ಕೆಕೆಆರ್ಡಿಬಿಯಿಂದ 7 ಜಿಲ್ಲೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಪ್ರಯತ್ನ: ದತ್ತಾತ್ರೇಯ ಪಾಟೀಲ್ ರೇವೂರ
ಕಲಬುರಗಿ : ಪ್ರಸಕ್ತ ಕೋವಿಡ್-19 ಸಂದರ್ಭದಲ್ಲದೆ, ಆಕ್ಸಿಜನ್ ಸಮಸ್ಯೆ ಶಾಶ್ವತವಾಗಿ ನಿವಾರಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ 7 ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಅವರು ಘೋಷಿಸಿದ್ದಾರೆ.
ಕೆಕೆಆರ್ಡಿಬಿಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡುತ್ತಾ, ಕೋವಿಡ್ ಸೋಂಕಿತರಿಗೆ ಅಕ್ಸಿಜನ್ ಪೂರೈಕೆ ನಿಟ್ಟಿನಲ್ಲಿ ಸದ್ಯಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ 150 ಜಂಬೋ ಸಿಲಿಂಡರ್ ವ್ಯವಸ್ಥೆ ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಮಂಡಳಿ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಿಗೂ ಜಂಬೋ ಸಿಲಿಂಡರ್ ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ನಾಳೆ 6 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದು, ಈ ವಿಷಯಗಳ ಸಂಬಂಧ ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ಕೋವಿಡ್ ಸುರಕ್ಷಾ ಚಕ್ರ ಸಹಾಯವಾಣಿ ಕಳೆದ ವರ್ಷ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ವರ್ಷವೂ ಮುಂದುವರೆಸಲಾಗಿದೆ ಎಂದು ಅವರು ಹೇಳಿದರು.
2.50 ಕೋಟಿ ರೂಪಾಯಿ ವೆಚ್ಚದಲ್ಲಿ ಎಸ್ಎನ್ಸಿಯು ಮಕ್ಕಳ ಆಸ್ಪತ್ರೆಯ ಕಾಮಗಾರಿ ಮುಗಿದು ಸಿದ್ದವಾಗಿದ್ದು, ಇದನ್ನು ಸದ್ಯಕ್ಕೆ ಕೋವಿಡ್ ಆಸ್ಪತ್ರೆಗೆ ಬಳಸಿಕೊಳ್ಳಲಾಗುವುದು. 65 ಬೆಡ್ ಸಾಮಥ್ರ್ಯದ ಈ ಆಸ್ಪತ್ರೆ ಆಕ್ಸಿಜನ್ ಸೇರಿದಂತೆ ಎಲ್ಲಾ ವ್ಯವಸ್ಥೆ ಹೊಂದಿದ್ದು, ಕೋವಿಡ್ ಸೋಂಕಿತರಿಗೆ ಅನುಕೂಲವಾಗಲಿದೆ. ಈ ಮೂಲಕ ಜಿಮ್ಸ್ ಆಸ್ಪತ್ರೆಯ ಹಾಸಿಗೆ ಸಾಮಥ್ರ್ಯ ಹೆಚ್ಚಲಿದೆ ಎಂದು ಹೇಳಿದರು.
2021-22 ಸಾಲಿನಲ್ಲಿ ಬಜೆಟ್ನಲ್ಲಿ ರಾಜ್ಯ ಸರ್ಕಾರ ಮಂಡಳಿಗೆ 1,500 ಕೋಟಿ ರೂಪಾಯಿ ಘೋಷಿಸಿದೆ. ಆರು ಜಿಲ್ಲೆಗಳ ಶಾಸಕರು ಕಾಮಗಾರಿಗಳ ಪಟ್ಟಿಯನ್ನು ನೀಡಿದ ಬಳಿಕ ಜಿಲ್ಲಾಧಿಕಾರಿಗಳಿಂದ ಕ್ರಿಯಾಯೋಜನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಈ ವಿಭಾಗದ 6 ಜಿಲ್ಲೆಗಳಿಗೆ ಒಟ್ಟು 9 ಎಎಲ್ಎಸ್ (ಆಧುನಿಹ ವೈದ್ಯಕೀಯ ಉಪಕರಣಗಳುಳ್ಳ ವಾಹನ) ಅಂಬ್ಯುಲೆನ್ಸ್ ನೀಡಲಾಗಿದ್ದು, ಈ ಪೈಕಿ 8 ವಾಹನಗಳು ಕಾರ್ಯಾಚರಣೆಗಿಳಿದಿವೆÉ. ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ನೀಡಿರುವ ಅಂಬ್ಯುಲೆನ್ಸ್ ಮಾತ್ರ ಆರ್ಟಿಓ ಅನುಮತಿ ಬಾಕಿ ಇದ್ದು, ಸದ್ಯದಲ್ಲೇ ಸೇವೆಗೆ ಬಳಕೆಯಾಗಲಿದೆ ಎಂದು ಹೇಳಿದರು.