ಸಿಂಧೂ ರೂಪೇಶ್​ ವರ್ಗಾವಣೆ: ಸರ್ಕಾರದ ವಿರುದ್ಧ ಸಿದ್ದರಾಮಯ್ಯ, ಯು.ಟಿ.ಖಾದರ್ ಗರಂ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ವರ್ಗಾವಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಯು.ಟಿ.ಖಾದರ್ ಕಿಡಿ ಕಾರಿದ್ದಾರೆ.

‘ಕಾನೂನು ಕೈಗೆತ್ತಿಕೊಂಡರೆ, ನೈತಿಕ ಪೊಲೀಸ್​ಗಿರಿ ಮಾಡಿದ್ರೆ ಕ್ರಮ ಕೈಗೊಳ್ಳತ್ತೇನೆ ಎಂದಿದ್ದ ಸಿಂಧೂ ರೂಪೇಶ್ ಅವರಿಗೆ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ಸರ್ಕಾರ ಕೊಲೆ ಬೆದರಿಕೆ‌ ಹಾಕಿದವರಿಗೆ ಶಿಕ್ಷೆ ನೀಡುವ ಬದಲು ಜಿಲ್ಲಾಧಿಕಾರಿಗೆ ವರ್ಗಾವಣೆ ಶಿಕ್ಷೆ ನೀಡಿದೆ’ ಎಂದು ಖಾದರ್​ ಆರೋಪಿಸಿದ್ದಾರೆ

ಕೊಲೆ ಬೆದರಿಕೆ ಬಂದ ಅಧಿಕಾರಿಗಳಿಗೆ ಧೈರ್ಯ ತುಂಬುವ ಬದಲು ಬಿಜೆಪಿ ಮುಖಂಡರು ರಾಜಕೀಯ ಮೇಲಾಟ ಮಾಡುತ್ತಿದ್ದಾರೆ. ಮಾರಕ ಕರೊನಾ ಸೋಂಕು ಜನರನ್ನು ಉಸಿರುಗಟ್ಟಿಸುತ್ತಿದ್ದರೆ, ಬಿಜೆಪಿ ಜನಪ್ರತಿನಿಧಿಗಳು ಅಧಿಕಾರಿಗಳ ಉಸಿರುಗಟ್ಟಿಸುತ್ತಿದ್ದಾರೆ’ ಎಂದು ಆಕ್ರೋಶ ಹೊರಹಾಕಿರುವ ಯು.ಟಿ.ಖಾದರ್​, ‘ನ್ಯಾಯ ಎಲ್ಲಿದೆ? ಸರ್ಕಾರವೇ ಉತ್ತರಿಸಬೇಕು’ ಎಂದು ಟ್ವೀಟ್​ ಮಾಡಿದ್ದಾರೆ.

ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ‘ಶಹಬ್ಬಾಸ್ @BSYBJP ಅವರೇ, ಒಂದೆಡೆ ಕರೊನಾ ವಾರಿಯರ್ಸ್‌ಗೆ ಆಕಾಶದಿಂದ ಹೂಮಳೆ ಸುರಿಸುತ್ತೀರಿ, ಇನ್ನೊಂದೆಡೆ ಕೊಲೆ ಬೆದರಿಕೆ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ರಕ್ಷಣೆ ನೀಡದೆ ವರ್ಗಾವಣೆ ಮಾಡ್ತೀರಿ. ಇದೇನಾ ಕರೊನಾ ವಾರಿಯರ್ಸ್‌ಗೆ ಕೊಡುವ ಗೌರವ?’ ಎಂದು ಪ್ರಶ್ನಿಸಿದ್ದಾರೆ.

ಮೊದಲು, ಭ್ರಷ್ಟರ ರಕ್ಷಣೆಗಾಗಿ ಬಿಬಿಎಂಪಿ‌ ಆಯುಕ್ತರ ವರ್ಗಾವಣೆ ಮಾಡಿದ್ರಿ. ಈಗ ಕೋಮುವಾದಿ ಪುಂಡರ ರಕ್ಷಿಸಲು ದ.ಕ. ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದೀರಿ. ಇದೇನಾ ನಿಮ್ಮ ಕರೊನಾ ವಿರುದ್ಧದ ಹೋರಾಟ?’ ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್​ ಮಾಡಿದ್ದಾರೆ.

ಬಕ್ರೀದ್​ ಹಬ್ಬದ ಸಂದರ್ಭ ಅಕ್ರಮವಾಗಿ ಗೋ ಸಾಗಾಟ ಆಗದಂತೆ ತಡೆಯಬೇಕು. ಆದರೆ, ಗೋ ಸಾಗಾಟ ತಡೆ ವೇಳೆ ಯಾರೂ ಕಾನೂನು ಕೈಗೆತ್ತಿಕೊಳ್ಳದೆ ಪೊಲೀಸರಿಗೆ ದೂರು ನೀಡಬೇಕು ಎಂದು ಡಿಸಿ ಸಿಂಧು ಬಿ. ರೂಪೇಶ್​ ಸೋಮವಾರ ಮಾಧ್ಯಮ ಹೇಳಿಕೆ ನೀಡಿದ್ದರು. ಅದನ್ನು ಕೆಲ ವೆಬ್​ಸೈಟ್​ಗಳಲ್ಲಿ ಅಪಾರ್ಥ ಬರುವ ರೀತಿಯಲ್ಲಿ ಪ್ರಕಟಿಸಲಾಗಿತ್ತು. ಅದನ್ನೇ ಉಲ್ಲೇಖಿಸಿ ಸಂಘಟನೆಯೊಂದರ ವಾಟ್ಸ್ಆ್ಯಪ್​ ಗ್ರೂಪ್​ನಲ್ಲಿ ಕಿಡಿಗೇಡಿಯೊಬ್ಬ “ಫಸ್ಟ್​ ಮೊಲೆನ್​ ಕರ್ತ್​ ಕೆರೊಡು'(ಮೊದಲು ಅವಳನ್ನು ಕಡಿದು ಕೊಲ್ಲಬೇಕು) ಎಂದು ತುಳುವಿನಲ್ಲಿ ಬೆದರಿಕೆ ಹಾಕಿದ್ದ.

ಇದರ ಬೆನ್ನಲ್ಲೇ ನಿನ್ನೆ(ಮಂಗಳವಾರ) ಸಿಂಧೂ ಬಿ.ರೂಪೇಶ್​ ಸೇರಿದಂತೆ 13 ಹಿರಿಯ ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿತ್ತು. ಸಿಂಧೂ ಬಿ ರೂಪೇಶ್​ ಅವರನ್ನು-ಎಲೆಕ್ಟ್ರಾನಿಕ್​ ಡೆಲಿವರಿ ಆಫ್​ ಸಿಟಿಜನ್​ ಸವಿರ್ಸ್​ (ಡಿಪಿಎಆರ್​) ನಿರ್ದೇಶಕರ ಸ್ಥಾನಕ್ಕೆ ನಿಯುಕ್ತಿ ಮಾಡಲಾಗಿದೆ. ದ.ಕ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ರಾಜೇಂದ್ರ ಕೆ.ವಿ. ಅವರನ್ನು ನೇಮಿಸಲಾಗಿದೆ.

 

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *