಯಾರಿಗೆ ವರಿಷ್ಠರು ಮಣೆ ಹಾಕುತ್ತಾರೆ ಎಂಬುದು ಇಂದು ಸಂಜೆಯೊಳಗೆ ಗೊತ್ತಾಗುವ ಸಾಧ್ಯತೆ ಇದೆ.
ರಾಜ್ಯದ ಈ ಮೂರು ಕ್ಷೇತ್ರಗಳ ಜೊತೆಗೆ ಆಂಧ್ರದ ತಿರುಪತಿ ಲೋಕಸಭೆ ಕ್ಷೇತ್ರ ಹಾಗೂ 10 ರಾಜ್ಯಗಳಲ್ಲಿ 12 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯುತ್ತಿವೆ. ಮಾರ್ಚ್ 30ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 3ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಏಪ್ರಿಲ್ 17ರಂದು ಮತದಾನ ಆಗಲಿದೆ. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮೇ 2ರಂದೇ ಈ ಉಪಚುನಾವಣೆಗಳಿಗೂ ಫಲಿತಾಂಶ ಪ್ರಕಟವಾಗಲಿದೆ.