67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ..! ಧನುಷ್, ಮನೋಜ್ ಬಾಜ್ಪೆ, ಕಂಗನಾಗೆ ಪ್ರಶಸ್ತಿ ಗರಿ..!
67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, 2019ನೇ ಸಾಲಿನ ಅತ್ಯುತ್ತಮ ಚಿತ್ರಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನ ಘೋಷಿಸಲಾಗಿದೆ. ಕಳೆದ ವರ್ಷ ಕೊರೋನಾ ಹಾವಳಿ ಹಿನ್ನಲೆಯಲ್ಲಿ ಪ್ರಶಸ್ತಿಗಳನ್ನ ಘೋಷಣೆ ಮಾಡಿರಲಿಲ್ಲ. ಧನುಷ್ ಮತ್ತು ಮನೋಜ್ ಬಾಜ್ಪೆ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದ್ರೆ, ಕಂಗನಾ ರಾಣಾವತ್ಗೆ ಮತ್ತೊಮ್ಮೆ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿದೆ. ಕನ್ನಡದ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೂ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
2019ನೇ ಸಾಲಿನ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನ ಘೋಷಿಸಲಾಗಿದ್ದು, ಅಸುರನ್ ಚಿತ್ರದ ನಟನೆಗಾಗಿ ಧನುಷ್ ಮತ್ತು ಬೋಂಸ್ಲೆ ಚಿತ್ರದ ನಟನೆಗಾಗಿ ಮನೋಜ್ ಬಾಜ್ಪೆ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಮಣಿಕರ್ಣಿಕಾ ಮತ್ತು ಪಂಗಾ ಚಿತ್ರಗಳ ಮನೋಜ್ಞ ನಟನೆಗಾಗಿ ಕಂಗನಾ ರಾಣಾವತ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಕೊರೋನಾ ಹಾವಳಿ ಕಾರಣ ಕಳೆದ ವರ್ಷ ಘೋಷಣೆಯಾಗಬೇಕಿದ್ದ ಪ್ರಶಸ್ತಿಗಳನ್ನ ಈ ವರ್ಷ ಘೋಷಿಸಲಾಗಿದೆ.
2018ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡಕ್ಕೆ ಸಿಂಹಪಾಲು ಲಭಿಸಿತ್ತು. ಆದ್ರೆ, 2019ನೇ ಸಾಲಿನಲ್ಲಿ ಅವನೇ ಶ್ರೀಮನ್ನಾರಾಯಣ ಮತ್ತು ಅಕ್ಷಿ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಸಿಕ್ಕಿದೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ಸಂಯೋಜನೆಗಾಗಿ ವಿಕ್ರಂ ಮೋರ್ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಕಳೆದ ಬಾರಿ ಕೆಜಿಎಫ್ ಚಾಪ್ಟರ್-1 ಚಿತ್ರದ ಸ್ಟಂಟ್ಸ್ಗಾಗಿ ವಿಕ್ರಂ ಮೋರ್ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ್ದರು. ಸತತ ಎರಡನೇ ಬಾರಿ ಅವರಿಗೆ ರಾಷ್ಟ್ರಪ್ರಶಸ್ತಿ ಒಲಿದಿರೋದು ವಿಶೇಷ.
ಮನೋಜ್ ಕುಮಾರ್ ನಿರ್ದೇಶನದ ‘ಅಕ್ಷಿ’ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿಚೋರೆಗೆ ಅತ್ಯುತ್ತಮ ಹಿಂದಿ ಸಿನಿಮಾ ಪ್ರಶಸ್ತಿ ಲಭಿಸಿದ್ರೆ, ಪಿಂಗಾರ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ವಿಶ್ವಾಸಂ ಚಿತ್ರದ ಸಂಗೀತಕ್ಕಾಗಿ ಡಿ. ಇಮ್ಮಾನ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಸಾಕಷ್ಟು ವಿಭಾಗಗಳಲ್ಲಿ ಸಾಕಷ್ಟು ಪ್ರತಿಭಾವಂತರು 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.