ರಾಜ್ಯದಲ್ಲಿ ಹೆಚ್ಚಿದ ಕೊರೋನಾ: ಶುರುವಾಯ್ತು ಮತ್ತೊಂದು ಲಾಕ್ಡೌನ್ ಆತಂಕ, ಹಣ ಸಂಪಾದಿಸಲು ಓವರ್ ಟೈಮ್ ಕೆಲಸಕ್ಕಿಳಿದ ಕಾರ್ಮಿಕರು!
ಗದಗ: ರಾಜ್ಯದಲ್ಲಿ ದಿನಕಳೆದಂತೆ ಮಹಾಮಾರಿ ಕೊರೋನಾ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಲಾಕ್ಡೌನ್ ಜಾರಿಯಾಗಲಿದೆ ಎಂದು ಆತಂಕಗೊಂಡಿರುವ ದಿನಗೂಲಿ ಕಾರ್ಮಿಕರು ಹೆಚ್ಚೆಚ್ಚು ಪಾಳಿಯಲ್ಲಿ ಕೆಲಸ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.
ಕಳೆದ ವರ್ಷ ಲಾಕ್ಡೌನ್ ಜಾರಿಯಾದಾಗ ದಿನಗೂಲಿ ಕಾರ್ಮಿಕರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಆತಂಕಕ್ಕೊಳಗಾಗಿರುವ ಕಾರ್ಮಿಕರು ಓವರ್ ಟೈಮ್ ಕೆಲಸ ಮಾಡಿ ಹಣ ಗಳಿಸಲು ಮುಂದಾಗಿದ್ದಾರೆಂದು ವರದಿಗಳು ತಿಳಿಸಿವೆ.
ಕಟ್ಟಡ, ಹೋಟೆಲ್, ಕೈಗಾರಿಕಾ ಪ್ರದೇಶ ಹಾಗೂ ರಾತ್ರಿ ವೇಳೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುವ ಜನರು ತಮ್ಮ ಮಕ್ಕಳ ಸಮೇತ ಹೆಚ್ಚೆಚ್ಚು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.
ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಹುಲಕೋಟಿ ಗ್ರಾಮದ ನಿವಾಸಿ ಶಂಕರ್ ಎಂಬುವವರು ಮಾತನಾಡಿ, ಕೃಷಿ ಭೂಮಿಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುವವರು ಬೆಳಿಗಿನ ಸಮಯದಲ್ಲಿ ಕೆಲಸ ಮಾಡಿ, ಸಂಜೆ ವೇಳೆ ಮತ್ತೊಂದು ಕೆಲಸಕ್ಕಾಗಿ ಹುಡುಕಾಡುತ್ತಿದ್ದಾರೆ. ನಮಗೆ ಹಣದ ಅಗತ್ಯವಿದೆ. ಸರ್ಕಾರ ಮತ್ತೊಂದು ಲಾಕ್ಡೌನ್ ಜಾರಿ ಮಾಡಿದೆ, ಅಗತ್ಯ ವಸ್ತು ಖರೀದಿ ಮಾಡಲಾದರೂ ನಮಗೆ ಹಣ ಬೇಕು ಎಂದು ಹೇಳಿದ್ದಾರೆ.