Yadagiri: ಇಸ್ರೇಲ್ ಸರ್ಕಾರದಿಂದ ಯಾದಗಿರಿಗೆ ಆಕ್ಸಿಜನ್ ಉತ್ಪಾದಿಸುವ ಬೃಹತ್ ಕಂಟೇನರ್ ಗಿಫ್ಟ್
ಯಾದಗಿರಿ: ಕೊರೊನಾ ಎರಡನೇ ಅಲೆಗೆ ಈಡೀ ದೇಶವು ತತ್ತರಿಸಿದ್ದು, ಭಾರತದ ಜನರ ಪ್ರಾಣ ಉಳಿಸಲು ವಿದೇಶದಿಂದ ನೆರವಿನ ಹಸ್ತ ಬರುತ್ತಿದೆ. ಇಸ್ರೇಲ್ ಸರಕಾರ ಕೂಡ ಮಾನವೀಯತೆ ಮೆರೆದಿದ್ದು, ದೇಶದಲ್ಲಿ ಈಗ ಸೋಂಕಿತರು ಪ್ರಾಣವಾಯುದಿಂದ ನರಳಾಡುತ್ತಿರುವುದರಿಂದ ಇಸ್ರೇಲ್ ಸರಕಾರ ಈಗ ಆಕ್ಸಿಜನ್ ಉತ್ಪಾದನಾ ಘಟಕದ ಬೃಹತ್ ಕಂಟೇನರ್ ಅನ್ನು ದಾನವಾಗಿ ನೀಡಿದೆ. ಈಗ ಇಸ್ರೇಲ್ ನಿಂದ ಈಗ ಕಂಟೇನರ್ ಯಾದಗಿರಿ ಜಿಲ್ಲೆಗೆ ಬಂದು ತಲುಪಿದ್ದು, ಜಿಲ್ಲೆಯ ಜನರ ಆತಂಕ ದೂರವಾದಂತಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಆಸ್ಪತ್ರೆ ಆವರಣದಲ್ಲಿ 6 ಕೆಎಲ್ ಆಕ್ಸಿಜನ್ ಪ್ಲಾಂಟ್ ಇದ್ದು, ಸದ್ಯಕ್ಕೆ ಯಾದಗಿರಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ , ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ, ಸಹಾಯಕ ಆಯುಕ್ತ ಶಂಕರ ಗೌಡ ಸೋಮನಾಳ ಹಾಗೂ ಜನಪ್ರತಿನಿಧಿಗಳ ನಿರಂತರ ಪ್ರಯತ್ನದಿಂದ ಇಲ್ಲಿಯವರೆಗೆ ಆಕ್ಸಿಜನ್ ಕೊರತೆಯಾಗಿಲ್ಲ. ಇದರಿಂದ ಸೋಂಕಿತರ ಜೀವ ಉಳಿಯುವಂತಾಗಿದೆ. ಹಗಲು ರಾತ್ರಿಯೆನ್ನದೆ ಅಧಿಕಾರಿಗಳು ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಮುಂದಾಗಬಹುದಾದ ಸಮಸ್ಯೆ ಅರಿತು ಈಗಾಗಲೇ ಆರೋಗ್ಯ ಇಲಾಖೆಯು ಇಸ್ರೇಲ್ ಸರಕಾರ ದಾನವಾಗಿ ನೀಡಿದ ಆಕ್ಸಿಜನ್ ಉತ್ಪಾದನಾ ಘಟಕದ ಬೃಹತ್ ಕಂಟೇನರ್ ನ್ನು ಯಾದಗಿರಿ ಜಿಲ್ಲೆಗೆ ಪೂರೈಸಿದೆ.
ದೇಶದಲ್ಲಿಯೇ ಇಸ್ರೇಲ್ ಸರಕಾರ ಮೂರು ಕಡೆ ಬೃಹತ್ ಕಂಟೇನರ್ ಪೂರೈಸಿದೆ. ಉತ್ತರಪ್ರದೇಶದ ವಾರಣಾಸಿಗೆ ಅದೆ ರೀತಿ ರಾಜ್ಯದ ಎರಡು ಜಿಲ್ಲೆಗಳಾದ ಯಾದಗಿರಿ ಹಾಗೂ ಕೋಲಾರಗೆ ಆಕ್ಸಿಜನ್ ಉತ್ಪಾದನೆ ಮಾಡುವ ಕಂಟೇನರ್ ಇಸ್ರೇಲ್ ಸರಕಾರ ಪೂರೈಸಿದೆ. ಕೇಂದ್ರ ಸರಕಾರದ ಸತತ ಪ್ರಯತ್ನದಿಂದ ದೇಶಕ್ಕೆ ಮೂರು ಬೃಹತ್ ಆಕ್ಸಿಜನ್ ಉತ್ಪಾದನೆ ಮಾಡುವ ಕಂಟೇನರ್ ಇಸ್ರೇಲ್ ಸರಕಾರ ಪೂರೈಕೆ ಮಾಡಿದೆ. 4 ಟನ್ ತೂಕವಿರುವ ಆಕ್ಸಿಜನ್ ಉತ್ಪಾದನೆ ಮಾಡುವ ಕಂಟೇನರ್ ನ್ನು ಬೆಂಗಳೂರು ಮೂಲಕ ಯಾದಗಿರಿ ಜಿಲ್ಲೆಗೆ ತರಲಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ನೇತೃತ್ವದಲ್ಲಿ ಕಂಟೇನರ್ ಯಾದಗಿರಿ ಕೋವಿಡ್ ಆಸ್ಪತ್ರೆ ಆವರಣದೊಳಗೆ ತಂದು ಇಳಿಸಲಾಗಿದೆ.
ಆಕ್ಸಿಜನ್ ಉತ್ಪಾದನೆ ಕಂಟೇನರ್ ಮೂಲಕ ಪ್ರತಿ ಒಂದು ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮರ್ಥ ಹೊಂದಲಾಗಿದ್ದು, ಸುಮಾರು 80 ರೋಗಿಗಳಿಗೆ ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡಬಹುದಾಗಿದೆ. ಇದರಿಂದ ಆಕ್ಸಿಜನ್ ಕೊರತೆ ಎದುರಿಸುವ ಸೋಂಕಿತರಿಗೆ ಆಕ್ಸಿಜನ್ ಸಮಸ್ಯೆ ನೀಗಲಿದೆ. ಗಾಳಿಯ ಮೂಲಕವೇ ಆಕ್ಸಿಜನ್ ಉತ್ಪಾದನೆ ಮಾಡುವ ವಿಶೇಷ ಯಂತ್ರ ಹೊಂದಿದೆ ಎನ್ನಲಾಗುತ್ತಿದೆ.