ಕಲಬುರಗಿ : ಮಹಿಳಾ ಕೃಷಿ ಕೂಲಿಕಾರರ ಸಮೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ : ರಾಜ್ಯದ ಮಹಿಳಾ ಕೃಷಿ ಕೂಲಿಕಾರರ ಸಮೀಕ್ಷೆ ಕೈಗೊಂಡು ಅವರಿಗೆ ಗುರುತಿನ ಚೀಟಿ ಕೊಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ಯ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಹಿಳಾ ಕೃಷಿ ಕೂಲಿಕಾರರ ಬೇಡಿಕೆಗಳ ದಿನವನ್ನಾಗಿ ಆಚರಿಸಿ ಮಹಿಳಾ ಕೃಷಿ ಕೂಲಿಕಾರರು ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ, ಪುರುಷರಿಗೆ ನೀಡುವಷ್ಟು ಕೂಲಿಯನ್ನು ಮಹಿಳೆಯರಿಗೆ ಕೊಡಲು ನಿರಾಕರಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ, ಅಗತ್ಯ ವಸ್ತುಗಳ ಬೆಲೆಗಳ ಏರಿಕೆಯನ್ನು ತಡೆಯುವಂತೆ, ಪ್ರತಿಯೊಂದು ಕಿರು ಕುಟುಂಬಕ್ಕೆ ಕೆಜಿಗೆ ಒಂದು ರೂ.ಗಳ ದರದಲ್ಲಿ ತಿಂಗಳಿಗೆ ಕನಿಷ್ಠ 35 ಕೆಜಿ ಅಕ್ಕಿ, ಗೋಧಿಯನ್ನು ಹಾಗೂ ಬೇಡಿಕೆಗೆ ಅನುಗುಣವಾಗಿ ಅಕ್ಕಿ, ಜೋಳ, ರಾಗಿಯನ್ನು ಪಡಿತರ ಅಂಗಡಿಗಳಲ್ಲಿ ಕೇರಳದ ಮಾದರಿಯಲ್ಲಿ ವಿತರಿಸುವಂತೆ ಒತ್ತಾಯಿಸಿದರು.
ಉರುವಲು ಕಟ್ಟಿಗೆಗಳ ಅಭಾವದ ಹಿನ್ನೆಲೆಯಲ್ಲಿ ಅಡಿಗೆ ಅನಿಲ ಸೌಕರ್ಯ ಹೊಂದಿರುವ ಕುಟುಂಬಗಳಿಗೂ ಅಗತ್ಯ ಪ್ರಮಾಣದಲ್ಲಿ ಸೀಮೆ ಎಣ್ಣೆಯನ್ನು ವಿತರಿಸುವಂತೆ, ಗೃಹ ಬಳಕೆಗಾಗಿ ಬಳಸುವ ಅಡಿಗೆ ಅನಿಲ ಸಿಲೆಂಡರ್‍ದ ಬೆಲೆ ಕಡಿಮೆ ಮಾಡುವಂತೆ, ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ, ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ, ಭ್ರಷ್ಟಾಚಾರ ರಹಿತವಾಗಿ ಜಾರಿಗೆ ತರುವಂತೆ, ಉದ್ಯೋಗ ಖಾತ್ರಿ ಕೂಲಿಯನ್ನು ವಾರಕ್ಕೊಮ್ಮೆ ಪಾವತಿಸುವಂತೆ, ಒಂದು ಕುಟುಂಬದಲ್ಲಿ ಒಬ್ಬನಿಗೆ 100 ದಿನಗಳ ಕೆಲಸ ಕೊಡುವುದನ್ನು ಬದಲಾಯಿಸಿ ಕೆಲಸ ಬಯಸುವ ಎಲ್ಲರಿಗೂ ವರ್ಷಕ್ಕೆ 200 ದಿನಗಳ ಉದ್ಯೋಗ ಕೊಡಲು ಕ್ರಮ ಕೈಗೊಳ್ಳುವಂತೆ, ಉದ್ಯೋಗ ಖಾತ್ರಿ ಕೂಲಿಯನ್ನು 600ರೂ.ಗಳಿಗೆ ಹೆಚ್ಚಿಸುವಂತೆ ಅವರು ಆಗ್ರಹಿಸಿದರು.
ರಾಜ್ಯ ಸರ್ಕಾರವು ತನ್ನ ಅನುದಾನದಿಂದ ಪಟ್ಟಣ ಪ್ರದೇಶದ ಕೆಲಸಗಾರರಿಗೂ ಉದ್ಯೋಗವನ್ನು ಒದಗಿಸುವಂತೆ, ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳಾ ಕೆಲಸಗಾರರಿಗೆ ಶೇಕಡಾ 25ರಷ್ಟು ಕೆಲಸದ ಹೊರೆಯನ್ನು ತಗ್ಗಿಸುವಂತೆ, ಯೋಜನೆಯ ನಿಯಮಗಳಿಗೆ ಅನುಗುಣವಾಗಿ ಕಡ್ಡಾಯವಾಗಿ ಕೆಲಸದ ಸ್ಥಳದಲ್ಲಿ ವಿಶ್ರಾಂತಿಗೆ ನೆರಳು, ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ವ್ಯವಸ್ಥೆ ಹಾಗೂ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸುವಂತೆ ಅವರು ಒತ್ತಾಯಿಸಿದರು.
ವರದಕ್ಷಿಣೆ ನಿಷೇಧ ಕಾನೂನು ಸಮರ್ಪಕವಾಗಿ ಜಾರಿಗೊಳಿಸುವಂತೆ, ದೂರು ಸಲ್ಲಿಸುವವರಿಗೆ ಹಾಗೂ ಮಹಿಳೆಯರ ಪರವಾಗಿರುವವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ, ಪ್ರತಿಯೊಂದು ವಿವಾಹವನ್ನು ಕಡ್ಡಾಯವಾಗಿ ನೊಂದಣಿಗೆ ಕ್ರಮ ಕೈಗೊಳ್ಳುವಂತೆ, ಮಹಿಳೆಯರಿಗೆ ಕೌಟುಂಬಿಕ ಹಿಂಸೆಗೆ ಗುರಿಪಡಿಸುವವರ ವಿರುದ್ಧ ಪೋಲಿಸರೇ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸುವಂತೆ, ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬರುವ ಒಂಟಿ ಮಹಿಳೆಯರಿಗೆ ಕನಿಷ್ಠ ಸೌಲಭ್ಯಗಳನ್ನು ಹೊಂದಿರುವ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸುವಂತೆ, ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಕಿರುಕುಳ ಕೊಡುವವರ ವಿರುದ್ಧ ತಕ್ಷಣವೇ ಕಠಿಣ ಶಿಕ್ಷೆ ವಿಧಿಸುವ ಕ್ರಮ ಜಾರಿಯಾಗುವಂತೆ ಅವರು ಆಗ್ರಹಿಸಿದರು.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ನ್ಯಾಯಮೂರ್ತಿ ವರ್ಮಾ ಸಮಿತಿ ನೀಡಿರುವ ಶಿಫಾರಸ್ಸುಗಳನ್ನು ಜಾರಿಗೆ ತರುವಂತೆ, ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ಆದ್ಯತೆಯ ಮೇರೆಗೆ ಹೆಚ್ಚೆಚ್ಚು ಸಬ್ಸಿಡಿ ಸಹಿತದ ಸಾಲವನ್ನು ನೀಡುವಂತೆ, ಮೈಕ್ರೋ ಫೈನಾನ್ಸ್ ಕಂಪೆನಿಗಳು ದುಬಾರಿ ಬಡ್ಡಿ ವಸೂಲಿ ಮಾಡುವುದನ್ನು ಹಾಗೂ ದೌರ್ಜನ್ಯದ ಮೂಲಕ ಸಾಲ ವಸೂಲಿ ಮಾಡುವುದನ್ನು ತಡೆಯುವಂತೆ, ಮಹಿಳೆಯರಿಗೆ, ಪರಿಶಿಷ್ಟರಿಗೆ, ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಬಜೆಟ್ ಇಡುವಂತೆ, ಹೋಬಳಿ ಮಟ್ಟದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು ಪ್ರಾರಂಭಿಸುವಂತೆ ಅವರು ಒತ್ತಾಯಿಸಿದರು.
ಆಶಾ, ಅಂಗನವಾಡಿ, ಅಕ್ಷರ ದಾಸೋಹ, ವಸತಿ ನಿಲಯಗಳಲ್ಲಿ ಅಡಿಗೆ ಕೆಲಸ, ಪೌರ ಕಾರ್ಮಿಕ ಮಹಿಳೆಯರು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಮಹಿಳಾ ಹೊರಗುತ್ತಿಗೆ ಸಿಬ್ಬಂದಿಗಳ ಸೇವೆಯನ್ನು ಖಾಯಂಗೊಳಿಸಿ, ಡಿ ವರ್ಗದ ಸರ್ಕಾರಿ ವೇತನ ನೀಡುವಂತೆ, ಮಹಿಳೆಯರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವಂತೆ, ಅದಕ್ಕಾಗಿ ಪ್ರಗತಿಪರರ ನೆರವು ಪಡೆಯುವಂತೆ, ಆತ್ಮಹತ್ಯೆ ಮಾಡಿಕೊಂಡ ರೈತರು, ಕಾರ್ಮಿಕರು, ಕೂಲಿಕಾರರ ಕುಟುಂಬಗಳಿಗೆ ಕನಿಷ್ಠ ಐದು ಲಕ್ಷ ರೂ.ಗಳ ಪರಿಹಾರ ಕೊಡುವಂತೆ ಆಗ್ರಹಿಸಿದ ಅವರು, ಈ ಎಲ್ಲ ಬೇಡಿಕೆಗಳನ್ನು ಪರಿಗಣಿಸಲು ಕೂಡಲೇ ಮುಖ್ಯಮಂತ್ರಿಗಳು ಜಂಟ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮಹಿಳಾ ಕೃಷಿ ಕೂಲಿಕಾರರ ಉಪ ಸಮಿತಿಯ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಚಿಂಚೋಳಿಯ ಜಗದೇವಿ ಚಂದನಕೇರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದಪ್ಪಾ ಹಾವನೂರ್, ಜಿಲ್ಲಾ ಸಂಚಾಲಕಿ ಮಲ್ಲಮ್ಮ ಕೋಡ್ಲಿ, ಅಫಜಲಪುರದ ಸುರೇಶ್ ದೊಡ್ಡಮನಿ, ಹಾಸ್ಟೆಲ್ ನೌಕರರ ಸಂಘದ ಅಧ್ಯಕ್ಷೆ ಫಾತಿಮಾಬೇಗಂ ಫತ್ತೆಪಹಾಡ್, ರಾಮಚಂದ್ರ ಪವಾರ್, ರೇಣುಕಾ ಸಂಗೋಳಗಿ ಮುಂತಾದವರು ಪಾಲ್ಗೊಂಡಿದ್ದರು.