ಕಲಬುರಗಿ : ಬಾಕಿ ವೇತನ ಪಾವತಿಸಿ ನೀರು ಸರಬರಾಜು ನಿರ್ವಹಣೆ ಹಸ್ತಾಂತರಕ್ಕೆ ಸಚಿವರಿಗೆ ಮಾನ್ಪಡೆ ಮನವಿ
ಕಲಬುರಗಿ : ನಗರದ ನೀರು ಸರಬರಾಜು ನಿರ್ವಹಣೆಯನ್ನು ಎಲ್ಆಂಡ್ಟಿ ಕಂಪೆನಿಗೆ ಹಸ್ತಾಂತರ ಮಾಡುವ ಮುನ್ನ ಹೊರ ಗುತ್ತಿಗೆ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಮತ್ತು ಬಾಕಿ ಉಳಿಸಿಕೊಂಡಿರುವ ವೇತನವನ್ನು ಪಾವತಿ ಮಾಡಿದ ತರುವಾಯ ನೀರು ಸರಬರಾಜು ನಿರ್ವಹಣೆಯನ್ನು ಎಲ್ಆಂಡ್ಟಿ ಕಂಪೆನಿಗೆ ಹಸ್ತಾಂತರ ಮಾಡಬೇಕೆಂದು ಆಗ್ರಹಿಸಿ ಗಣಿ ಹಾಗೂ ಭೂ ವಿಜ್ಞಾನ ಮತ್ತು ನೂತನ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಸುನೀಲ್ ಮಾನ್ಪಡೆಯವರು ಮನವಿ ಪತ್ರ ಸಲ್ಲಿಸಿದರು.
ಮಹಾನಗರದ ಪಾಲಿಕೆಯ ಅಧೀನದಲ್ಲಿರುವ ನೀರು ಸರಬರಾಜು ನಿರ್ವಹಣೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೂ ನಿರ್ವಹಿಸುತ್ತಿದ್ದು, ಪ್ರಸ್ತುತ ವರ್ಷದಿಂದ ನೀರು ಸರಬರಾಜು ನಿರ್ವಹಣೆಯ ಜವಾಬ್ದಾರಿಯನ್ನು ಎಲ್ಆಂಡ್ಟಿ ಕಂಪೆನಿಗೆ ವಹಿಸಿಕೊಡುವ ಬಗ್ಗೆ ಸರ್ಕಾರದ ಆದೇಶವಾಗಿದೆ. ವಿಭಾಗದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ 02/2019, 03/2019,ಮತ್ತು 04/2019ರ ಅವಧಿಯ 3 ತಿಂಗಳ ವೇತನ ಪಾವತಿಯಾಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಂದಿನ 3 ತಿಂಗಳ ವೇತನವನ್ನು ಪಾವತಿ ಮಾಡಿಕೂಡುವಂತೆ ಮನವಿಯನ್ನು ಸಲ್ಲಿಸಲಾಗಿದೆ, ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ನೀರು ಸರಬರಾಜು ನಿರ್ವಹಣೆಯನ್ನು ಹಸ್ತಾಂತರಿಸುವ ಸಂಬಂಧ ಸರ್ಕಾರವು ಜಾರಿಗೊಳಿಸಿರುವ ಆದೇಶಕ್ಕೆ ಹೊರಗುತ್ತಿಗೆ ನೌಕರರು ಸಂಘವು ಸಹ ಸರ್ಕಾರದ ಆದೇಶವನ್ನು ಗೌವರವಿಸುತ್ತದೆ. ಆದ್ದರಿಂದ ಎಲ್ಆಂಡ್ಟಿ ಕಂಪೆನಿಗೆ ನೀರು ಸರಬುರಾಜು ನಿರ್ವಹಣೆಯನ್ನು ವಹಿಸಿಕೊಡುವ ಮುನ್ನ ಹೊರಗುತ್ತಿಗೆ ನೌಕರರ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಬಗ್ಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಹಾಗೂ ಸಂಘದ ಪ್ರತಿನಿಧಿಗಳು ಸೇರಿದಂತೆ ಸಮಸ್ಯೆಯ ಬಗ್ಗೆ ಚರ್ಚಿಸಬೇಕೆಂದು ಅವರು ಕೋರಿದರು.
ಹೊರ ಗುತ್ತಿಗೆ ನೌಕರರನ್ನು ಸರ್ಕಾರ ಎಲ್&ಟಿ ಕಂಪೆನಿಗೆ ಹಸ್ತಾಂತರ ಮಾಡುವದು ನಿಲ್ಲಿಸಿ ಮಂಡಳಿಯೇ ವೇತನ ಪಾವತಿ ಮಾಡಬೇಕು. ಹೊರಗುತ್ತಿಗೆ ನೌಕರರು ಮಾರಾಟದ ಸರಕಾಗಿ ಸರ್ಕಾರ ಧೋರಣೆಯನ್ನು ನೌಕರರ ಹಿತದೃಷ್ಟಿಯಿಂದ ವಾಪಸ್ ಪಡೆಯಬೇಕು. ಹೊರಗುತ್ತಿಗೆ ಸಿಬ್ಬಂದಿಯನ್ನು ಎಲ್&ಟಿ ಕಂಪೆನಿಯವರು ಇಲ್ಲ ಸಲ್ಲದ ಕಾರಣಗಳನ್ನು ನೀಡಿ ಕೆಲಸದಿಂದ ತೆಗೆಯಲು ಮುಂದಾದಲಿ ಅಂತಹ ನೌಕರರುಗಳನ್ನು ಕಲಬುರಗಿಯ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುಬೇಕು. ಅಂಗವಿಕಲರು ಹಾಗೂ ಮಹಿಳೆಯರನ್ನು ಅನಾವಶ್ಯಕ ಕಾರಣಗಳನ್ನು ನೀಡಿ ಕೆಲಸದಿಂದ ತೆಗೆಯುವ ಸಂದರ್ಭ ಬಂದಲ್ಲಿ ಅವರ ಕುಟುಂಬ ಸದಸ್ಯರೊಬ್ಬರಿಗೆ ನೌಕರಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸೇವೆಯಲ್ಲಿರುವಾಗ ಹೊರಗುತ್ತಿಗೆ ಸಿಬ್ಬಂದಿ ನಿಧನ ಹೊಂದಿದರೆ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಬದಲಿ ವ್ಯವಸ್ಥೆಯ ಮೂಲಕ ನೌಕರಿಯನ್ನು ನೀಡಬೇಕು. ನೌಕರರಿಗೆ ಪ್ರತಿ ತಿಂಗಳು 5ರೊಳಗೆ ವೇತನ ನೀಡುವಂತೆ, ಸರ್ಕಾರದ ಆದೇಶದಂತೆ ವೇತನ ಸಹಿತ ರಜೆ ನೀಡುವಂತೆ ಮತ್ತು ಕೆಲಸ ಮಾಡುವ ಸಮಯದಲ್ಲಿ ಅವಘಡಗಳು ಸಂಭವಿಸಿ ಅಕಾಲಿಕ ಮರಣ ಹೊಂದಿದ ಸಮಯದಲ್ಲಿ ಆರ್ಥಿಕ ನೆರವು ನೀಡುವಂತೆ ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ವೆಂಕಟೇಶ್ ಬಿಕ್ಕಿ ಅವರು ಉಪಸ್ಥಿತರಿದ್ದರು.