ಕಲಬುರಗಿ : ರಾಜ್ಯ ಸರ್ಕಾರ ಕೇವಲ ಅಸಹಾಯಕವಲ್ಲದೇ, ಆಶಾರಹಿತವಾಗಿದೆ : ಪ್ರಿಯಾಂಕ್ ಖರ್ಗೆ
ಕಲಬುರಗಿ : ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಬಿಡುಗಡೆ ಮಾಡಿದ ವಾರ್ಷಿಕ ಅನುದಾನದಲ್ಲಿಯೇ ರೂ 100 ಕೋಟಿಯನ್ನು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಸ್ಥೆಗೆ ಬಿಡುಗಡೆ ಮಾಡಿರುವುದನ್ನ ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ತೀವ್ರವಾಗಿ ವಿರೋಧಿಸಿದ್ದಾರೆ.
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು ಕಲ್ಯಾಣ ಕರ್ನಾಟಕ ಕುರಿತು ಸರ್ಕಾರ ತನ್ನ ಪ್ರತಿಕೂಲ ಕ್ರಮವನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ಟೀಕಿಸಿದ್ದಾರೆ.
ಕಕ ಅಭಿವೃದ್ದಿ ಮಂಡಳಿಗೆ ವಾರ್ಷಿಕ ರೂ 1500 ಕೋಟಿ ನಿಗದಿಪಸಿಲಾಗಿದೆ. ಆದರೆ ಅದರಲ್ಲಿ ಕೇವಲ 1136 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಸಧ್ಯ ಸದರಿ 1136 ಕೋಟಿ ಅನುದಾನದಲ್ಲಿಯೇ ರೂ 100 ಕೋಟಿಯನ್ನು ಕಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಸ್ಥೆಗೆ ಬಿಡುಗಡೆ ಮಾಡಿದೆ. ಈ ಕ್ರಮ ಸರಿಯಾದುದಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ವಾರ್ಷಿಕ ಅನುದಾನದಲ್ಲಿಯೇ ರೂ 500 ಕೋಟಿ ಕಡಿಮೆ ನೀಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಘದ ಅನಿವಾರ್ಯತೆ ಇದೆಯಾ? ಸಂಘದ ಮೂಲ ಉದ್ದೇಶವೇ ಮಾನವ ಸಂಪನ್ಮೂಲ ಅಭಿವೃದ್ದಿ ಎನ್ನುವುದಾದರೇ ಕೌಶಲ್ಯ ಅಭಿವೃದ್ದಿ ಇಲಾಖೆಯ ಕೊಡುಗೆ ಏನಿದೆ? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಲು ಶಾಸಕರಿಗೆ ಹೆದರಿಕೆಯಾಗುತ್ತಿದ್ದರೆ, ಜೊತೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಹೋದರೇ ನಮ್ಮ ಜನರ ಹಕ್ಕನ್ನು ನಾನು ಸಿಎಂ ಅವರಿಗೆ ಕೇಳುತ್ತೇವೆ.
ಡಬಲ್ ಇಂಜೀನ್ ಸರ್ಕಾರ ಕೇವಲ ಅಸಹಾಯಕವಾಗಿರದೆ, ಆಶಾರಹಿತವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಖಾರವಾಗಿ ಹೇಳಿದ್ದಾರೆ.