Ramesh Jarkiholi CD Case: ಸಿಡಿ ಯುವತಿಯಿಂದ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರದ ಆರೋಪ; ಎಸ್​ಐಟಿಯಿಂದ ಇಂದು ಸ್ಥಳ ಮಹಜರು

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಸಿಡಿ ರಿಲೀಸ್ ಆದ ಬಳಿಕ 28 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಯುವತಿ 2 ದಿನಗಳ ಹಿಂದೆ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಹಾಜರಾಗಿ ನ್ಯಾಯಾಧೀಶರ ಎದುರೇ ತನ್ನ ಹೇಳಿಕೆಯನ್ನು ದಾಖಲಿಸಿದ್ದರು. ಬಳಿಕ ಅವರನ್ನು ಎಸ್​ಐಟಿ ಕೂಡ ವಿಚಾರಣೆಗೆ ಒಳಪಡಿಸಿತ್ತು. ನಿನ್ನೆಯೂ ಆ ಯುವತಿಯ ವಿಚಾರಣೆ ನಡೆದಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಇಂದು ಕೂಡ ವಿಚಾರಣೆ ಮುಂದುವರೆಯಲಿದ್ದು, ಯುವತಿ ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎನ್ನಲಾಗಿರುವ ಸ್ಥಳಕ್ಕೆ ಆಕೆಯನ್ನು ಕರೆದೊಯ್ದು ಮಹಜರು ನಡೆಸುವ ಸಾಧ್ಯತೆಯಿದೆ.

ನಿನ್ನೆಯೇ ಎಸ್​ಐಟಿ ಅಧಿಕಾರಿಗಳು ಸ್ಥಳ ಮಹಜರು ಮಾಡಲು ನಿರ್ಧರಿಸಿದ್ದರು. ಆದರೆ, ಬೆಳಗ್ಗೆಯಿಂದ ವಿಚಾರಣೆಯಲ್ಲಿ ಭಾಗಿಯಾದ ಯುವತಿ ತನಗೆ ಸುಸ್ತಾಗಿದೆ ಎಂದು ಹೇಳಿದ್ದರಿಂದ ಆಕೆಗೆ ವಿಶ್ರಾಂತಿ ನೀಡಲು ಆಕೆಯನ್ನು ಬೆಂಗಳೂರಿನ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಬಿಟ್ಟಿದ್ದರು. ಇಂದು ಯುವತಿಯ ಜೊತೆ ಸ್ಥಳ ಮಹಜರು ಮಾಡೋ ಸಾಧ್ಯತೆಯಿದ್ದು, ಆಕೆಯನ್ನು ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸುವ ಸಾಧ್ಯತೆಯಿದೆ. ಆದರೆ ಈ ಪ್ರಕರಣದ ಸಂಬಂಧ ಪ್ರಮುಖ‌ ಸಾಕ್ಷಿಗಳು ಸಿಗೋದು ಡೌಟ್ ಎನ್ನಲಾಗುತ್ತಿದೆ.

ಈ ಪ್ರಕರಣದಲ್ಲಿ ಜೈವಿಕ ಸಾಕ್ಷಿ ( biological evidence) ಸಿಗೋದು ಅನುಮಾನ ಎನ್ನಲಾಗುತ್ತಿದೆ. ಸಿಡಿ ಯುವತಿ ತನ್ನ ಮೇಲೆ ರಮೇಶ್ ಜಾರಕಿಹೊಳಿಯಿಂದ 2 ಬಾರಿ ಅತ್ಯಾಚಾರ ನಡೆದಿದೆ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಕೃತ್ಯ ನಡೆದ ಸಂದರ್ಭದಲ್ಲಿ ಬಳಸಿದ ಬಟ್ಟೆ , ಹಾಸಿಗೆಯ ಹೊದಿಕೆ ಇವುಗಳು ಸಿಕ್ಕಲ್ಲಿ ಜೈವಿಕ ಸಾಕ್ಷ್ಯ ಸಂಗ್ರಹಿಸಬಹುದು. ರಕ್ತ, ಕೂದಲು ಇವುಗಳು ಜೈವಿಕ ಸಾಕ್ಷ್ಯಗಳಾಗುತ್ತವೆ.

ಕಳೆದ ಕೆಲವು ತಿಂಗಳ ಹಿಂದೆ ಘಟನೆ ನಡೆದಿರುವುದಾಗಿ ಯುವತಿ ತಿಳಿಸಿದ್ದಾರೆ. ಇದೀಗ ಎಸ್ ಐ ಟಿ ದೈಹಿಕ ಸಂಪರ್ಕ ನಡೆದ ಜಾಗದ ಸ್ಥಳ ಮಹಜರು ಮಾಡಬೇಕಾಗುತ್ತದೆ. ಆದರೆ, ಘಟನೆ ನಡೆದು ಬಹಳ ಸಮಯವಾದ್ದರಿಂದ ಅಲ್ಲಿ ಸಾಕ್ಷಿಗಳು ಸಿಗುವುದು ಅನುಮಾನ. ಟೆಕ್ನಿಕಲ್ ಸಾಕ್ಷಿಗಳಷ್ಟೇ ಈ ಕೇಸ್ ನ ಜೀವಾಳವಾಗಿದೆ. ಅಂದರೆ ಪೋನ್ ಕಾಲ್, ವಾಟ್ಸಾಪ್ ಚಾಟ್, ಟವರ್ ಡಂಪ್ ಇವುಗಳು ಟೆಕ್ನಿಕಲ್ ಸಾಕ್ಷಿಗಳಾಗುತ್ತವೆ. ಈಗಾಗಲೇ ಕೆಲವು ಸಾಕ್ಷಿಗಳನ್ನು ಯುವತಿ ಎಸ್​ಐಟಿ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.

ಇಂದು ವಿಚಾರಣೆಗೆ ಹಾಜರಾಗಲು ಸಂತ್ರಸ್ಥ ಯುವತಿಗೆ ಸೂಚನೆ ನೀಡಲಾಗಿದೆ. ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಯುವತಿ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿದೆ. ಸದ್ಯ ಗೌಪ್ಯ ಸ್ಥಳದಲ್ಲಿರುವ ಸಂತ್ರಸ್ಥ ಯುವತಿ ಇಂದು ಕೂಡ ವಿಚಾರಣೆಗೆ ಹಾಜರಾಗಲಿದ್ದಾರೆ.

ಇನ್ನೊಂದೆಡೆ, ರಮೇಶ್ ಜಾರಕಿಹೊಳಿ ಮೇಲೆ ಅತ್ಯಾಚಾರದ ಆರೋಪ ಮಾಡಿರುವ ಯುವತಿ ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡಿದರೆ ರಮೇಶ್ ಜಾರಕಿಹೊಳಿಯನ್ನು ಪೊಲೀಸರು ಬಂಧಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ, ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಮುಂಬೈನ ಹೋಟೆಲ್ ಒಂದರಲ್ಲಿ ಬೀಡುಬಿಟ್ಟಿದ್ದು, ತಮ್ಮನ್ನು ಬಂಧಿಸದಂತೆ ನಿರೀಕ್ಷಣಾ ಜಾಮೀನು ಪಡೆಯುವ ಸಾಧ್ಯತೆಯಿದೆ.ಮಂಗಳವಾರ ರಾತ್ರಿಯೇ ಕರ್ನಾಟಕ ಬಿಟ್ಟು ಹೋಗಿರುವ ರಮೇಶ್ ಜಾರಕಿಹೊಳಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಈ ಹಿಂದೆ, ನಾನು ಯಾವ ತಪ್ಪೂ ಮಾಡಿಲ್ಲ. ಹೀಗಾಗಿ, ಜಾಮೀನು ಪಡೆಯುವ ಪ್ರಶ್ನೆಯೇ ಇಲ್ಲ. ನಾನು ತಪ್ಪು ಮಾಡಿದ್ದರೆ ನನ್ನನ್ನು ನೇಣಿಗೇರಿಸಲಿ. ನಾನು ತಪ್ಪೇ ಮಾಡಿಲ್ಲ ಎಂದ ಮೇಲೆ ನನ್ನನ್ನು ಬಂಧಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಹೀಗಾಗಿ, ನಾನು ಜಾಮೀನು ಪಡೆಯುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಆದರೀಗ ಯುವತಿ ಪ್ರತ್ಯಕ್ಷವಾದ ಬಳಿಕ ಬಂಧನದ ಭೀತಿ ಎದುರಾಗಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಅವರ ವಕೀಲರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಎಸ್​ಐಟಿ ರಮೇಶ್ ಜಾರಕಿಹೊಳಿ ಅವರ ಚಲನವಲನಗಳನ್ನು ಗಮನಿಸುತ್ತಿದ್ದು, ಅವರು ಮುಂಬೈನಲ್ಲಿರುವ ಬಗ್ಗೆ ಎಸ್​ಐಟಿಗೆ ಮಾಹಿತಿ ಸಿಕ್ಕಿದೆ. ಮುಂಬೈಗೆ ತೆರಳಿರೋ ರಮೇಶ್ ಜಾರಕಿಹೊಳಿ ಸದ್ಯ ಮುಂಬೈನ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ರಮೇಶ್ ಜಾರಕಿಹೊಳಿಗೆ ಅವರ ವಕೀಲರು ಸೂಚನೆ ನೀಡಿದ್ದಾರೆ.

ಈಗಾಗಲೇ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ಥೆ ಹೇಳಿಕೆ ಕೊಟ್ಟಿದ್ದಾರೆ. ತನಗೆ ಕೆಲಸ‌ ಕೊಡಿಸುವುದಾಗಿ ಹಾಗೂ ಡಾಕ್ಯುಮೆಂಟರಿ ಮಾಡಲು ಪರ್ಮಿಷನ್ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಅತ್ಯಾಚಾರ ಆರೋಪದ ಮೇಲೆ ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಮ್ಯಾಜಿಸ್ಟ್ರೇಟ್ ಮುಂದೆಯೇ ಸಂತ್ರಸ್ಥೆ ಹೇಳಿಕೆ ಕೊಟ್ಟಿರುವುದರಿಂದ ಪ್ರಕರಣ ಗಂಭೀರ ಸ್ವರೂಪದ್ದಾಗಿದೆ. ಎಸ್​ಐಟಿ ಮುಂದಿನ ಹೇಳಿಕೆಗಿಂತ ಮ್ಯಾಜಿಸ್ಟ್ರೇಟ್ ಮುಂದಿನ ಹೇಳಿಕೆ ಮಹತ್ವದ್ದಾಗಿರುತ್ತದೆ. ಹಾಗಾಗಿ ಯಾವುದೇ ಕ್ಷಣದಲ್ಲಿ ನಿಮ್ಮ ಬಂಧನ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ವಕೀಲರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *