ಕಲಬುರಗಿ : 371(ಜೆ) ಕಲಂ ಮುಂಬಡ್ತಿ ನಿಯಮಗಳ ತಿದ್ದುಪಡಿಗೆ ಆಗ್ರಹಿಸಿ ಅಹಿಂದ್ ಚಿಂತಕರ ಪ್ರತಿಭಟನೆ

ಕಲಬುರಗಿ : ಕಲ್ಯಾಣ ಕರ್ನಾಟಕಕ್ಕೆ ಜಾರಿಯಾಗಿರುವ 371(ಜೆ) ಕಲಂನಡಿಯ ಮುಂಬಡ್ತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಂಗಳವಾರ ಅಹಿಂದ್ ಚಿಂತಕರ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಹೈದ್ರಾಬಾದ್ ಕರ್ನಾಟಕ ಹೊರತುಪಡಿಸಿ 24 ಜಿಲ್ಲೆಗಳಲ್ಲಿ ಶೇಕಡಾ 8ರಷ್ಟು ನೇಮಕಾತಿ ಹಾಗೂ ಮೀಸಲಾತಿಯನ್ನು ಕಲ್ಯಾಣ ಕರ್ನಾಟಕದವರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಹೈದ್ರಾಬಾದ್ ಕರ್ನಾಟಕವು ರಾಜ್ಯದಲ್ಲಿಯೇ ಅತೀ ಹಿಂದುಳಿದ ಪ್ರದೇಶವಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿದಿರುವುದರಿಂದ 2013ರಲ್ಲಿ ಕಲ್ಯಾಣ ಕರ್ನಾಟಕಕ್ಕೆ 371(ಜೆ) ಕಲಂನಡಿ ವಿಶೇಷ ಮೀಸಲಾತಿ ಸೌಲಭ್ಯ ಸಿಕ್ಕಿದೆ. ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿನ ಮೀಸಲಾತಿ ಸೌಲಭ್ಯವು ಕಲ್ಯಾಣ ಕರ್ನಾಟಕೇತರ ಜನರಿಗೆ ಉಪಯೋಗ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
371(ಜೆ) ಕಲಂನ ಮುಂಬಡ್ತಿಯ ನಿಯಮಗಳು ಕಲ್ಯಾಣ ಕರ್ನಾಟಕಕ್ಕೆ ಮಾರಕವಾಗಿ ಪರಿಣಮಿಸಿವೆ. ಈ ಭಾಗದ ಸರ್ಕಾರಿ ನೌಕರರು ಸೇವಾ ಹಿರಿತನದಲ್ಲಿ ಹತ್ತು ವರ್ಷಗಳ ಹಿರಿಯರಿದ್ದರೂ ಸಹ ಮುಂಬಡ್ತಿಯನ್ನು ಹೊಂದಿಲ್ಲ. ಆದಾಗ್ಯೂ, ಸೇವಾ ಹಿರಿತನದಲ್ಲಿ ಕಿರಿಯರು ಇರುವ ಕಲ್ಯಾಣ ಕರ್ನಾಟಕೇತರ ಸರ್ಕಾರಿ ನೌಕರರಿಗೆ ಮುಂಬಡ್ತಿ ದೊರೆಯುತ್ತಿದೆ ಎಂದು ಅವರು ಆರೋಪಿಸಿದರು.
371(ಜೆ) ಕಲಂನಡಿಯ ಮುಂಬಡ್ತಿ ನಿಯಮಗಳು ಅವೈಜ್ಞಾನಿಕವಾಗಿವೆ. ಇದರಿಂದ ನಮ್ಮ ಭಾಗದ ನೌಕರರಿಗೆ ಶೇಕಡಾ 15ರಷ್ಟು ಮೀಸಲಾತಿ ನೀಡುತ್ತಿರುವುದು ಸರಿಯೇ? ಎಂದು ಪ್ರಶ್ನಿಸಿರುವ ಅವರು, ಸೇವಾ ಹಿರಿತನದಲ್ಲಿ ಕಲ್ಯಾಣ ಕರ್ನಾಟಕದ (ಮೂಲ ವೃಂದ)ಕ್ಕಿಂತಲೂ ಹತ್ತರಿಂದ 12 ವರ್ಷ ಕಿರಿಯರಿದ್ದರೂ ಮುಂಬಡ್ತಿ ನೀಡುತ್ತಿರುವುದು ಈ ಭಾಗಕ್ಕೆ ಮಾಡಿದ ಬಹುದೊಡ್ಡ ಮೋಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ 371(ಜೆ) ಕಲಂನಡಿಯ ಮುಂಬಡ್ತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರುವಂತೆ, ಹೈದ್ರಾಬಾದ್ ಕರ್ನಾಟಕ ಹೊರತುಪಡಿಸಿ ಕರ್ನಾಟಕದ 24 ಜಿಲ್ಲೆಗಳಲ್ಲಿ ಶೇಕಡಾ 8ರಷ್ಟು ಮೀಸಲಾತಿ ಹಾಗೂ ಮುಂಬಡ್ತಿ ಮೀಸಲಾತಿ ಒದಗಿಸುವಂತೆ, ಹೈದ್ರಾಬಾದ್ ಕರ್ನಾಟಕದ 371(ಜೆ) ಕಲಂ ಉಪ ಸಮಿತಿಯ ಅಧ್ಯಕ್ಷರನ್ನು ಕೂಡಲೇ ನೇಮಕಾತಿ ಮಾಡುವಂತೆ, ಹೈದ್ರಾಬಾದ್ ಕರ್ನಾಟಕ ವಿಶೇಷ ಕೋಶ ಕಲಬುರ್ಗಿಗೆ ವರ್ಗಾಯಿಸುವಂತೆ ಒತ್ತಾಯಿಸಿದ ಅವರು, ಇಲ್ಲವಾದಲ್ಲಿ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೈಬಣ್ಣಾ ಜಮಾದಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಮೇಶ್ ಹಡಪದ್, ಸಂಜು ಹೊಡಲಕರ್, ಇಸ್ಮಾಯಿಲ್, ಶ್ರೀನಿವಾಸ್ ಗುತ್ತೇದಾರ್, ಯಶವಂತರಾವ್, ಸೂರ್ಯವಂಶಿ, ದಿಗಂಬರ್ ಕಾಡಪ್ಪಗೋಳ್, ಗಾಳೆಪ್ಪ ಅಂತಿ, ಪ್ರಕಾಶ್ ಬಿ., ಧನರಾಜ್ ಬಿ., ಶಿವಕುಮಾರ್, ಕೈಲಾಶ್ ಮೇಟಿ ಮುಂತಾದವರು ಪಾಲ್ಗೊಂಡಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *