ನಾಳೆ ಲಾಕ್ಡೌನ್; ಇಂದು ಬೆಂಗಳೂರು ಗಿಜಿಗಿಜಿ; ರೈಲ್ವೆ ನಿಲ್ದಾಣಗಳಲ್ಲಿ ಕಾರ್ಮಿಕರ ಸ್ತೋಮ
ಬೆಂಗಳೂರು(ಮೇ 09): ಕೆಲ ದಿನಗಳ ಹಿಂದೆ ಕೊರೋನಾ ಕರ್ಫ್ಯೂ ಜಾರಿ ಮಾಡಿದ ನಂತರ ಅರ್ಧದಷ್ಟು ಕಾರ್ಮಿಕರು ನಗರದಿಂದ ತಮ್ಮ ಊರುಗಳಿಗೆ ವಾಪಸ್ ಹೋಗಿದ್ದರು. ಈಗ ನಾಳೆಯಿಂದ ಎರಡು ವಾರ ಕಾಲ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಇದ್ದ ಬದ್ದ ಕಾರ್ಮಿಕರೂ ನಗರ ತೊರೆದು ತಮ್ಮ ಗೂಡು ಸೇರಿಕೊಳ್ಳುತ್ತಿದ್ದಾರೆ. ಭಾನುವಾರ ಬೆಳಗ್ಗೆಯಿಂದಲೂ ಬೆಂಗಳೂರಿನ ವಿವಿಧ ರೈಲು ನಿಲ್ದಾಣಗಳತ್ತ ಸಣ್ಣ ಜನಸಾಗರವೇ ಹರಿದುಬರುತ್ತಿದೆ. ದೊಡ್ಡದೊಡ್ಡ ಲಗೇಜುಗಳನ್ನ ಹೊತ್ತ ಕಾರ್ಮಿಕರು ರೈಲು ನಿಲ್ದಾಣಗಳತ್ತ ಸಾಗಿಬರುತ್ತಿದ್ಧಾರೆ. ಇವರಲ್ಲಿ ಬಹುತೇಕರು ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಒಡಿಶಾ, ಜಾರ್ಖಂಡ್ ರಾಜ್ಯಗಳಿಗೆ ಹೋಗುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೆಜೆಸ್ಟಿಕ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ರಿಸರ್ವೇಶನ್ ಕೌಂಟರ್ನಲ್ಲಿ ದೊಡ್ಡ ದೊಡ್ಡ ಕ್ಯೂ ನಿರ್ಮಾಣವಾಗಿದ್ದು, ಜನರನ್ನ ಸಾಮಾಜಿಕ ಅಂತರದಲ್ಲಿ ನಿಲ್ಲಿಸುವಲ್ಲಿ ಪೊಲೀಸರು ಹೈರಾಣಾಗಿ ಹೋಗುತ್ತಿದ್ದಾರೆ.
ಕಳೆದ ತಿಂಗಳ ಕೊನೆಯ ಭಾಗದಲ್ಲಿ ಜನತಾ ಕರ್ಫ್ಯೂ ಜಾರಿ ಮಾಡಿದಾಗಲೇ ಭಾರೀ ಸಂಖ್ಯೆಯಲ್ಲಿ ಕಾರ್ಮಿಕರು ವಾಪಸ್ ಗುಳೆ ಹೋಗಿದ್ದರು. ಉತ್ತರ ಕರ್ನಾಟಕದಿಂದ ಬಂದಿದ್ದ ಕಾರ್ಮಿಕರೂ ಸಿಕ್ಕ ಸಿಕ್ಕ ಬಸ್ಸು, ರೈಲುಗಳ ಮೂಲಕ ತಮ್ಮ ಊರು ಸೇರಿಕೊಂಡಿದ್ದರು. ಇದೀಗ ಕಳೆದ ವರ್ಷದ ಲಾಕ್ ಡೌನ್ ಸ್ಥಿತಿಯೇ ಬಹುತೇಕ ಕಣ್ಮುಂದೆ ಬರುತ್ತಿದೆ.
ಇನ್ನು, ನಾಳೆಯಿಂದ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಜನರು ಇಂದು ವಿವಿಧೆಡೆ ನಿತ್ಯದ ಸಾಮಾನುಗಳನ್ನ ಕೊಳ್ಳಲು ಎಡೆತಾಕುತ್ತಿರುವ ಘಟನೆ ವರದಿಯಾಗಿದೆ. ಇಂದು ಭಾನುವಾರವಾದ್ದರಿಂದ ಬಾಡೂಟಕ್ಕೆ ಮಾಂಸ ಖರೀದಿ ಮಾಡಲು ಜನರು ಮಾಮೂಲಿಗಿಂತ ಹೆಚ್ಚೇ ಮುಗಿಬಿದ್ದಿದ್ದಾರೆ. ಬೆಳಗ್ಗೆ 12ಗಂಟೆಯವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ಇರುವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಜನರು ಮಟನ್ ಶಾಪ್ಗಳ ಮುಂದೆ ಕ್ಯೂ ನಿಂತಿದ್ದಾರೆ. ಮೈಸೂರು ರಸ್ತೆಯ ಬ್ಯಾಟರಾಯನಪುರದ ಬಳಿ ಇರುವ ಖ್ಯಾತ ಪಾಪಣ್ಣ ಮಟನ್ ಸ್ಟಾಲ್ನಲ್ಲಿ ಅಕ್ಷರಶಃ ಜನಜಂಗುಳಿ ನೆರೆದಿದೆ. ಆದರೆ, ಇಲ್ಲಿ ಮಾಮೂಲಿಯಂತೆ ಮಟನ್ ಅಂಗಡಿಯವರು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನ ಪಾಲಿಸುತ್ತಿದ್ದು, ಖರೀದಿದಾರರು ಮುಖಕ್ಕೆ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡುವುದನ್ನು ಖಚಿಪಡಿಸುತ್ತಿದ್ದಾರೆ. ಹಾಗೆಯೇ, ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಕೂಡ ಮಾಲಾಗಿದೆ.
ಇನ್ನು, ನಗರದ ಹೂವಿನ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆಯೇ ಜನಜಾತ್ರೆ ನಿರ್ಮಾಣವಾಗಿತ್ತು. ಎಸ್ಜೆಪಿ ರಸ್ತೆಯಲ್ಲಿ ಕಣ್ಣು ಹಾಯಿಸಿದಷ್ಟೂ ಜನರು ಕಿಕ್ಕಿರಿದು ನೆರೆದಿದ್ದು ಕಂಡುಬಂದಿತು. ರಸ್ತೆಯ ಎರಡೂ ಬದಿ ಹೂವಿನ ಅಂಗಡಿಗಳ ಬಳಿ ಜನರು ಸಾಮಾಜಿಕ ಅಂತರ ಪಾಲನೆ ಇಲ್ಲದೆಯೇ ಖರೀದಿಗೆ ಮುಗಿಬಿದ್ದಿದ್ದರು. ಪೊಲೀಸರೂ ಕೈಯಲ್ಲಿ ಲಾಠಿ ಹಿಡಿದು ಗುಂಪು ಚದುರಿಸುವ ಪ್ರಯತ್ನ ನಡೆಸಿದರು.