5 ಜಿ ಪ್ರಯೋಗಕ್ಕೆ ಚೀನಾ ಕಂಪೆನಿಗಳಿಗಿಲ್ಲ ಅನುಮತಿ: ಭಾರತದ ನಿರ್ಧಾರಕ್ಕೆ ಅಮೆರಿಕ ಶ್ಲಾಘನೆ

ಹೈಲೈಟ್ಸ್‌:

  • ಭಾರತದಲ್ಲಿ 5ಜಿ ದೂರಸಂಪರ್ಕ ನೆಟ್‌ವರ್ಕ್ ಪ್ರಯೋಗ
  • ಚೀನಾದ ಹುವೈ, ಜೆಡ್‌ಟಿಇ ಕಂಪೆನಿಗಳಿಗೆ ಸಿಗದ ಅನುಮತಿ
  • ಭಾರತದ ಕ್ರಮವನ್ನು ಕೊಂಡಾಡಿದ ಅಮೆರಿಕ
  • ಚೀನಾ ಸರ್ಕಾರ ನಿಯಂತ್ರಿತ ಕಂಪೆನಿಗಳಿಂದ ಅಪಾಯ

ವಾಷಿಂಗ್ಟನ್: ದೇಶದಲ್ಲಿ 5ಜಿ ನೆಟ್‌ವರ್ಕ್‌ ಪ್ರಯೋಗಗಳನ್ನು ನಡೆಸಲು ಚೀನಾದ ಕಂಪೆನಿಗಳಿಗೆ ಅನುಮತಿ ನೀಡದ ಭಾರತದ ನಿರ್ಧಾರವನ್ನು ಅಮೆರಿಕದ ಹಿರಿಯ ಸಂಸದರು ಶ್ಲಾಘಿಸಿದ್ದಾರೆ. ಭಾರತೀಯ ದೂರಸಂಪರ್ಕ ಇಲಾಖೆಯು 5ಜಿ ಪ್ರಯೋಗಗಳನ್ನು ನಡೆಸಲು ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಎಂಟಿಎನ್‌ಎಲ್‌ಗಳ ಅರ್ಜಿಗಳಿಗೆ ಅನುಮೋದನೆ ನೀಡಿದೆ. ಆದರೆ ಈ ಯಾವ ಕಂಪೆನಿಗಳೂ ಚೀನಾ ಸಂಸ್ಥೆಗಳ ತಂತ್ರಜ್ಞಾನ ಬಳಸುತ್ತಿಲ್ಲ.

‘5ಜಿ ಪ್ರಯೋಗದಿಂದ ಹುವೈ ಮತ್ತು ಜೆಡ್‌ಟಿಇಗಳನ್ನು ಹೊರಗಿಡುವ ಭಾರತದ ನಿರ್ಧಾರವು ಭಾರತದ ಹಾಗೂ ಜಗತ್ತಿನ ಜನರಿಗೆ ಉತ್ತಮ ಸುದ್ದಿಯಾಗಿದೆ’ ಎಂದು ಅಮೆರಿಕದ ಹೌಸ್ ಅಫೇರ್ಸ್ ಕಮಿಟಿ ಲೀಡ್ ರಿಪಬ್ಲಿಕನ್ ಮತ್ತು ಚೀನಾ ಟಾಸ್ಕ್ ಫೋರ್ಸ್ ಅಧ್ಯಕ್ಷ ಮಿಖಾಯಲ್ ಮೆಕ್‌ಕೌಲ್ ಬುಧವಾರ ಹೇಳಿಕೆ ನೀಡಿದ್ದಾರೆ.

‘ಹುವೈ ಮತ್ತು ಜೆಡ್‌ಟಿಇ ಸೇರಿದಂತೆ ಚೀನಾದ ಯಾವುದೇ ಕಂಪೆನಿಯು ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಪಕ್ಷವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಕಾನೂನು ಹೇಳುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಚೀನಾದ ತಾಂತ್ರಿಕ ಕಂಪೆನಿಗಳು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಎಂದು ಅಮೆರಿಕದ ಹಿಂದಿನ ಟ್ರಂಪ್ ಸರ್ಕಾರ ಗುರುತಿಸಿತ್ತು. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಸರ್ಕಾರ ನಿಯಂತ್ರಣದಲ್ಲಿರುವ ಯಾವುದೇ ತಂತ್ರಜ್ಞಾನಗಳನ್ನು ಬಳಸಿಕೊಳ್ಳದಂತೆ ಅಮೆರಿಕ ತನ್ನ ಮಿತ್ರ ದೇಶಗಳಿಗೆ ಮನವಿ ಮಾಡುತ್ತಿದೆ.

‘ಈ ಕಂಪೆನಿಗಳನ್ನು ನಮ್ಮ ನೆಟ್‌ವರ್ಕ್‌ನಿಂದ ಹೊರಗಿಡದೆ ಹೋದರೆ ನಮಗೆ ಅಪಾಯ ತಪ್ಪಿದ್ದಲ್ಲ. ಈ ಬೆದರಿಕೆಯನ್ನು ಭಾರತ ಗ್ರಹಿಸಿರುವುದು ಸಂತಸವಾಗುತ್ತಿದೆ. ಚೀನಾ ಕಮ್ಯುನಿಸ್ಟ್ ಪಕ್ಷ ನಿಯಂತ್ರಣದ ತಂತ್ರಜ್ಞಾನದಿಂದ ಎದುರಾಗುವ ಭದ್ರತೆಯ ಅಪಾಯದ ವಿರುದ್ಧದ ಹೋರಾಟದಲ್ಲಿ ತಾನು ಏಕೆ ಜಾಗತಿಕ ನಾಯಕ ಎಂಬುದನ್ನು ಭಾರತ ಮತ್ತೊಮ್ಮೆ ಸಾಬೀತುಪಡಿಸಿದೆ’ ಎಂದು ಮೆಕ್‌ಕೌಲ್ ಹೇಳಿದ್ದಾರೆ.

ಸಂಸದ ಮೈಕ್ ವಾಲ್ಟ್ಜ್ ಕೂಡ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ. ‘ಸಿಸಿಪಿ ಸ್ವಾಮ್ಯದ ದೂರ ಸಂವಹನವನ್ನು ಸೇರಿಸಿಕೊಳ್ಳಲು ನಿರಾಕರಿಸಿರುವುದಕ್ಕಾಗಿ ಭಾರತಕ್ಕೆ ಧನ್ಯವಾದಗಳು’ ಎಂದು ಅವರು ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *