ರೆಮಿಡಿಸಿವಿರ್ ಹೆಸರಲ್ಲಿ ಸುಲಿಗೆ ಮಾಡಿದರೆ ಗೂಂಡಾ ಕಾಯ್ದೆಯಡಿ ಕ್ರಮ : ಡಿಸಿಎಂ

ಬೆಂಗಳೂರು – ರಾಜ್ಯದ ಯಾವುದೇ ಖಾಸಗಿ ಆಸ್ಪತ್ರೆ ಬೆಡ್‌, ಔಷಧಿ, ಆಕ್ಸಿಜನ್‌, ರೆಮಿಡಿಸ್ವೀರ್ ಸೇರಿದಂತೆ ಸರಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ಹಣ ಸುಲಿಗೆ ಮಾಡಿದರೆ ಗೂಂಡಾ ಕಾಯ್ದೆ ಅಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್‌ ಪ್ರಕರಣ ದಾಖಲ ಮಾಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಹಾಗು ಉಉ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ ಎಚ್ಚರಿಕೆ ನೀಡಿದ್ದಾರೆ.

ಯಾರಾದರೂ ಹೆಚ್ಚು ಶುಲ್ಕ ವಸೂಲಿ ಮಾಡಿದರೆ 112 ಹೆಲ್ಪ್‌ಲೈನ್‌ಗೆ ಕರೆ ಮಾಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾಗಿ ನೇಮಕಗೊಂಡ ನಡೆಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು, ದೇಶಿಯ ಅಥವಾ ಜಾಗತಿಕವಾಗಿ ಯಾವುದೇ ಕಂಪನಿ ಆಗಿರಲಿ. ಇವತ್ತೇ ರೆಮಿಡಿಸ್ವೀರ್‌ ಖರೀದಿಗೆ ಜಾಗತಿಕ ಟೆಂಡರ್‌ ಕರೆಯಿರಿ ಎಂದು ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದರು

ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಲಭ್ಯವಿರುವ ತಮ್ಮ ಹಾಗೂ ಸರಕಾರದ ಬೆಡ್‌ಗಳ ಮಾಹಿತಿಯನ್ನು ಸುವರ್ಣ ಆರೋಗ್ಯ ಟ್ರಸ್ಟ್‌ ಪೋರ್ಟಲ್‌ನಲ್ಲಿ ಅಪ್‌ಡೇಟ್‌ ಮಾಡಬೇಕು. ಹಾಸಿಗೆಗಳ ಲೈವ್‌ ಸ್ಟೇಟಸ್‌ ಇರಬೇಕು. ಅಧಿಕಾರಿಗಳು ಇದರ ಮೇಲೆ ನಿಗಾ ಇಡಬೇಕು ಎಂದು ತಾಕೀತು ಮಾಡಿದರು.

ಖಾಸಗಿ ಆಸ್ಪತ್ರೆಗಳ ಬಿಲ್‌ ಬಾಕಿ ಇದ್ದರೆ ತಕ್ಷಣವೇ ಚುಕ್ತಾ ಮಾಡಿ. ಹಾಗೆಯೇ ಕೋವಿಡ್‌ ಯೋಧರಾಗಿ ಕೆಲಸ ಮಾಡುತ್ತಿರುವ ಯಾರ ವೇತನವೂ ತಡವಾಗಬಾರದು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ಕೊಟ್ಟರು.

ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರದ ವಶದಲ್ಲಿರುವ ಬೆಡ್‌ ದರ ಪರಿಷ್ಕರಣೆ, ಕೂಡಲೇ 5 ಲಕ್ಷ ರೆಮಿಡಿಸ್ವಿರ್‌ ಡೋಸ್‌ ಖರೀದಿ ಹಾಗೂ ಅಗತ್ಯವಿದ್ದಷ್ಟು ರಾಟ್‌ ಕಿಟ್‌ಗಳನ್ನು ತಕ್ಷಣವೇ ಖರೀದಿ ಮಾಡುವ ಮಹತ್ವದ ನಿರ್ಧಾರಗಳನ್ನು ಕೋವಿಡ್‌ ಕಾರ್ಯಪಡೆ ತಡಗೆದುಕೊಂಡಿದೆ.

ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ರೆಮಿಡಿಸ್ವೀರ್‌ ಕೊರತೆ ಉಂಟಾಗಬಾರದು. ಕೂಡಲೇ 5 ಲಕ್ಷ ಡೋಸ್‌ ಆಮದು ಮಾಡಲು ಜಾಗತಿಕ ಟೆಂಡರ್‌ ಕರೆಯಿರಿ. ಯಾವುದೇ ಕಂಪನಿಯಾದರೂ ಪರವಾಗಿಲ್ಲ. ವಿದೇಶದಿಂದ ಆಮದು ಮಾಡಿಕೊಂಡರೂ ಸರಿ. ರೆಮಿಡಿಸ್ವೀರ್‌ ಕೊರತೆಯಿಂದ ಜೀವ ಹೋಯಿತು ಎನ್ನುವ ಮಾತು ಇನ್ನು ಕೇಳಿಬರಬಾರದು. ಇವತ್ತೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಎಂದು ಡಿಸಿಎಂ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಲಸಿಕೆ ಖರೀದಿಗೆ ಸೂಚನೆ :

18ರಿಂದ 44 ವರ್ಷ ವಯಸ್ಸಿನ ಎಲ್ಲರಿಗೂ ವ್ಯಾಕ್ಸಿನೇಷನ್‌ ಮಾಡುವ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಲಸಿಕೆ ಅಭಾವದಿಂದ ಹೀಗಾಗಿದೆ. ಎಲ್ಲರಿಗೂ ಸರಕಾರವೇ ಲಸಿಕೆ ಕೊಡಬೇಕಾಗಿದೆ. ರಾಜ್ಯದಲ್ಲಿ 3.26 ಕೋಟಿ ಜನರಿಗೆ ಲಸಿಕೆ ನೀಡಬೇಕಾಗಿದ್ದು, ಇವರಿಗೆ ಎರಡು ಡೋಸ್‌ ನೀಡಲು 6.52 ಕೋಟಿ ರೂ. ಅಗತ್ಯವಿದೆ. ಕೇಂದ್ರ ಸರಕಾರದಿಂದ 3 ಲಕ್ಷ ಡೋಸ್‌ ಕೋವಿಶೀಲ್ಡ್‌  ಬಂದಿದ್ದು, ಮೇ ಎರಡನೇ ವಾರಕ್ಕೆ 15 ಲಕ್ಷ ಡೋಸ್‌ ಬರುತ್ತದೆ ಎಂದು ಮಾಹಿತಿ ನೀಡಿದರು.

ತಕ್ಷಣವೇ ಲಸಿಕೆ ಅಭಿಯಾನದ ಕಾರ್ಯತಂತ್ರವನ್ನು ಬದಲಿಸಬೇಕು. ಲಸಿಕೆಯನ್ನು ಯಾರಿಗೆ ನೀಡಬೇಕು ಎಂಬ ಹೊಸ ಮಾರ್ಗಸೂಚಿ ರೂಪಿಸಬೇಕಿದೆ ಎಂದು ಅವರು ಹೇಳಿದರು.

ರಾಟ್‌ ಕಿಟ್‌ ಖರೀದಿಸಿ

ವ್ಯಕ್ತಿಯ ಸ್ಯಾಂಪಲ್‌ ಸ್ವೀಕರಿಸಿದ ಐದು ನಿಮಿಷಗಳಲ್ಲಿ ಫಲಿತಾಂಶ ಕೊಡುವ ರಾಟ್‌ ಕಿಟ್‌ಗಳನ್ನು ಎಷ್ಟು  ಅಗತ್ಯವೋ ಅಷ್ಟೂ ಖರೀದಿ ಮಾಡಲು ಡಿಸಿಎಂ ಅವರು ಅಧಿಕಾರಿಗಳಿಗೆ ಸೂಚಿಸಿದರು. ಈ ಕಿಟ್‌ಗೆ ಐಸಿಎಂಅರ್‌ ಕೂಡ ಮಾನ್ಯತೆ ನೀಡಿದ್ದು, ರೋಗ ಲಕ್ಷಣಗಳಿದ್ದರೆ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದರು.

ಉಳಿದಂತೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಕೋವಿಡ್‌ ವಾರಿಯರ್‌ಗಳು, ವೈದ್ಯರು, ನರ್ಸುಗಳಿಗೆ ಸೋಂಕು ತಗುಲುತ್ತಿದ್ದು, ಆಯಾ ಜಿಲ್ಲೆಗಳ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕೋವಿಡ್‌ ಕರ್ತವ್ಯಕ್ಕೆ ತಕ್ಷಣವೇ ನಿಯೋಜಿಸುವಂತೆ ಉಪ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

ಜತೆಗೆ, ವೈದ್ಯಕೀಯ ಸಿಬ್ಬಂದಿ ಬಳಕೆ ಮಾಡುವ ವಸ್ತುಗಳ ಕೊರತೆಯಾಗಬಾರದು. ಮಾಸ್ಕ್‌, ಪಿಪಿಎ ಕಿಟ್‌, ಸ್ಯಾನಿಟೈಸರ್‌ ಇತ್ಯಾದಿಗಳು ಅಗತ್ಯ ಪ್ರಮಾಣದಲ್ಲಿ ಸದಾ ಲಭ್ಯ ಇರಬೇಕು ಎಂದು ಡಿಸಿಎಂ ಸೂಚಿಸಿದರು.

ಸಭೆಯಲ್ಲಿ ಕಾರ್ಯಪಡೆ ಸದಸ್ಯರೂ ಸಚಿವರೂ ಆದ ಡಾ.ಕೆ.ಸುಧಾಕರ್‌, ಎಸ್.‌ಸುರೇಶ್‌ ಕುಮಾರ್‌, ಸಿ.ಸಿ.ಪಾಟೀಲ್‌ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಆಖ್ತರ್  ಸೇರಿದಂತೆ ಇತರ ಉನ್ನತ ಅಧಿಕಾರಿಗಳು ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *