ಸಿ.ಡಿ ರಾಜಕೀಯ: ಉಪಚುನಾವಣೆ ಮೇಲೆ ಬೀರುತ್ತಾ ಪರಿಣಾಮ
ಹೈಲೈಟ್ಸ್:
- ಉಪಚುನಾವಣೆ ಮೇಲೆ ಸಿ.ಡಿ ಬೀರುತ್ತಾ ಪರಿಣಾಮ
- ವರ್ಕೌಟ್ ಆಗುತ್ತಾ ಕಾಂಗ್ರೆಸ್ ತಂತ್ರಗಾರಿಕೆ
- ಪ್ರಚಾರದ ವೇಳೆ ಸಿ.ಡಿ ವಿಚಾರ ಪ್ರಸ್ತಾಪಕ್ಕೆ ಕಾಂಗ್ರೆಸ್ ಪ್ಲ್ಯಾನ್
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸದ್ಯ ರಮೇಶ್ ಜಾರಕಿಹೊಳಿ ಸಿ.ಡಿ ವಿಚಾರದ್ದೇ ಸದ್ದು. ಈ ನಡುವೆ ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆ ಕಾವು ತೀವ್ರಗೊಂಡಿದ್ದು ಸಿ.ಡಿ ಸದ್ದು ಚುನಾವಣೆಯ ಮೇಲೆ ಪರಿಣಾಮ ಬೀರುತ್ತಾ ಎಂಬುವುದು ಕುತೂಹಲ ಕೆರಳಿಸಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು ಮಾಡಬೇಕು ಹಾಗೂ ಹೈ ಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್ಐಟಿ ತನಿಖೆ ಆಗಬೇಕು ಎಂಬುವುದು ಕಾಂಗ್ರೆಸ್ ಬೇಡಿಕೆಯಾಗಿದೆ. ಇದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ವಿಧಾನಮಂಡಲದ ಉಭಯ ಸದನಗಳಲ್ಲಿ ಕಾಂಗ್ರೆಸ್ ಧರಣಿ ನಡೆಸಿತ್ತು.
ಸತತ ಮೂರು ದಿನಗಳ ಧರಣಿ ಹಿನ್ನೆಲೆಯಲ್ಲಿ ಸದನವನ್ನು ಅರ್ಧದಲ್ಲೇ ಮೊಟಕುಗೊಳಿಸಬೇಕಾದ ಪರಿಸ್ಥಿತಿ ನಿರ್ಮಾನವಾಗಿತ್ತು. ಇದೀಗ ಸದನದ ಹೊರಗೂ ಕಾಂಗ್ರೆಸ್ ಪ್ರತಿಭಟನೆ ಹಾಗೂ ಹೋರಾಟ ನಡೆಸಲು ನಿರ್ಧಾರ ಮಾಡಿದೆ.
ಮತ್ತೊಂದು ಕಡೆಯಲ್ಲಿ ಸುಧಾಕರ್ ಹೇಳಿಕೆಯೂ ಕಾಂಗ್ರೆಸ್ ಪಾಲಿಗೆ ರಾಜಕೀಯ ಅಸ್ತ್ರ ದೊರೆತಂತೆ ಆಗಿದ್ದು ಇದೇ ವಿಚಾರವನ್ನು ಇಟ್ಟುಕೊಂಡು ಮಹಿಳಾ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಯನ್ನು ನಡೆಸಿದ್ದರು. ಪತ್ರಿಕಾಗೋಷ್ಠಿಯ ಮೂಲಕ ಮಹಿಳಾ ಕಾಂಗ್ರೆಸ್ ಶಾಸಕರಿಯರು ಸುಧಾಕರ್ ನಡೆಯನ್ನು ಖಂಡಿಸಿದ್ದರು.
ಇದೀಗ ಉಪಚುನಾವಣೆಯಲ್ಲೂ ಸಿ.ಡಿ ಸದ್ದು ಮಾಡಲಿದೆ. ಅದರಲ್ಲೂ ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಉಪಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್ ಸಿ.ಡಿ ವಿಚಾರವನ್ನು ಪ್ರಸ್ತಾಪ ಮಾಡಿ ಬಿಜೆಪಿಗೆ ಮುಜುಗರ ಉಂಟು ಮಾಡಲು ನಿರ್ಧರಿಸಿದೆ. ಆದರೆ ಇದು ಎಷ್ಟರ ಮಟ್ಟಿದೆ ವರ್ಕೌಟ್ ಆಗಲಿದೆ ಎಂಬುವುದು ಮಾತ್ರ ಕುತೂಹಲ ಕೆರಳಿಸಿದೆ.