ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಒಗ್ಗಟ್ಟಿನಿಂದ ಕೆಲಸ ಮಾಡೋಣ:ಸಚಿವ ಮುರುಗೇಶ್ ನಿರಾಣಿ

ಕೋವಿಡ್-19 ಎರಡನೇ ಅಲೆ ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಾಮಾಣಿಕವಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೋಣ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಮುರುಗೇಶ್ ನಿರಾಣಿ ಅವರು ಕರೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಕೋವಿಡ್ ನಿಯಂತ್ರಣ ಕುರಿತು ಜಿಲ್ಲೆಯ ಎಲ್ಲ್ಲಾ ಜನಪ್ರತಿನಿಧಿಗಳು ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪ್ರತಿನಿತ್ಯ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ಕುರಿತು ನಿಯಂತ್ರಣ ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಗೆ ಅಗತ್ಯ ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಆರೋಗ್ಯ ಸೇವೆಗಳನ್ನು ಪೂರೈಸಲಾಗುವುದು ಎಂದರು.

ಪ್ರತಿದಿನ ಕೋವಿಡ್ ಬುಲೆಟಿನ್ ನಲ್ಲಿ ಪ್ರಕಟಿಸುವ ಅಂಕಿ-ಅಂಶಗಳ ವಿಚಾರವಾಗಿ ಸಾರ್ವಜನಿಕರಿಗೆ ಪೂರಕವಾದ ಮಾಹಿತಿ ನೀಡಲಾಗುತ್ತಿಲ್ಲ ಎಂದು ಸಭೆಯಲ್ಲಿ ಕೇಳಿ ಬಂದ ಆರೋಪಕ್ಕೆ ಸಚಿವ ಮುರುಗೇಶ್ ನಿರಾಣಿಯವರು ಪ್ರತಿಕ್ರಿಯೆ ನೀಡಿ, ಬೆಡ್, ವೆಂಟಿಲೇಟರ್, ಆಕ್ಸಿಜನ್ ಮುಂತಾದ ಆರೋಗ್ಯ ಸೇವಾ ಲಭ್ಯತೆ ಕುರಿತು ನಿಖರವಾದ ಮಾಹಿತಿಯನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.
ಪ್ರಸ್ತುತ ರೆಮ್‍ಡಿಸಿವಿಯರ್ ಲಸಿಕೆ ಕೊರತೆ ಇದೆ. ಈಗಾಗಲೇ 200 ವೈಲ್ ರೆಮ್‍ಡಿಸಿವಿಯರ್ ಲಸಿಕೆ ಜಿಲ್ಲೆಗೆ ಪೂರೈಸಲಾಗಿದ್ದು, ಜನರ ಆರೋಗ್ಯ ದೃಷ್ಟಿಯಿಂದ ಬೇಡಿಕೆ ತಕ್ಕಂತೆ ಕೂಡಲೇ ಹೆಚ್ಚಿನ ಲಸಿಕೆ ನೀಡಲಾಗುವುದು ಎಂದರು. ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸುವಂತೆ ಜಿಲ್ಲಾಡಳಿತಕ್ಕೆ ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಕಳೆದೊಂದು ವಾರದಿಂದ ಜಿಲ್ಲೆಯ ಕೊರೋನಾ ಸೋಂಕಿತರ ಸಂಖ್ಯಾ ವರದಿ ಏರಿಕೆ ಕುರಿತು ಸಚಿವರಿಗೆ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಅವರು ಮಾಹಿತಿ ನೀಡಿದರು. ಕೋವಿಡ್ ನಿಯಂತ್ರಣಕ್ಕಾಗಿ ಗ್ರಾಮೀಣ ಭಾಗದಲ್ಲೂ ವ್ಯಾಕ್ಸಿನ್ ನೀಡುವ ಅಗತ್ಯವಿದೆ ಎಂದ ಜಿಲ್ಲಾಧಿಕಾರಿಗಳು, ಸದ್ಯದಲ್ಲೇ ಆಕ್ಸಿಜನ್ ವಾರ್ ರೂಂ ರಚಿಸಲಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಈ ವಾರ್ ರೂಂ ಕಾರ್ಯನಿರ್ವಹಿಸಲಿದೆ ಎಂದರು. ಪ್ರತಿ 100 ಮೀಟರ್ ವ್ಯಾಪ್ತಿಯಲ್ಲಿ 5 ಪಾಸಿಟಿವ್ ಕೊರೋನಾ ಪ್ರಕರಣಗಳು ದೃಢಪಟ್ಟರೆ, ಅದನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಲಾಗುವುದು ಎಂದು ಡಿಸಿ ಜೋತ್ಸ್ನಾ ಅವರು ವಿವರಿಸಿದರು.

ಇನ್ನು ಅಕ್ರಮ ರೆಮ್‍ಡಿಸಿವಿರ್ ಲಸಿಕೆ ಮಾರಾಟ ದಂಧೆ ಕುರಿತು ಜಿಲ್ಲೆಯ ಪೆÇಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸುತ್ತಿದೆ ಎಂದು ನಗರ ಪೆÇಲೀಸ್ ಆಯುಕ್ತ ಎನ್.ಸತೀಶ್ ಕುಮಾರ್ ಅವರು ಸಚಿವರಿಗೆ ವಿವರಿಸುತ್ತಾ, ಈಗಾಗಲೇ ನಗರದಲ್ಲಿ ಅಕ್ರಮವಾಗಿ ರೆಮ್‍ಡಿಸಿವಿಯರ್ ಮಾರಾಟ ಮಾಡುತ್ತಿರುವ ಬಗ್ಗೆ ಒಟ್ಟು 3 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ಸಭೆಯಲ್ಲಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್, ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ್ ರೇವೂರ, ಶಾಸಕರಾದ ಪ್ರಿಯಾಂಕ ಖರ್ಗೆ, ಸುಭಾಶ್ ಗುತ್ತೇದಾರ್, ಡಾ.ಅವಿನಾಶ್ ಜಾಧವ್, ಎಂ.ವೈ. ಪಾಟೀಲ್, ವಿಧಾನಪರಿಷತ್ ಸದಸ್ಯ ಶಶಿಲ್ ನಮೋಶಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ದಿಲೀಶ್ ಶಶಿ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಆರೋಗ್ಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *