Bharat Bandh: ನಾಳೆ ಭಾರತ್ ಬಂದ್; ಕರ್ನಾಟಕದಲ್ಲಿ ಯಾವೆಲ್ಲ ಸೇವೆಗಳು ವ್ಯತ್ಯಯ?

ಬೆಂಗಳೂರು (ಮಾ. 25): ಕೇಂದ್ರ ಸರ್ಕಾರದ ಭೂ ಸುಧಾರಣಾ ಮಸೂದೆಗಳನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸಿ ನಾಳೆ (ಮಾರ್ಚ್ 26)ಭಾರತ್ ಬಂದ್​ಗೆ ಕರೆ ನೀಡಲಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ನಾಳೆಗೆ 4 ತಿಂಗಳಾಗುತ್ತದೆ. ಹೀಗಾಗಿ, ನಾಳೆ ಭಾರತ್ ಬಂದ್​ಗೆ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಕರೆ ನೀಡಿದೆ. ಕರ್ನಾಟಕದಲ್ಲೂ ಭಾರತ್ ಬಂದ್ ಯಶಸ್ವಿಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸಂಯುಕ್ತ ಹೋರಾಟ- ಕರ್ನಾಟಕ ಸಮಿತಿ ವತಿಯಿಂದ ಮನವಿ ಮಾಡಲಾಗಿದೆ.

ಕರ್ನಾಟಕದಲ್ಲೂ ಬಂದ್ ಯಶಸ್ವಿಗೊಳಿಸುವಂತೆ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯಿಂದ ಮನವಿ ಮಾಡಲಾಗಿದೆ. ರಾಜ್ಯದ ಎಲ್ಲ ನಾಗರಿಕರು ಬಂದ್​ಗೆ ಬೆಂಬಲ ಸೂಚಿಸುವಂತೆ ಸಂಯುಕ್ತ ಹೋರಾಟ ಕರ್ನಾಟಕದ ಸಂಯೋಜಕ ಮತ್ತು ರೈತ ಮುಖಂಡ ಬಡಗಲಪುರ ನಾಗೇಂದ್ರ ಮನವಿ ಮಾಡಿದ್ದಾರೆ. ಮಾರ್ಚ್ 26ಕ್ಕೆ ದೆಹಲಿ ಸುತ್ತಮುತ್ತ ರೈತರ ಚಳುವಳಿ ಆರಂಭವಾಗಿ 4 ತಿಂಗಳು ಕಳೆಯುತ್ತದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ರೈತರ ಹೋರಾಟಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ, ಸಂಯುಕ್ತ ಕಿಸಾನ್ ಮೋರ್ಚಾ ಭಾರತದಾದ್ಯಂತ ಬಂದ್ ಗೆ ಕರೆ ನೀಡಿದೆ. ರಾಜ್ಯದ ಎಲ್ಲ ನಾಗರೀಕರು ಬಂದ್​ಗೆ ಬೆಂಬಲ ಸೂಚಿಸಬೇಕು. ಜೊತೆಗೆ ವ್ಯಾಪಾರಸ್ಥರು, ಕಾರ್ಮಿಕರು, ಆಟೋ ಚಾಲಕರು, ಸೇರಿದಂತೆ ಎಲ್ಲ ಉದ್ದಿಮೆಗಳು ಸ್ವಯಂಪ್ರೇರಿತರಾಗಿ ಬಂದ್ ಗೆ ಬೆಂಬಲ ಸೂಚಿಸಬೇಕು. ಬೆಂಬಲ ಸೂಚಿಸುವ ಮೂಲಕ ಅನ್ನದಾರಿಗೆ ಒತ್ತಾಸೆಯಾಗಿ ನಿಲ್ಲಬೇಕು. ಅನ್ನದಾತನನ್ನು ಉಳಿಸಿಕೊಳ್ಳಬೇಕು, ಎಲ್ಲ ಕನ್ನಡಪರ ಸಂಘಟನೆಗಳು ಕೂಡ ಬಂದ್​ಗೆ ಬೆಂಬಲ ಸೂಚಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯಿಸಿದೆ.

ರೈತರು ಕರೆದಿರುವ ಕರ್ನಾಟಕ ಬಂದ್ ಗೆ ರಾಜ್ಯ ಬೀದಿ ಬದಿ ವ್ಯಾಪಾರಿಗಳಿಂದ ಕೇವಲ ನೈತಿಕ ‌ಬೆಂಬಲ ವ್ಯಕ್ತವಾಗಿದೆ. ಬೀದಿ ವ್ಯಾಪಾರಿಗಳು ಕೋವಿಡ್ ನಿಂದ ಸಂಕಷ್ಟದಲ್ಲಿದ್ದಾರೆ. ರೈತರ ಹೋರಾಟಕ್ಕೆ ಬೀದಿ ಬದಿ ವ್ಯಾಪಾರಿಗಳ ಬೆಂಬಲವಿದೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ.

ನಾಳೆ ರೈತರು ಭಾರತ್ ಬಂದ್​ಗೆ ಕರೆ ನೀಡಿದ್ದಾರೆ. ಅದಕ್ಕೆ ರಾಷ್ಟ್ರೀಯ ವಾಹನ ಚಾಲಕರ ಒಕ್ಕೂಟದಿಂದ ಸಂಪೂರ್ಣ ಬೆಂಬಲ ನೀಡಲಾಗುತ್ತದೆ. ದೇಶದ ಅನ್ನದಾತರಿಗೆ ಅನ್ಯಾಯವಾದ್ರೆ ಸಹಿಸುವುದಕ್ಕೆ ಆಗೋದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಮ್ಮ ಧಿಕ್ಕಾರವಿದೆ. ನಾಳೆ ನಾವು ವಾಣಿಜ್ಯ ಬಳಕೆಯ ವಾಹನಗಳನ್ನು ರೋಡಿಗಿಳಿಸುವುದಿಲ್ಲ ಎಂದು ರಾಷ್ಟ್ರೀಯ ವಾಹನ ಚಾಲಕರ ಒಕ್ಕೂಟದ ಅಧ್ಯಕ್ಷ ಸದಾನಂದ ಸ್ವಾಮಿ ಹೇಳಿದ್ದಾರೆ.
ನಾಳಿನ ಭಾರತ್ ಬಂದ್ ಆದರ್ಶ ಆಟೋ ಸಂಘಟನೆ ಮತ್ತು ಬೆಂಗಳೂರು ಆಟೋ ಅಸೋಸಿಯೇಷನ್ ವತಿಯಿಂದ ನೈತಿಕ ಬೆಂಬಲ ಕೊಡುತ್ತೇವೆ. ಬೆಂಗಳೂರು ನಗರದಲ್ಲಿ ವಾಸ ಮಾಡುತ್ತಿರುವ ಬಹುತೇಕ ಕುಟುಂಬಗಳು ರೈತಾಪಿ ಕುಟುಂಬದಿಂದ ಬಂದಿರುವವರು. ಹಾಗಾಗಿ ಆಟೋಗಳನ್ನು ಮತ್ತು ಟ್ಯಾಕ್ಸಿಗಳನ್ನು ನಿಲ್ಲಿಸುವುದು ಚಾಲಕರ ಸ್ವಯಂ ಇಚ್ಛೆಗೆ ಬಿಟ್ಟಿದ್ದೇವೆ. ಈ‌ ಸಂದರ್ಭದಲ್ಲಿ ಸಂಘಟನೆಯ ಯಾವುದೇ ಒತ್ತಡವಿಲ್ಲ ಎಂದು ಆದರ್ಶ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *