ಬೇಡಿಕೆ ಕುಸಿದರೂ ಪೆಟ್ರೋಲ್‌ ದರ ಏರಿಕೆ! ಹಲವು ರಾಜ್ಯಗಳಲ್ಲಿ ಶತಕ ಬಾರಿಸಿದ ತೈಲ ಬೆಲೆ!

ಹೈಲೈಟ್ಸ್‌:

  • ದಿನನಿತ್ಯ ಏರುತ್ತಲೇ ಇದೆ ಪೆಟ್ರೋಲ್‌, ಡೀಸೆಲ್ ದರ
  • ಗ್ರಾಹಕರ ಪಾಲಿಗೆ ಮತ್ತೆ ಮತ್ತೆ ಗಾಯದ ಮೇಲೆ ಬರೆ
  • ಬೇಡಿಕೆ ಕುಸಿದರೂ ಕಡಿಮೆಯಾಗುತ್ತಿಲ್ಲ ತೈಲ ದರ
  • ಹಲವು ರಾಜ್ಯಗಳಲ್ಲಿ ಶತಕದ ಗಡಿ ದಾಟಿದ ಬೆಲೆ

ಹೊಸದಿಲ್ಲಿ: ಭಾರತದಲ್ಲಿ ಕಳೆದ ಏಪ್ರಿಲ್‌ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದ್ದರೂ, ದರ ಮಾತ್ರ ಏರುಗತಿಯಲ್ಲಿದೆ. ಭಾರತದಲ್ಲಿ ಕಳೆದ ಏಪ್ರಿಲ್‌ನಲ್ಲಿ ತೈಲಕ್ಕೆ ಬೇಡಿಕೆ 9.4 ಶೇಕಡಾ ಇಳಿಕೆಯಾಗಿದೆ. ನಾನಾ ರಾಜ್ಯಗಳಲ್ಲಿ ಕೋವಿಡ್‌-19, 2ನೇ ಅಲೆಯ ನಿಯಂತ್ರಣಕ್ಕೆ ಲಾಕ್‌ ಡೌನ್‌ ವಿಧಿಸಿರುವ ಪರಿಣಾಮ ಬೇಡಿಕೆ ಇಳಿಕೆಯಾಗಿತ್ತು ಎಂದು ಪೆಟ್ರೋಲಿಯಂ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಬುಧವಾರ ಪ್ರತಿ ಲೀಟರ್‌ ಪೆಟ್ರೋಲ್‌ ದರ 95.11 ರೂ.ಗೆ ಏರಿಕೆಯಾಗಿದ್ದು, 26 ಪೈಸೆ ಹೆಚ್ಚಳವಾಗಿದೆ. ಡೀಸೆಲ್‌ ದರದಲ್ಲೂ 26 ಪೈಸೆ ಏರಿದ್ದು, 87.57 ರೂ.ಗೆ ವೃದ್ಧಿಸಿದೆ. ಏಪ್ರಿಲ್‌ನಲ್ಲಿ1.7 ಕೋಟಿ ಟನ್‌ ತೈಲ ಬಳಕೆಯಾಗಿತ್ತು. ಮಾರ್ಚ್‌ನಲ್ಲಿ1.87 ಕೋಟಿ ಟನ್‌ ಬಳಕೆಯಾಗಿತ್ತು. ಏಪ್ರಿಲ್‌ನಲ್ಲಿ ಕಾರುಗಳು ಮತ್ತು ಬೈಕ್‌, ಸ್ಕೂಟರ್‌ಗಳಲ್ಲಿ ಬಳಕೆಯಾಗಿದ್ದ ಇಂಧನದ ಪ್ರಮಾಣ 23 ಲಕ್ಷ ಟನ್‌ಗೆ ಇಳಿಕೆಯಾಗಿತ್ತು. ಡೀಸೆಲ್‌ ಬೇಡಿಕೆ ಕೂಡ 66 ಲಕ್ಷ ಟನ್‌ಗೆ ಇಳಿಕೆಯಾಗಿತ್ತು. ಅಡುಗೆ ಅನಿಲ (ಎಲ್ಪಿಜಿ) ಮಾರಾಟ ಕೂಡ 6.4 ಪರ್ಸೆಂಟ್‌ ಇಳಿದಿದ್ದು, 21 ಲಕ್ಷ ಟನ್‌ಗೆ ತಗ್ಗಿತ್ತು. ರಸ್ತೆ ನಿರ್ಮಾಣಕ್ಕೆ ಬಳಸುವ ಬಿಟುಮೆನ್‌ 6,58,000 ಟನ್‌ಗೆ ತಗ್ಗಿತ್ತು.

ಪೆಟ್ರೋಲ್‌ ದರ ಎಲ್ಲಿ ಶತಕ?: ರಾಜಸ್ಥಾನದ ಗಂಗಾನಗರ (102 ರೂ.), ಮಧ್ಯಪ್ರದೇಶದ ಅನೂಪ್‌ಪುರ (102 ರೂ.) ಹಾಗೂ ಮಹಾರಾಷ್ಟ್ರದ ಪರ್ಭಾನಿಯಲ್ಲಿ(100 ರೂ.) ಪೆಟ್ರೋಲ್‌ ದರ ಶತಕ ತಲುಪಿದೆ. ಚುನಾವಣೆ ಫಲಿತಾಂಶದ ನಂತರ ಹೆಚ್ಚಳ ಕಳೆದ ಮೇ 2ರಂದು ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಪೆಟ್ರೋಲ್‌ ದರ ಏರುಗತಿಯಲ್ಲಿದೆ. ಚುನಾವಣೆಯ ಸಂದರ್ಭ, ಏಪ್ರಿಲ್‌ 16ರಿಂದ ಮೇ 3ರ ತನಕ ತೈಲ ದರಗಳು ಯಥಾಸ್ಥಿತಿಯಲ್ಲಿತ್ತು. ಮೇ4ರಿಂದ 6 ಸಲ ದರ ಏರಿಕೆಯಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *