ಇಂದು ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ; ಲಾಕ್ಡೌನ್ ಬಗ್ಗೆ ತೀರ್ಮಾನ ಸಾಧ್ಯತೆ
ನವದೆಹಲಿ, ಮೇ 5: ಭಾರತದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಆತಂಕವನ್ನು ಸೃಷ್ಟಿಸುತ್ತಿದೆ. ಹಲವು ನಿರ್ಬಂಧಗಳ ನಡುವೆಯೂ ಪ್ರತಿ ದಿನ ಮೂರೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದಾರೆ. ಇದರಿಂದ ಕೊರೋನಾದ ಹುಟ್ಟಡಗಿಸಲು ಮತ್ತೆ ಲಾಕ್ಡೌನ್ ಮಾಡಲೇಬೇಕಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ.
ದೇಶದಲ್ಲಿ ಪ್ರತಿ ದಿನ ಮೂರೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿರುವ ಮತ್ತು ಪ್ರತಿ ದಿನ 3 ಸಾವಿರಕ್ಕೂ ಹೆಚ್ಚು ಜನ ಕೊರೋನಾಗೆ ಬಲಿ ಆಗುತ್ತಿರುವ ಹಿನ್ನೆಲೆಯಲ್ಲಿ, ಆಮ್ಲಜನಕ, ಕೊರೋನಾ ಲಸಿಕೆ, ವೆಂಟಿಲೇಟರ್, ಐಸಿಯು, ಬೆಡ್ ಮತ್ತಿತರ ಕೊರತೆಗಳು ತಲೆದೋರಿರುವ ಹಿನ್ನಲೆಯಲ್ಲಿ, ಕೊರೋನಾ ವಿಷಯದಲ್ಲಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗಿರುವ ಹಿನ್ನಲೆಯಲ್ಲಿ ಸ್ವಯಂ ದೂರು ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್ ರಜಾದಿನವಾದ ಭಾನುವಾರ ವಿಚಾರಣೆ ನಡೆಸಿ ‘ಕೊರೋನಾ ನಿಯಂತ್ರಣಕ್ಕೆ ಲಾಕ್ಡೌನ್ ಆಯ್ಕೆಯನ್ನು ಗಂಭೀರವಾಗಿ ಪರಿಗಣಿಸಿ’ ಎಂದು ಆದೇಶ ಹೊರಡಿಸಿದೆ.
ಆರೋಗ್ಯ ಕ್ಷೇತ್ರದ ತಜ್ಞರು ದೇಶದಲ್ಲಿ ಕೊರೋನಾದಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ತಜ್ಞರು ಕೊರೋನಾದ 3ನೇ ಅಲೆಗೆ ಸಿದ್ದರಾಗಿ ಎಂಬ ಎಚ್ಚರಿಸಿದ್ದಾರೆ. ವಿದೇಶಿ ಅಧ್ಯಯನಗಳು ಕೂಡ ಇಂಥದೇ ಆತಂಕವನ್ನು ಹೊರಹಾಕಿವೆ. ಪರೋಕ್ಷವಾಗಿ ಅವರು ಕೂಡ ಲಾಕ್ಡೌನ್ ಮಾಡಿ ಎಂದೇ ಹೇಳಿವೆ.
ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅವರು ಕೂಡ ಇದಕ್ಕೆ ದನಿಗೂಡಿಸಿದ್ದು ಕೊರೋನಾ ನಿಯಂತ್ರಿಸಲು ಈಗ ಲಾಕ್ಡೌನ್ ಒಂದೇ ಪರಿಹಾರ ಎಂದು ಹೇಳಿದ್ದಾರೆ. ‘ಲಾಕ್ಡೌನ್ ಮಾಡುವುದರ ಜೊತೆಗೆ ಬಡವರ ಖಾತೆಗೆ ನೇರವಾಗಿ ಹಣ ನೀಡುವ ‘ನ್ಯಾಯ್’ (NYAY) ಯೋಜನೆಯನ್ನು ಜಾರಿಗೊಳಿಸಿ ಎಂದು ಕೂಡ ಹೇಳಿದ್ದಾರೆ.
ಅಲ್ಲದೆ, ಈಗಾಗಲೇ ಆಮ್ಲಜನಕ, ರೆಮ್ಡೆಸಿವಿರ್, ಐಸಿಯು ಬೆಡ್, ವೆಂಟಿಲೇಟರ್ ಮತ್ತತಿರ ಔಷಧೀಯ ಸಾಮಗ್ರಿಗಳ ಕೊರತೆ ತಾರಕಕ್ಕೇರಿದ್ದು ಸೋಂಕು ಪೀಡಿತರು ಹೆಚ್ಚಾದರೆ ಈ ಸಮಸ್ಯೆಗಳು ಇನ್ನೂ ಹೆಚ್ಚಾಗಲಿವೆ. ಈ ಹಿನ್ನಲೆಯಲ್ಲಿ ಲಾಕ್ಡೌನ್ ಮಾಡಬೇಕೋ ಬೇಡವೋ ಎಂಬ ಬಗ್ಗೆ ಇಂದು ಬೆಳಿಗ್ಗೆ 11ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ ಎಂದು ತಿಳಿದುಬಂದಿದೆ.
ಲಾಕ್ಡೌನ್ ಮಾಡದಿದ್ದರೆ ಸುಪ್ರೀಂ ಕೋರ್ಟ್ ಮುಂದೆ ಸಮರ್ಥಿಸಿಕೊಳ್ಳುವ ಬಗ್ಗೆಯೂ ಸಮಾಲೋಚನೆ ನಡೆಸಲಾಗುವುದು. ಕೊರೋನಾ ನಿಯಂತ್ರಣಕ್ಕೆ ಮಾಡಬೇಕಾದ ಇತರೆ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಆಮ್ಲಜನಕ, ರೆಮ್ಡೆಸಿವಿರ್ ಮತ್ತಿತರ ಔಷಧೀಯ ಸಾಮಗ್ರಿಗಳ ಪೂರೈಕೆ ಬಗ್ಗೆ ಚರ್ಚಿಸಲಾಗುವುದು. ಅಂತಿಮವಾಗಿ ಲಾಕ್ಡೌನ್ ಮಾಡಬೇಕೋ ಬೇಡವೋ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.