ಪಿಎಂ ಕೇರ್ ವೆಂಟಿಲೇಟರ್‍ಗಳು ಕಳಪೆ: ಡಾ. ಶರಣಪ್ರಕಾಶ್ ಪಾಟೀಲ್ ಆರೋಪ
ಕಲಬುರಗಿ:ಮೇ.11: ಪಿಎಂ ಕೇರ್ ವೆಂಟಿಲೇಟರ್‍ಗಳು ಸಂಪೂರ್ಣ ಕಳಪೆಯಾಗಿವೆ ಎಂದು ಮಾಜಿ ಸಚಿವ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಕ್ತಾರ ಡಾ. ಶರಣಪ್ರಕಾಶ್ ಪಾಟೀಲ್ ಅವರು ಗಂಭೀರ ಆರೋಪ ಮಾಡಿದರು.
ಸೇಡಂ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿಯೇ ಹೆಚ್ಚಿನ ಸೋಂಕಿತರು ಕಂಡುಬರುತ್ತಿದ್ದಾರೆ. ಪಿಎಂ ಕೇರ್ ಅಡಿ ಪ್ರತಿ ತಾಲ್ಲೂಕಿಗೆ ಐದಾರು ವೆಂಟಿಲೇಟರ್ ನೀಡಲಾಗಿದೆ. ಬಹುತೇಕ ವೆಂಟಿಲೇಟರ್‍ಗಳು ಕಳಪೆ ಮಟ್ಟದ್ದಾಗಿವೆ ಎಂದು ದೂರಿದರು.
ಅಫಜಲಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಆರು ವೆಂಟಿಲೇಟರ್‍ಗಳು ಕಳಪೆಯಾಗಿದ್ದರಿಂದ ಅವುಗಳ ಬಳಕೆ ಅಲ್ಲಿ ಆಗಿರಲಿಲ್ಲ. ಅವುಗಳನ್ನು ದುರಸ್ತಿಗಾಗಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ, ಅವುಗಳು ದುರಸ್ತಿಯಾಗದೇ ಮತ್ತೆ ಮರಳಿ ಕಳಿಸಲಾಗಿದೆ ಎಂದು ಅವರು ಆರೋಪಿಸಿದರು.
ಇನ್ನುಳಿದ ಕಡೆಗಳಲ್ಲಿಯೂ ಇರುವ ವೆಂಟಿಲೇಟರ್‍ಗಳು ಬಳಕೆಯಾಗುತ್ತಿಲ್ಲ. ಇದಕ್ಕೆಲ್ಲ ಯಾರು ಜವಾಬ್ದಾರಿ? ಎಂದು ಖಾರವಾಗಿ ಪ್ರಶ್ನಿಸಿದ ಅವರು, ಜಿಮ್ಸ್ ಆಸ್ಪತ್ರೆಯಲ್ಲಿ ಇನ್ನಷ್ಟು ವೆಂಟಿಲೇಟರ್‍ಗಳು ಇದ್ದರೆ ಇನ್ನಷ್ಟು ಜೀವ ಉಳಿಸುವ ಕುರಿತು ವೈದ್ಯರು ಹೇಳುತ್ತಾರೆ. ಸಮರ್ಪಕ ವೆಂಟಿಲೇಟರ್‍ಗಳನ್ನೂ ಸಹ ಒದಗಿಸಲು ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಮಹಾಮಾರಿ ಕೋವಿಡ್ ಎರಡನೇ ಅಲೆಯ ಸೋಂಕು ಸರಿಯಾದ ರೀತಿಯಲ್ಲಿ ನಿರ್ವಹಿಸದ ಕಾರಣ ಸಾಕಷ್ಟು ಅವ್ಯವಸ್ಥೆ ಆಗುತ್ತಿದೆ. ಕೇಂದ್ರ, ರಾಜ್ಯ ಮತ್ತು ಜಿಲ್ಲಾಡಳಿತ ವೈಫಲ್ಯದಿಂದ ದೊಡ್ಡ ಮಟ್ಟದ ಸಾವುಗಳಾಗುತ್ತಿವೆ. ಮಾಹಿತಿ ಇದ್ದರೂ ಸಹ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲ. ಎರಡನೇ ಅಲೆ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರ್ಗಿ ಹಾಗೂ ಸೇಡಂ ತಾಲ್ಲೂಕಿನಿಂದ ನೂರಾರು ಕರೆಗಳು ಬರುತ್ತಿವೆ. ಪ್ರಯತ್ನ ಮೀರಿ ಬೆಡ್ ಕೊಡಿಸಿದ್ದೇನೆ. ಸಾಧ್ಯವಾದಷ್ಟು ಜನರಿಗೆ ನೆರವಾಗುತ್ತಿದ್ದೇನೆ. ಆದಾಗ್ಯೂ, ಪರಿಸ್ಥಿತಿ ಕೈಮೀರಿದೆ. ನಾನೂ ಸಹ ಅಸಹಾಯಕನಾಗಿದ್ದೇನೆ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ಗಾಳಿಯಲ್ಲಿ ಮಾತನಾಡುತ್ತಿದ್ದಾರೆ. ಯಾವ 500 ಸಿಲೆಂಡರ್ ಬಂದಿಲ್ಲ. ಎರಡು ಲಕ್ಷ ರೆಮಿಡಿಸಿವರ್ ಬಂದಿಲ್ಲ. ಇದಕ್ಕಿಂತ ದೊಡ್ಡ ತುರ್ತು ಸ್ಥಿತಿ ಇವರಿಗೇನಿದೆ? ಎಂದು ಪ್ರಶ್ನಿಸಿದ ಅವರು, ಉಸ್ತುವಾರಿ ಸಚಿವರು 24 ಗಂಟೆ ಜಿಲ್ಲೆಯಲ್ಲಿಯೇ ಇದ್ದು, ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಖುದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶಿಸಿದ್ದಾರೆ ಎಂದು ನಿರಾಣಿ ವಿರುದ್ಧ ಅವರು ಕಿಡಿಕಾರಿದರು.
ನನ್ನ ಅವಧಿಯಲ್ಲಿ ಕಲಬುರ್ಗಿಯಲ್ಲಿ ತುರ್ತು ಸಂದರ್ಭದಲ್ಲಿ ಬಳಸಲು 65 ಹಾಸಿಗೆಗಳನ್ನು ವ್ಯವಸ್ಥೆ ಮಾಡಿ ಆಮ್ಲಜನಕ ಪೈಪ್‍ಲೈನ್ ಸಹ ನೀಡಲಾಗಿದ್ದು, ಅದರ ಬಳಕೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅರು, ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗೆ ಖಾಸಗಿ ಆಸ್ಪತ್ರೆಗೆ ತೆರಳಲು ಸೂಚಿಸಿದರೆ ಅವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು ಎಂಬುದು ಸರ್ಕಾರದ ಸುತ್ತೋಲೆಯಲ್ಲಿದೆ. ಅದನ್ನು ಸಹ ಪಾಲಿಸುತ್ತಿಲ್ಲ ಎಂದು ಗುಡುಗಿದರು.
20 ಹೆಚ್ಚುವರಿ ಆಮ್ಲಜನಕ ಮತ್ತು ಆಮ್ಲಜನಕ ಕಾನ್ಸಂಟ್ರೀಟರ್ ನೀಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಕಲಬುರ್ಗಿಯಲ್ಲಿ ಎರಡು ಅಂಬುಲೆನ್ಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸೇಡಂಕ್ಕೂ ಸಹ ನೀಡಲಾಗುವುದು. ಕಡ್ಡಾಯವಾಗಿ ಕೊರೋನಾ ಲಸಿಕೆಯನ್ನು ಪಡೆಯಬೇಕು. ಅದರಿಂದ ಜೀವಕ್ಕೆ ಅಪಾಯವಿಲ್ಲ. ನಮ್ಮ ಜೀವವನ್ನು ನಾವು ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಉಳಿಸಿಕೊಳ್ಳಬೇಕು ಎಂದು ಅವರು ಸಾರ್ವಜನಿಕರಿಗೆ ಸಲಹೆ ಮಾಡಿದರು.