ಉಪಚುನಾವಣೆ: ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಗರಿಗೆದರಿದ ರಾಜಕೀಯ ಚಟುವಟಿಕೆ

ಹೈಲೈಟ್ಸ್‌:

  • ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆಗೆ ಅಭ್ಯರ್ಥಿ ಘೋಷಣೆ
  • ಮೂರು ಪಕ್ಷಗಳಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
  • ಕೋವಿಡ್‌ ಅಬ್ಬರದ ನಡುವೆಯೂ ತೀವ್ರಗೊಂಡ ಉಪಚುನಾವಣೆ ಕಾವು

ಬೆಂಗಳೂರು: ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳ ಹೆಸರು ಘೋಷಣೆ ಆಗಿದ್ದು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಂಗಳಾ ಸುರೇಶ್ ಅಂಗಡಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶರಣು ಸಲಗಾರ್ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರತಾಪ ಗೌಡ ಪಾಟೀಲ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್‌ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಮಲ್ಲಮ್ಮ, ಮಸ್ಕಿಗೆ ಬಸವನಗೌಡ ತುರವಿಹಾಳ ಅವರ ಹೆಸರನ್ನು ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಿದೆ. ಅದರ ಜೊತೆಗೆ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿಯವರನ್ನು ಅಭ್ಯರ್ಥಿಯನ್ನಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇನ್ನು ಜೆಡಿಎಸ್‌ನಿಂದ ಬಸವಕಲ್ಯಾಣ ಕ್ಷೇತ್ರದಲ್ಲಿ ಸೈಯದ್ ಯಶ್ರಬ್ ಅಲಿ ಖಾನ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಈಗಾಗಲೇ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಅಭ್ಯರ್ಥಿಗಳ ಹೆಸರು ಘೋಷಣೆ ಬೆನ್ನಲ್ಲೇ ಮೂರು ಕ್ಷೇತ್ರಗಳಲ್ಲಿ ಚುನಾವಣಾ ರಾಜಕೀಯ ಗರಿಗೆದರಿದೆ. ರಾಜ್ಯದಲ್ಲಿ ಸಿ.ಡಿ ತೀವ್ರವಾಗಿ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸತೀಶ್ ಜಾರಕಿಹೊಳಿ ವರ್ಸಸ್ ಮಂಗಳಾ ಸುರೇಶ್ ಅಂಗಡಿ ನಡುವಿನ ಸ್ಪರ್ಧೆ ಎರಡು ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಚುನಾವಣೆಯಲ್ಲಿ ಸಿ.ಡಿ ವಿಚಾರವೂ ಪ್ರಮುಖ ಪಾತ್ರವನ್ನು ವಹಿಸುವ ಸಾಧ್ಯತೆ ಇದೆ. ಸದನದಲ್ಲಿ ಸಿ.ಡಿ ಕುರಿತಾಗಿ ಗದ್ದಲ ಉಂಟು ಮಾಡಿದ ಕಾಂಗ್ರೆಸ್ ಇದೀಗ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸಿ.ಡಿ ವಿಚಾರ ಪ್ರಸ್ತಾಪ ಮಾಡಿ ಬಿಜೆಪಿಗೆ ಮುಜುಗರ ಉಂಟು ಮಾಡುವ ತಂತ್ರದಲ್ಲಿದ್ದಾರೆ.

ಇನ್ನುಳಿದಂತೆ ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಬಸವ ಕಲ್ಯಾಣದಲ್ಲಿ ಸಹಾನುಭೂತಿ ವರ್ಕೌಟ್‌ ಆಗಬಹುದು ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ಇದ್ದರೆ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಪಡೆದುಕೊಳ್ಳಬೇಕು ಎಂಬ ತಯಾರಿಯಲ್ಲಿ ಬಿಜೆಪಿ ಇದೆ.

ಇನ್ನು ಮಸ್ಕಿಯಲ್ಲಿ ಕಳೆದ ಬಾರಿಯ ಅಭ್ಯರ್ಥಿಗಳ ನಡುವೆಯೇ ಮತ್ತೊಮ್ಮೆ ಸ್ಪರ್ಧೆ ಏರ್ಪಟ್ಟಿದ್ದು ಈ ಬಾರಿ ಪಕ್ಷ ಬೇರೆ ಆಗಿರುವುದು ಕುತೂಹಲ ಕೆರಳಿಸಿದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಪ್ರತಾಪಗೌಡ ಪಾಟೀಲ್ ಇದೀಗ ಬಿಜೆಪಿ ಅಭ್ಯರ್ಥಿಯಾಗಿದ್ದು ಬಿಜೆಪಿಯಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋತಿದ್ದ ಬಸವನಗೌಡ ತುರವಿಹಾಳ ಇದೀಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಒಟ್ಟಿನಲ್ಲಿ ಏಪ್ರಿಲ್ 17 ರಂದು ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಕೆ, ಪ್ರಚಾರ ಭರಾಟೆ ಶುರುವಾಗಿದೆ. ಕೋವಿಡ್‌ ಕಾರಣಕ್ಕೆ ಕೆಲವೊಂದು ನಿರ್ಬಂಧ ಹೇರಲಾಗಿದ್ದರೂ ಪ್ರಚಾರ ಕಾರ್ಯ ಆರಂಭಗೊಂಡಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *