Corona Virus: ಕೊರೋನಾಗೆ ಕವಿರತ್ನ ಕಾಳಿದಾಸ ನಿರ್ದೇಶಕ ರೇಣುಕಾ ಶರ್ಮಾ ಬಲಿ !

ಕೊರೊನಾ: ಸ್ಯಾಂಡಲ್ವುಡ್ ಗೆ ಮತ್ತೊಂದು ಕೊರೋನಾಘಾತ ಉಂಟಾಗಿದೆ. ಕನ್ನಡ ಚಿತ್ರರಂಗವನ್ನು ಕಣ್ಣಿಗೆ ಕಾಣದ ಕೊರೋನಾ ಸೋಂಕು ಬೆಂಬಿಡದೇ ಕಾಡುತ್ತಿದೆ. ಕಳೆದ ಎರಡು ವಾರಗಳಲ್ಲಿ ಬರೋಬ್ಬರಿ 12ಕ್ಕೂ ಹೆಚ್ಚು ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಇದೀಗ ಕವಿರತ್ನ ಕಾಳಿದಾಸ, ಅಂಜದ ಗಂಡು, ಕಿಂದರಿ ಜೋಗಿ ಅಂತಹ ಹಿಟ್, ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ರೇಣುಕಾ ಶರ್ಮಾ ನಿನ್ನೆ ತಡರಾತ್ರಿ ಕೊರೋನಾ ಸೋಂಕಿನಿಂದಾಗಿ ವಿಧಿ ವಶರಾಗಿದ್ದಾರೆ. 

ಕೊರೋನಾ ಸೋಂಕು ಇರುವುದು ದೃಢವಾದ ಬೆನ್ನಲ್ಲೇ ನಿರ್ದೇಶಕ ರೇಣುಕಾ ಶರ್ಮಾ ಅವರ ಕುಟುಂಬದವರು ಅವರನ್ನು  ಎರಡು ದಿನಗಳ ಹಿಂದಷ್ಟೆ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಶ್ವಾಸಕೋಶದಲ್ಲಿ ಸೋಂಕು ಹೆಚ್ಚಾಗಿ, ಕ್ರಮೇಣ ಅದು ನ್ಯುಮೋನಿಯಾ  ಆಗಿ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡ ರಾತ್ರಿ ರೇಣುಕಾ ಶರ್ಮಾ ಅವರೂ ವಿಧಿವಶರಾಗಿದ್ದಾರೆ.

1981ರಲ್ಲಿ ಅನುಪಮ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಿದ ರೇಣುಕಾ ಶರ್ಮಾ ಅವರು ಮತ್ತೆ ಹಿಂದಿರುಗಿ ನೀಡಲಿಲ್ಲ. 1983ರಲ್ಲಿ ಕವಿರತ್ನ ಕಾಳಿದಾಸ, 1985ರಲ್ಲಿ ಶಹಬ್ಬಾಸ್ ವಿಕ್ರಮ್, 1986ರಲ್ಲಿ ಸತ್ಕಾರ ಹಾಗೂ ನಮ್ಮ ಊರು ದೇವತೆ, 1988ರಲ್ಲಿ ಅಂಜದ ಗಂಡು, 1989ರಲ್ಲಿ ಕಿಂದರಿ ಜೋಗಿ, 1990ರಲ್ಲಿ ಶಬರಿ ಮಲೆ ಶ್ರೀ ಅಯ್ಯಪ್ಪ, 1992ರಲ್ಲಿ ಭರ್ಜರಿ ಗಂಡು ಹಾಗೂ ಹಟಮಾರಿ ಹೆಣ್ಣು ಕಿಲಾಡಿ ಗಂಡು, 1993ರಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕೆ ಸಿನಿಮಾಗಳನ್ನು ನಿರ್ದೇಶಿಸಿದ್ದರು. ನಂತರ ಕಾರಣಾಂತರಗಳಿಂದ ಬ್ರೇಕ್ ನಲ್ಲಿದ್ದ ನಿರ್ದೇಶಕ ರೇಣುಕಾ ಶರ್ಮಾ ಅವರು ಬರೋಬ್ಬರಿ 12 ವರ್ಷಗಳ ನಂತರ ಅಂದ್ರೆ 2005ರಲ್ಲಿ  ಮಹಾಸಾಧ್ವಿ ಮಲ್ಲಮ್ಮ ಸಿನಿಮಾ ನಿರ್ದೇಶನ ಮಾಡಿದರು. ಅದೇ ಅವರು ನಿರ್ದೇಶನದ ಕೊನೆಯ ಚಿತ್ರ ಕೂಡ ಹೌದು.

ಕಳೆದ ಎರಡು ವಾರಗಳಿಂದ ಕೊವಿಡ್ ಸೋಂಕಿಗೆ ಸ್ಯಾಂಡಲ್‌ವುಡ್‌ನ ಸರಿ ಸುಮಾರು ಹತ್ತು ಮಂದಿ ಸೆಲೆಬ್ರಿಟಿಗಳು ಬಲಿಯಾಗಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅರ್ಥಾತ್ ಮೇ ೨ರಂದು ಮಿಸ್ಡ್ ಕಾಲ್ ಎಂಬ ಸಿನಿಮಾ ನಿರ್ಮಿಸಿದ್ದ ಚಂದ್ರ ಅವರು ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಹಾಗೇ ಮೇ ೧ರಂದು ೨೦೧೧ರಲ್ಲಿ ಒನ್ ಡೇ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನವೀನ್ ಕುಮಾರ್ ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದಿದ್ದರು. ಅವರಿಗೆ ಕೇವಲ 36 ವರ್ಷ ವಯಸ್ಸಾಗಿತ್ತು. ಏಪ್ರಿಲ್ ೨೨ರಂದು ಹಿರಿಯ ನಿರ್ಮಾಪಕ ಅಣ್ಣಯ್ಯ, ಬಿಂದಾಸ್, ರನ್ನ ಸಿನಿಮಾಗಳನ್ನು ನಿರ್ಮಿಸಿದ್ದ ಎಂ. ಚಂದ್ರಶೇಖರ್ ಅವರು ಕೊವಿಡ್‌ಗೆ ಬಲಿಯಾಗಿದ್ದರು. ಹಾಗೇ ಕರ್ನಾಟಕ ಚಲನಚಿತ್ರ ವರ್ಣಾಲಂಕಾರ ಕಲಾವಿದರ ಸಂಘದ ಉಪಾಧ್ಯಕ್ಷ ಆರ್. ಶ್ರೀನಿವಾಸ್ ಕೂಡ ಕೆಲ ದಿನಗಳ ಹಿಂದಷ್ಟೇ ಈ ಮಹಾಮಾರಿಗೆ ತುತ್ತಾಗಿದ್ದರು.

ಹಿರಿಯ ನಿರ್ದೇಶಕ, ಹೆಸರಾಂತ ಪೋಸ್ಟರ್ ಡಿಸೈನರ್ ಮಸ್ತಾನ್ ಕೂಡ ಇದೇ ಏಪ್ರಿಲ್ ೨೧ರಂದು ಕೊವಿಡ್ ಸೋಂಕಿಗೆ ಬಲಿಯಾಗಿದ್ದರು. ಸುಮಾರು ೪ ದಶಕಗಳ ಸುದೀರ್ಘ ಸಿನಿಮಾ ಪಯಣದಲ್ಲಿ ಎರಡು ಸಾವಿರಕ್ಕೂ ಅಧಿಕ ಸಿನಿಮಾಗಳಿಗೆ ಪೋಸ್ಟರ್ ಡಿಸೈನ್ ಮಾಡಿದ್ದ ಅವರು ಶಂಕರಾಭರಣ, ಕಲ್ಲೇಶಿ ಮಲ್ಲೇಶಿ ಹಾಗೂ ಸಿತಾರಾ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಅವರಿಗೆ ೬೩ ವರ್ಷ ವಯಸ್ಸಾಗಿತ್ತು. ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿದ್ದ ರಾಮು ಅವರೂ ಸಹ ಇದೇ ಕೊರೋನಾ ಸೋಂಕಿಗೆ ವಿಧಿವಶರಾದರು.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೇ ಏಪ್ರಿಲ್ ೨೬ರಂದು ನಿಧನ ಹೊಂದಿದರು. ಅವರಿಗೆ ೫೩ ವರ್ಷ ವಯಸ್ಸಾಗಿತ್ತು. ಹಾಗೇ ಏಪ್ರಿಲ್ ೧೮ರಂದು ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ ೨ ಚಿತ್ರಗಳ ಖ್ಯಾತಿಯ ನಿರ್ಮಾಪಕ ಡಾ. ಡಿ ಎಸ್ ಮಂಜುನಾಥ್ ಕೊನೆಯುಸಿರೆಳೆದಿದ್ದರು. ಜೀರೋ ಪರ್ಸೆಂಟ್ ಲವ್ ಎಂಬ ಚಿತ್ರದ ಮೂಲಕ ಡಾ. ಡಿ ಎಸ್ ಮಂಜುನಾಥ್ ನಾಯಕನಾಗಿ ಪದಾರ್ಪಣೆ ಮಾಡಬೇಕಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *