ಶಿಲಾಯುಗದ ಬೃಹತ್ ಗುಹಾಸಮಾಧಿ ಪತ್ತೆ
ಉಡುಪಿ, ಎ.೨- ಉಡುಪಿ ನಗರದೊಳಗಿನ ಪಣಿಯಾಡಿ-ಪಣಿಯೂರಿನ ಅನಂತ ಪದ್ಮನಾಭ ದೇವಸ್ಥಾನದ ಗರ್ಭಗೃಹದ ಸಮೀಪದಲ್ಲಿಯೇ ಬೃಹತ್ ಶಿಲಾಯುಗದ ಗುಹಾ ಸಮಾಧಿಯೊಂದು ಪತ್ತೆಯಾಗಿದೆ.
ನೆಲಮಟ್ಟದಿಂದ ಸುಮಾರು ಮೂರು ಅಡಿ ಆಳದಲ್ಲಿ ಈ ಗುಹೆಯ ಎರಡು ಅಡಿ ಸುತ್ತಳತೆಯ ಪ್ರದೇಶದ್ವಾರ ಕಂಡುಬಂದಿದೆ ಎಂದು ಶಿರ್ವದ ಎಂ.ಎಸ್.ಆರ್.ಎಸ್. ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾದ್ಯಾಪಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ. ಉಡುಪಿ ನಗರದಿಂದ ಸುಮಾರು ೩ ಕಿ.ಮೀ ದೂರದಲ್ಲಿರುವ ಪಣಿಯಾಡಿಯಲ್ಲಿ ಈ ಗುಹಾ ಸಮಾಧಿ ಕಂಡುಬಂದಿದೆ. ಪಣಿಗಳ ಹಾಡಿ ಪಣಿಯಾಡಿ. ಪ್ರಾಚೀನ ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಪಣಿಗಳು ಪ್ರಾಚೀನ ಭಾರತದ ಒಂದು ಪುರಾತನ ಬುಡಕಟ್ಟು ಜನಾಂಗ. ಉಡುಪಿ ಜಿಲ್ಲೆಯ ಪಣಿಯೂರು, ಪಣಿಯಾಡಿ ಎಂಬ ಹೆಸರುಗಳು ನಿಶ್ಚಿತವಾಗಿಯೂ ಈ ಜನಾಂಗದ ಪ್ರಾಚೀನ ನೆಲೆಗಳೆಂಬುದನ್ನು ಸೂಚಿಸುತ್ತವೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ. ಪಣಿಗಳು ನಾಗಾರಾಧಕರು ಮತ್ತು ನಾಗ ಲಾಂಛನವನ್ನು ಹೊಂದಿದ್ದ ಒಂದು ಜನಾಂಗ. ಪಣಿಯಾಡಿಯ ನಾಗಾಸನ ಅನಂತಪದ್ಮನಾಭ ಕೂಡಾ ನಾಗ ಸಂಬಂಧಿ ದೇವತೆ ಎನ್ನುವುದು ಅನಂತಪದ್ಮನಾಭನ ಮೂರ್ತಿಶಿಲ್ಪಲಕ್ಷಣಗಳಿಂದ ಸ್ಪಷ್ಟವಾಗುತ್ತದೆ. ಪಣಿಯಾಡಿಯ ಅನಂತಪದ್ಮನಾಭ ಸರ್ಪದ ಸುರುಳಿಯ ಮೇಲೆ ಕುಳಿತ್ತಿದ್ದು, ತಲೆಯ ಮೇಲೆ ನಾಗನ ಕೊಡೆಯಿದೆ. ಬಲಗೈ ಅಭಯ, ಹಿಂದಿನ ಬಲಗೈಯಲ್ಲಿ ಚಕ್ರ, ಎಡಗೈ ಶಂಖ ಮತ್ತು ಎಡ ಮುಂದಿನ ಕೈ ಗಧಾಹಸ್ತವಾಗಿದೆ. ಉದ್ದನೆಯ ಕರಂಡಮುಕುಟವಿರುವುದರಿಂದ ಇದು ಶಿಲ್ಪಶಾಸ್ತ್ರದ ಪ್ರಕಾರ ೧೪ನೇ ಶತಮಾನದ ಶಿಲ್ಪವಾಗಿದೆ. ಇದೇ ಲಕ್ಷಣಗಳನ್ನು ಹೊಂದಿರುವ ಉಡುಪಿ ತಾಲೂಕಿನ ಕೀಳಿಂಜೆಯಲ್ಲಿರುವ ಶಿಲ್ಪ೧೦ನೇ ಶತಮಾನದ ವಾಸುದೇವನ ಶಿಲ್ಪವಾಗಿದೆ. ಬಾದಾಮಿಯ ಗುಹೆಯಲ್ಲಿ ಕರ್ನಾಟಕದ ಅತ್ಯಂತ ಪ್ರಾಚೀನ ವಾಸುದೇವನ ೭ನೇ ಶತಮಾನದ ಶಿಲ್ಪವಿದೆ. ಪಣಿಯೂರಿನ ಅನಂತಪದ್ಮನಾ ದೇವಾಲಯದ ಗರ್ಭಗೃಹದ ಸಮೀಪದಲ್ಲಿಯೇ ಈ ಬೃಹತ್ ಶಿಲಾಯುಗದ ಗುಹಾ ಸಮಾಧಿ ಪತ್ತೆಯಾಗಿದೆ. ನೆಲಮಟ್ಟದಿಂದ ಸುಮಾರು ೩ ಅಡಿ ಆಳದಲ್ಲಿ ಈ ಗುಹೆಯ ಎರಡು ಅಡಿ ಸುತ್ತಳತೆಯ ಪ್ರವೇಶದ್ವಾರ ಕಂಡುಬಂದಿದೆ. ಸುಮಾರು ಎಂಟು ಅಡಿ ಆಳ ಮತ್ತು ಒಳಭಾಗದಲ್ಲಿ ಎಂಟು ಅಡಿ ವಿಸ್ತೀರ್ಣದ ಅರ್ಧಗೋಲಾಕಾರದ ಹಂಡೆಯಾಕಾರದಲ್ಲಿ ಇದು ರಚಿಸಲ್ಪಟ್ಟಿದೆ. ಈ ಗುಹಾ ಸಮಾಧಿಯಲ್ಲಿ ಮಣ್ಣು ಕುಸಿದಿರುವುದರಿಂದ ಯಾವುದೇ ಅವಶೇಷಗಳನ್ನು ಸಂಗ್ರಹಿಸಲು ಸಾದ್ಯವಾಗಿಲ್ಲ. ಸಾಂತೂರಿನ ಇಂತಹದ್ದೇ ಸಮಾಧಿಯಲ್ಲಿ ಮಡೆ ಅವಶೇಷಗಳು ಪತ್ತೆಯಾಗಿದ್ದವು. ಪ್ರಸ್ತುತ ದೇವಾಲಯದ ಉತ್ತರ ಭಾಗದಲ್ಲಿ ಪತ್ತೆಯಾಗಿರುವ ಗುಹಾ ಸಮಾಧಿ ಗರ್ಭಗೃಹದಿಂದ ಕೇವಲ ೮ ಅಡಿ ದೂರದಲ್ಲಿದೆ. ಪಾವಂಜೆಯ ಸುಬ್ರಹ್ಮಣ್ಯ ದೇವಾಲಯ, ಸಾಂತೂರಿನ ಸುಬ್ರಹ್ಮಣ್ಯ ದೇವಾಲಯ ಮತ್ತು ಸೂಡಾದ ಸುಬ್ರಹ್ಮಣ್ಯ ದೇವಾಲಯಗಳ ಸಮೀಪದಲ್ಲಿಯೂ ಬೃಹತ್ ಶಿಲಾಯುಗದ ಗುಹಾ ಸಮಾಧಿಗಳು ಪತ್ತೆಯಾಗಿವೆ. ಪಳ್ಳಿಯ ಮದ್ಮಲ್ಪಾದೆಯಲ್ಲಿ ಬೃಹತ್ ಶಿಲಾಯುಗದ ಕಲ್ಮನೆ ಸಮಾಧಿಯನ್ನೇ ನಾಗಬ್ರಹ್ಮಸ್ಥಾನವಾಗಿ ಆರಾಧಿಸಲಾಗುತ್ತಿದೆ. ಸುಮಾರು ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದ ಈ ಗುಹಾ ಸಮಾಧಿ ಪಣಿಗಳ ಮೂಲ ನಿವೇಶನದ ಪ್ರಾಚೀನತೆಯನ್ನು ನಿರ್ಧರಿಸುವಲ್ಲಿ ಒಂದು ಬಹುಮುಖ್ಯ ಪುರಾತತ್ವ ಸಾಕ್ಷಿಯಾಗಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ. ಪಣಿಯಾಡಿಯ ದೇವಾಲಯ ಪ್ರಸ್ತುತ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಆಡಳಿತಕ್ಕೊಳಪಟ್ಟಿದೆ. ಈ ದೇವಳದ ಜೀರ್ಣೋದ್ಧಾರ ಕೆಲಸ ಪ್ರಗತಿಯಲ್ಲಿದ್ದು, ಕಳೆದ ಮಾ.೨೩ರಂದು ದೇವಳದ ಪೌಳಿಯ ನಿರ್ಮಾಣಕ್ಕಾಗಿ ಮಣ್ಣು ಅಗೆಯುತಿದ್ದಾಗ, ದೇವಳದ ಉತ್ತರ ಭಾಗದಲ್ಲಿ ನೆಲಮಟ್ಟದಿಂದ ಸುಮಾರು ಎಂಟು ಅಡಿ ಕೆಳಗೆ ಈ ಅರ್ಧ ಗೋಲಾಕಾರದ ಗುಹೆ ಕಂಡುಬಂದಿತ್ತು. ಗುಹೆಯ ಮೇಲ್ಮೈಯಲ್ಲಿ ಕಲ್ಲಿನ ಮುಚ್ಚಳವಿದ್ದಂತಿದ್ದು, ಗುಹೆಯ ಒಳಮೈ ನುಣುಪಾಗಿದೆ. ಅದರಲ್ಲಿ ೨-೩ ಕಿಂಡಿಗಳಂತಿದ್ದು, ಸುಂದರವಾಗಿ ನಿರ್ಮಿತವಾಗಿದೆ. ಆದರೆ ನೆಲ ಅಗೆಯುವ ಸಂದರ್ಭದಲ್ಲಿ ಅದರ ಅರಿವಿಲ್ಲದೆ ಒಂದು ಭಾಗ ಭಿನ್ನಗೊಂಡಿದೆ ಎಂದು ಗುಹೆಯ ಅಧ್ಯಯನದಲ್ಲಿ ಪ್ರೊ.ಮುರುಗೇಶಿ ಅವರಿಗೆ ಸಹಕರಿಸಿದ ರಾಜೇಶ್ ಭಟ್ ಪಣಿಯಾಡಿ ತಿಳಿಸಿದ್ದಾರೆ.