ಇಂದಿನಿಂದ ನಿತ್ಯ 20,000 ರೆಮಿಡಿಸಿವರ್ ಡೋಸ್ ಪೂರೈಕೆಗೆ ಔಷಧ ಕಂಪನಿಗಳ ಒಪ್ಪಿಗೆ : DCM ಅಶ್ವತ್ಥನಾರಾಯಣ

ಬೆಂಗಳೂರು: ಕೋವಿಡ್‌ ಸೋಂಕಿತರಿಗೆ ನೀಡಲಾಗುವ ರೆಮಿಡಿಸಿವರ್‌ ಕೊರತೆ ನೀಗಿಸುವ ನಿಟ್ಟಿನಲ್ಲಿ ಇಂದಿನಿಂದ (ಮೇ 6) ದಿನಕ್ಕೆ 20,000 ರೆಮಿಡಿಸಿವರ್‌ ಡೋಸ್‌ಗಳನ್ನು ಪೂರೈಸಲು ನಾಲ್ಕು ಔಷಧ ಕಂಪನಿಗಳು ಒಪ್ಪಿಕೊಂಡಿವೆ ಎಂದು ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.

ಈ ಕುರಿತು ಅಧಿಕಾರಿಗಳ ಸಭೆ ನಡೆಸಿದ ಡಿಸಿಎಂ ಅವರು ಚರ್ಚೆಯ ನಡುವೆಯೇ ರೆಮಿಡಿಸಿವರ್‌ ಸೇರಿ ವಿವಿಧ ಔಷಧಗಳನ್ನು ಒದಗಿಸುತ್ತಿರುವ ನಾಲ್ಕು ಕಂಪನಿಗಳಾದ ಮೈಲಾನ್‌, ಸಿಪ್ಲಾ, ಜ್ಯುಬಿಲಿಯೆಂಟ್‌ ಹಾಗೂ ಸಿಂಜಿನ್‌ ಕಂಪನಿಗಳ ಮುಖ್ಯಸ್ಥರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.

ಮುಂದಿನ ಐದು ದಿನದ ಬೇಡಿಕೆ ಹಾಗೂ ತದನಂತರದ ಬೇಡಿಕೆ ದೃಷ್ಟಿಯಲ್ಲಿಟ್ಟುಕೊಂಡು ಹೆಚ್ಚಿನ ಪ್ರಮಾಣದ ಔಷಧಿಯನ್ನು ಮೊದಲೇ ಪೂರೈಕೆ ಮಾಡುವಂತೆ ಕೋರಿದ್ದೇನೆ. ಎಲ್ಲ ಕಂಪನಿಗಳ ಮುಖ್ಯಸ್ಥರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಡಿಸಿಎಂ ಹೇಳಿದರು.
ಈಗ ದಿನಕ್ಕೆ 10,000 ಡೋಸ್‌ ರೆಮಿಡಿಸಿವರ್‌ ಅನ್ನು ಈ ಕಂಪನಿಗಳು ಪೂರೈಕೆ ಮಾಡುತ್ತಿವೆ. ಇಂದಿನಿಂದ ದಿನಕ್ಕೆ ಕನಿಷ್ಠ 20,000 ಡೋಸ್‌ ರೆಮಿಡಿಸಿವರ್‌ ಅನ್ನು ಪೂರೈಕೆ ಮಾಡುವಂತೆ ಕೋರಿದೆ. ಅದಕ್ಕೆ ಕಂಪನಿಗಳು ಒಪ್ಪಿವೆ. ಈ ತಿಂಗಳ 9ನೇ ತಾರೀಖಿನ ನಂತರ ದಿನಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯ  ರೆಮಿಡಿಸಿವರ್‌ ಡೋಸ್‌ ರಾಜ್ಯಕ್ಕೆ ಹಂಚಿಕೆ ಮಾಡುವಂತೆ ಕೋರಲಾಗಿದೆ. ಜಾಗತಿಕ ಟೆಂಡರ್ ಕರೆದಿದ್ದು ಒಂದು ವಾರದಲ್ಲಿ ಅದು ಕೂಡ ಅಂತಿಮವಾಗಲಿದೆ ಎಂದು ಡಿಸಿಎಂ ಸಭೆಯ ನಂತರ ಮಾಧ್ಯಮಗಳಿಗೆ ತಿಳಿಸಿದರು.

ಸಿಪ್ಲಾ ಕಂಪನಿಯ ಗ್ಲೋಬಲ್‌ ಹೆಡ್ ನಿಖಿಲ್‌ ಪಾಸ್ವಾನ್‌, ಮೈಲಾನ್‌ ಕಂಪನಿಯ ಸಿಇಒ ರಾಕೇಶ್‌, ಸಿಂಜನ್‌ ಕಂಪನಿಯ ಕಿರಣ್‌ ಮಜುಂದಾರ್‌ ಶಾ ಹಾಗೂ ಜ್ಯುಬಿಲಿಯೆಂಟ್‌ ಕಂಪನಿಯ ಉನ್ನತ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿ, ಆದಷ್ಟ ಬೇಗ ಸರಬರಾಜು‌ ಮಾಡುವಂತೆ ಕೋರಿದೆ. ರೆಮಿಡಿಸಿವರ್‌ ಜತೆಗೆ ಉಳಿಕೆ ಯಾವುದೆಲ್ಲ ಔಷಧಿ ಬೇಕಾಗಿದೆ, ಅದೆಲ್ಲವನ್ನು ನಿಗದಿತ ಸಮಯಕ್ಕೆ ಮೊದಲೇ ಪೂರೈಕೆ ಮಾಡಬೇಕೆಂದು ಕೇಳಿದ್ದೇನೆ. ಸರಕಾರದ ಮನವಿಗೆ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದರು. ಇನ್ನೊಂದು ವಾರದಲ್ಲಿ ಈ ಎಲ್ಲ ಸಮಸ್ಯೆಗಳು ನೀಗಲಿವೆ ಎಂದು ಡಿಸಿಎಂ ಹೇಳಿದರು.

ರೆಮಿಡಿಸಿವರ್‌ ಬಳಕೆಯಲ್ಲಿ ಪಾರದರ್ಶಕತೆ

ಈವರೆಗೆ ರೆಮಿಡಿಸಿವರ್‌ ಬಗ್ಗೆ ಕೊರತೆ ಎಂದು ಎಲ್ಲರೂ ಕೇಳಿದ್ದೀರಿ. ಇನ್ನು ಮುಂದೆ ಈ ಮಾತಿಗೆ ಅವಕಾಶವೇ ಇರುವುದಿಲ್ಲ. ಎಷ್ಟು ಬೇಕೋ ಅಷ್ಟೂ ರೆಮಿಡಿಸಿವರ್‌ ಅನ್ನು ಸರಕಾರದ ಪಡೆದುಕೊಂಡು ವೈಜ್ಞಾನಿಕವಾಗಿ ಯಾರಿಗೆ ಅಗತ್ಯವಿದೆಯೋ ಅವರಿಗೆ ನೀಡಲಿದೆ. ಎಷ್ಟು ಡೋಸ್‌ ಬಂದಿದೆ? ಎಷ್ಟು ಖರ್ಚಾಗಿದೆ? ಎಷ್ಟು ಉಳಿದಿದೆ? ಎಂಬ ಲೈವ್‌ ಸ್ಟೇಟಸ್‌ ಜತೆಗೆ, ಈ ಚುಚ್ಚುಮದ್ದು ಯಾರು ಪಡೆದರು? ಯಾರಿಗೆ ಎಷ್ಟು ಡೋಸ್‌ ನೀಡಲಾಗಿದೆ? ಎಂಬೆಲ್ಲ ಅಂಶಗಳು ಪಬ್ಲಿಕ್‌ ಡೊಮೈನ್‌ನಲ್ಲಿ ಮುಕ್ತವಾಗಿ ಪ್ರಕಟಿಸಲಾಗುವುದು. ಯಾವುದೇ ಮಾಹಿತಿಯನ್ನು ಮುಚ್ಚಿಡುವುದಿಲ್ಲ ಎಂದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.ಸಿಬ್ಬಂದಿ ಕೊರತೆಯಾಗಂತೆ ಕ್ರಮ

ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್‌ ಸೇರಿ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 17,797 ಹೆಚ್ಚು ದ್ವಿತೀಯ & ಅಂತಿಮ ವರ್ಷದ ವಿದ್ಯಾರ್ಥಿಗಳಿದ್ದು (ಇಂಟರ್ನಿಗಳೂ ಸೇರಿ), ಇವರ  ಸೇವೆಯನ್ನು ಕೋವಿಡ್‌ ನಿರ್ವಹಣೆಗೆ ಬಳಸಿಕೊಳ್ಳುವ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಆರೋಗ್ಯ ವಿವಿ ಉಪ ಕುಲಪತಿ ಡಾ.ಸಚ್ಚಿದಾನಂದ ಅವರ ಜತೆ ಚರ್ಚೆ ನಡೆಸಿದ್ದೇನೆ. ಇವರಲ್ಲಿ ಅನೇಕರು ಈಗಾಗಲೇ ಆಯಾ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರೂ ಕೋವಿಡ್‌ ಕರ್ತವ್ಯ ನಿರ್ವಹಿಸಿದರೆ ಹೆಚ್ವು ಅನುಕೂಲವಾಗಲಿದೆ. ಈ ಬಗ್ಗೆ ಕೇಂದ್ರ ಸರಕಾರದ ಮಾರ್ಗಸೂಚಿ ಇದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.
ಇದರ ಜತೆಗೆ, ದಂತ ವ್ಯದ್ಯ ವಿಭಾಗದಲ್ಲಿ 5,000 ಹಾಗೂ ಆಯುಷ್‌ ವಿಭಾಗದಲ್ಲಿ 9,000, ಫಾರ್ಮಸಿ 9,900, ಇತರೆ ವಿಭಾಗದಲ್ಲಿ 10,000 ಹಾಗೂ ನರ್ಸಿಂಗ್‌ನಲ್ಲಿ 45,470 ಅಂತಿಮ-ಪಿಜಿ & ಇಂಟರ್ನಿ ವಿದ್ಯಾರ್ಥಿಗಳಿದ್ದು, ಇವರೆಲ್ಲರ ಸೇವೆಯನ್ನೂ ಈ ಪಿಡುಗಿನ ವಿರುದ್ಧ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಕುರಿತು ಎಲ್ಲ ಕ್ರಮಗಳನ್ನು ಸರಕಾರ ಕೈಗೊಂಡಿದೆ. ಎಲ್ಲೆಲ್ಲಿ ಬೇಡಿಕೆ ಇರುತ್ತದೋ ಅಲ್ಲಿಗೆ ಈ ವಿದ್ಯಾರ್ಥಿಗಳನ್ನು ನಿಯೋಜಿಸಲಾಗುವುದು ಹಾಗೂ ಇವರೆಲ್ಲರಿಗೂ ಸರಕಾರ ಗೌರವ ಧನ ನೀಡುತ್ತದೆ ಎಂದರು ಡಿಸಿಎಂ.

ಸಿಟಿ ಸ್ಕ್ಯಾನ್‌ ಬಗ್ಗೆ ಮಾರ್ಗಸೂಚಿ

ಇದೇ ವೇಳೆ ಕೋವಿಡ್‌ ಪರೀಕ್ಷೆ ಮಾಡಿಸುವ ನಿಟ್ಟಿನಲ್ಲಿ ಎಲ್ಲೆಡೆ ಸಿಟಿ ಸ್ಕ್ಯಾನ್‌ ಮಾಡಿಸುತ್ತಿರುವ ದೂರುಗಳು ಬಂದಿದ್ದು, ಈ ಬಗ್ಗೆ ಸರಕಾರ ಸ್ಪಷ್ಟ ಮಾರ್ಗಸೂಚಿಯನ್ನು ಹೊರಡಿಸಿದೆ. ಅಗತ್ಯವಿದ್ದರೆ ಮಾತ್ರ ಈ ಸ್ಕ್ಯಾನಿಂಗ್‌ ಮಾಡಿಸಬೇಕು. ಇಲ್ಲವಾದರೆ ಅನಗತ್ಯ ಎಂದು ಡಿಸಿಎಂ ಹೇಳಿದರು. ಇದರ ಜತೆಗೆ, ಆಸ್ಪತ್ರೆಗಳಲ್ಲಿ ಗುಣಮುಖರಾದ ಸೋಂಕಿತರನ್ನು ಹತ್ತು ದಿನ ಮುಗಿದರೂ ಆಸ್ಪತ್ರೆಗಳಲ್ಲೇ ಇಟ್ಟುಕೊಳ್ಳುತ್ತಿದ್ದಾರೆ. ಹಾಗೆ ಸೋಂಕಿತರನ್ನು ಹೆಚ್ಚು ಕಾಲ ಇಟ್ಟುಕೊಳ್ಳುವುದು ತಪ್ಪು. ಹೊಸ ಸೋಂಕಿತರಿಗೆ ಇದರಿಂದ ಬೆಡ್‌ ಸಿಗುವುದಿಲ್ಲ. ಹೀಗಾಗಿ ಐದು ದಿನ ಚಿಕಿತ್ಸೆ ಕೊಟ್ಟ ನಂತರ ಅಂಥ ಸೋಂಕಿತರನ್ನು ಸ್ಟೆಪ್‌ಡೌನ್‌ ಆಸ್ಪತ್ರೆಗಳಿಗೆ ಶಿಫ್ಟ್‌ ಮಾಡಬೇಕು ಎಂದು ಎಲ್ಲ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಆರೋಗ್ಯ ಇಲಾಖೆಯ ಹೆಚ್ಚುವರಿ  ಮುಖ್ಯ ಕಾರ್ಯದರ್ಶಿ ಜಾವೇದ್‌ ಆಖ್ತರ್‌, ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ ಚಂದ್ರ, ಡಿಸಿಎಂ ಕಾರ್ಯದರ್ಶಿ ಪ್ರದೀಪ್‌ ಪ್ರಭಾಕರ್‌ ಸೇರಿದಂತೆ ರೆಮಿಡಿಸವರ್‌ ಉಸ್ತುವಾರಿ ಅಧಿಕಾರಿಗಳೆಲ್ಲರೂ ಹಾಜರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *