ಇಂದು ವಿಶ್ವ ಅಮ್ಮಂದಿರ ದಿನ.. ಜಗದ ನೋವು ಮರೆತು ಮಕ್ಕಳ ಸಲಹುವ ತಾಯಿ ಬಗ್ಗೆ ನಿಮಗೆಷ್ಟು ಗೊತ್ತು?

ಮೇ 9, 2021 ರಂದು ‘ಅಮ್ಮನ ದಿನ’ ಆಚರಿಸಲ್ಪಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ಅಮ್ಮ’ನ ಬಗ್ಗೆ ಉದ್ದುದ್ದ ಸಾಲುಗಳು, ಅವಳ ಪಟಗಳು, ಅವಳು ಮಾಡಿದ ತ್ಯಾಗ, ಪಟ್ಟ ಕಷ್ಟ, ಕೊಟ್ಟ ಪ್ರೀತಿಯ ಬಗ್ಗೆ ವಿವರಗಳು, ತಾಯಿ ಇಲ್ಲದವರ ನೋವಿನ ಮಾತುಗಳು. ಹೀಗೆ, ಹತ್ತು ಹಲವಾರು ಬಗೆಯಲ್ಲಿ ಜನ ತಮ್ಮ ತಾಯಿಯ ಬಗ್ಗೆ ಇರುವ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ.

ಅಮೆರಿಕಾ ದೇಶದಲ್ಲಿ ಈ ದಿನ ಮಹತ್ವದ್ದು. ಇಲ್ಲಿಯ ಅಂಗಡಿ ಮುಂಗಟ್ಟುಗಳು ಬಲೂನುಗಳು, ಚಂದವಾಗಿ ಪ್ಯಾಕ್ ಮಾಡಿರುವ ಉಡುಗೊರೆಗಳು, ಕೇಕುಗಳು, ತರಹಾವರಿ ಗಿಫ್ಟುಗಳಿಂದ ಕಂಗೊಳಿಸುತ್ತಿರುತ್ತವೆ. ಇಲ್ಲಿಯ ಸಂಪ್ರದಾಯದಂತೆ, 18 ವರುಷಕ್ಕೆ ತಮ್ಮದೇ ಆದ ಮನೆ ಮಾಡಿ, ತಾಯ್ತಂದೆಯರಿಂದ ಬೇರೆ ವಾಸಿಸುವ ಜನರು ತಮ್ಮ ಅಮ್ಮಂದಿರನ್ನು ಭೇಟಿ ಮಾಡಿ, ಆಕೆಯ ಜತೆ ಕಾಲ ಕಳೆದು, ಊಟ ಮಾಡಿ, ಗಿಫ್ಟ್, ಹೂವಿನ ಬೊಕೆ, ಕೊಟ್ಟು ಸಂಭ್ರಮಿಸುತ್ತಾರೆ. ಕೇಕ್ ಕಟ್ ಮಾಡಿ ಎಲ್ಲರೂ ಖುಷಿಯಿಂದ ಕಾಲ ಕಳೆಯುತ್ತಾರೆ.

ಅನ್ನಾ ಜಾರ್ವಿಸ್ ಎಂಬಾಕೆ 1908ರಲ್ಲಿ ಹುಟ್ಟು ಹಾಕಿದ ಈ ಆಚರಣೆ ಇಂದಿಗೂ ಮುಂದುವರೆದಿದೆ. ಆದರೆ ಈ ದಿನದ ವಾಣಿಜ್ಯೀಕರಣದ ಬಗ್ಗೆ ಬಹಳ ನೊಂದು, ಇದನ್ನು ಕಾಲೆಂಡರ್ ಇಂದ ಅಳಿಸಲು ಶ್ರಮಿಸಿದ್ದು ವಿಪರ್ಯಾಸ. ಪುರಾತನ ಕಾಲದ ಗ್ರೀಕ್ ಹಾಗೂ ರೋಮನ್ ನಾಗರೀಕತೆಯ ರಿಯಾ ಹಾಗೂ ಸೈಬೆಲಿ ಎನ್ನುವ ಮಾತೃದೇವತೆಗಳ ಉತ್ಸವಗಳು ಬಹುಶಃ ಇತಿಹಾಸದ ಮದರ್ಸ್ ಡೇ ಸಂಭ್ರಮದ ಆಚರಣೆ ಇರಬಹುದು. ಆದರೆ ದಾಖಲೆಗಳ ಪ್ರಕಾರ ಕ್ರಿಶ್ಚಿಯನ್ ಸಮುದಾಯದ “ಮದರಿಂಗ್ ಸಂಡೇ” , ಅಮ್ಮನ ದಿನಾಚರಣೆಗೆ ನಾಂದಿ ಹಾಡಿತು ಎನ್ನಲಾಗಿದೆ. ‘ಗುಡ್ ಫ್ರೈಡೆ’ ಸಮಯದಲ್ಲಿ ಬರುವ 40 ದಿನಗಳ ‘ಲೆಂಟ್’ ಆಚರಣೆಯ 4ನೇ ಭಾನುವಾರ, ಎಲ್ಲ ಶ್ರದ್ಧಾವಂತ ಕ್ರಿಶ್ಚಿಯನ್ನರು ತಮ್ಮ ‘ಮದರ್ ಚರ್ಚ್’ ಅಂದರೆ ತಮ್ಮ ಹತ್ತಿರದ ಚರ್ಚಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಅಂದು ವಿಶೇಷ ಪ್ರಾರ್ಥನಾ ಸಭೆಗಳು ಕೂಡ ನಡೆಯುತ್ತಿದ್ದವು. ಕಾಲಕ್ರಮೇಣ ಈ ದಿನ “ಅಮ್ಮನ ದಿನ” ವಾಗಿ ಪರಿವರ್ತನೆಗೊಂಡಿತು. 1930-40 ಆಸುಪಾಸಿನಲ್ಲಿ ಆನ್ ರೀವ್ಸ್ ಎಂಬಾಕೆ ಜಾರ್ವಿಸ್ ಶುರು ಮಾಡಿದ “ಮದರ್ಸ್ ಡೇ ವರ್ಕ್ ಕ್ಲಬ್ಸ್” ಹಾಗೂ ಅದರ ಚಟುವಟಿಗೆಗಳು ಈ ದಿನದ ಆಚರಣೆಗೆ ಬುನಾದಿ ಹಾಕಿದವು. ಈಕೆಯ ಮಗಳು ಅನ್ನಾ ಜಾರ್ವಿಸ್ , ತಾಯಿಯ ಮರಣದ ನಂತರ ‘ಮದರ್ಸ್ ಡೇ’ ರಾಷ್ಟ್ರೀಯ ಸಂಭ್ರಮದ ದಿನವಾಗಿ ಪರಿವರ್ತಿಸಲು ಶ್ರಮಿಸಿದಳು. ಜೂಲಿಯಟ್ ಬೇಕೆಲಿ, ಮೇರಿ ಸಾಸೀನ್ ಮತ್ತಿತ್ತರು ತಾಯಿಯ ದಿನದ ಆಚರಣೆಗೆ ಒತ್ತು ಕೊಟ್ಟರು. ಇವರ ಜತೆಗೂಡಿ ಕೆಲಸ ಮಾಡಿದ ಫ್ರಾಂಕ್ ಹೆರ್ರಿಂಗ್ ಎಂಬಾತನನ್ನು ‘ಮದರ್ಸ್ ಡೇ’ ಜನಕನೆಂದು ಪರಿಗಣಿಸಲಾಗಿದೆ.

ಈ ದಿನದಂದು ನಡೆಯುವ ಫೋನ್ ಕಾಲ್ಗಳು ಇಡೀ ವರುಷದಲ್ಲೇ ಅತಿ ಹೆಚ್ಚು ಎಂದು ಹೇಳಲಾಗುತ್ತದೆ. ಕಾಲ್ ಟ್ರಾಫಿಕ್ ಶೇ 37% ರಷ್ಟು ಹೆಚ್ಚುತ್ತದೆ ಎಂದು ಅಂದಾಜು ಮಾಡಲಾಗಿದೆ. ಈ ದಿನದ ಮಹತ್ವವನ್ನು ವಾಣಿಜ್ಯ ಸಂಸ್ಥೆಗಳು ಉಡುಗೊರೆ, ಕಾರ್ಡ್ ಮೂಲಕ ಅಳೆಯುವುದು ಎಲ್ಲರಿಗೂ ಅಸಮಾಧಾನವಿದೆ. ಆದರೆ ಆ ಒಂದು ದಿನವಾದರೊ, ಮಕ್ಕಳಿಗೆ ತಾಯಂದಿರ ಕಷ್ಟಪಡುವಿಕೆ, ತ್ಯಾಗದ ಅರಿವಾಗುವುದು, ಆಕೆಗೆ ಅಡುಗೆ ಮನೆಯಿಂದ ಬಿಡುಗಡೆ ಕೊಡುವುದು, ಗಿಫ್ಟ್ ನೀಡುವುದು ಒಳ್ಳೆಯ ಪದ್ಧತಿಯೇ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *