ವಿಧಾನಸಭೆಯಲ್ಲಿ ಸಚಿವರ ಸಿಡಿ ಕೋಲಾಹಲ…! ಸ್ಪೀಕರ್ ಕಾಗೇರಿಯವರಿಂದ ಸಂಧಾನ ಸರ್ಕಸ್…!
ಕಳೆದ ನಿನ್ನೆಯಿಂದ ವಿಧಾಸನಭೆಯಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಕುರಿತಂತೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಸಚಿವರಾಗಿ ಕೋರ್ಟ್ ಮೊರೆ ಹೋದಂತ 6 ಸಚಿವರ ರಾಜೀನಾಮೆಗೂ ವಿಪಕ್ಷಗಳು ಒತ್ತಾಯಿಸಿವೆ. ಅಲ್ಲದೇ ಪ್ರಕರಣವನ್ನು ಎಸ್‌ಐಟಿ ಬದಲಾಗಿ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನೇಮಕ ಮಾಡಿದಂತ ಸಮಿತಿಯಿಂದ ತನಿಖೆ ನಡೆಸುವಂತೆಯೂ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದಾರೆ. ಇಂದು ಸದನ ಆರಂಭವಾಗುತ್ತಿದ್ದಂತೆ ಸಿಡಿ ಹಿಡಿದು ಸದನದ ಭಾವಿಗೆ ಇಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದಾಗಿ, ಸ್ಪೀಕರ್ ಅವರು 10 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದ್ದಾರೆ.
ಇಂದು ರಾಜ್ಯ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ, ಸಿಡಿ ಹಿಡಿದು ವಿಧಾನಸಭೆಗೆ ಆಗಮಿಸಿದಂತ ಕಾಂಗ್ರೆಸ್ ಸದಸ್ಯರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರತಿಭಟನೆ ನಡೆಸಿದರು. ಲಜ್ಜೆಗೆಟ್ಟ ಸರ್ಕಾರ ಎಂಬುದಾಗಿ ಘೋಷಣೆ ಕೂಗಿ, ಸಚಿವರ ವಿರುದ್ಧವೂ ಆಕ್ರೋಶ ವ್ಯಕ್ತ ಪಡಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಶ್ನೋತ್ತರ ಕಲಾಪ ಮುಗಿದ ನಂತ್ರ ಚರ್ಚೆ ಮಾಡೋಣ ಎನ್ನುತ್ತಿದ್ದಂತೆಯೇ, ಕಾಂಗ್ರೆಸ್ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು, ರಾಜ್ಯ ಸರ್ಕಾರದ ವಿರುದ್ಧ, ಸಚಿವರು ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕಾರಣ, ಸದನದಲ್ಲಿ ಗದ್ದಲ ಕೋಲಾಹಲ ಉಂಟಾಯಿತು. ಹೀಗಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, 10 ನಿಮಿಷ ಕಲಾಪವನ್ನು ಮುಂದೂಡಿದ್ದಾರೆ. ಈ ಮೂಲಕ ಇಂದು ಕೂಡ ವಿಧಾನಸಭೆಯಲ್ಲಿ ಸಿಡಿ ಸದ್ದು, ಜೋರಾಗಿಯೇ ನಡೆಯಲಿದೆ ಎನ್ನಲಾಗಿದೆ.