ರಂಜಾನ್ ಸಾರ್ವತ್ರಿಕ ಆಚರಣೆಗೆ ನಿಷೇಧ, ಮನೆಯಲ್ಲಿ ಆಚರಿಸಿ: ಪೋಲಿಸ್ ಆಯುಕ್ತರ ಸೂಚನೆ
ಕಲಬುರಗಿ : ಮಹಾಮಾರಿ ಕೋವಿಡ್ ಎರಡನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ರಂಜಾನ್ ಹಬ್ಬವನ್ನು ಸಾರ್ವತ್ರಿಕವಾಗಿ ಆಚರಿಸಲು ನಿಷೇಧ ವಿಧಿಸಲಾಗಿದ್ದರಿಂದ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿಯೇ ರಂಜಾನ್ ಹಬ್ಬವನ್ನು ಆಚರಿಸಬೇಕು ಎಂದು ನಗರ ಪೋಲಿಸ್ ಆಯುಕ್ತ ಎನ್. ಸತೀಶಕುಮಾರ್ ಅವರು ಸೂಚಿಸಿದರು.
ಗುರುವಾರ ಈ ಕುರಿತು ಮಾಹಿತಿ ನೀಡಿದ ಅವರು, ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಮೇ 24ರವರೆಗೆ ಲಾಕ್‍ಡೌನ್ ಜಾರಿಯಲ್ಲಿದೆ. ಯಾರೂ ಸಹ ಅನಾವಶ್ಯಕವಾಗಿ ಮನೆಯಿಂದ ಹೊರಬಾರದು. ಅದರಲ್ಲಿಯೂ ಸಾಮೂಹಿಕವಾಗಿ ಪ್ರಾರ್ಥನೆ ಮಾಡುವುದನ್ನೂ ಸಹ ನಿಷೇಧಿಸಲಾಗಿದೆ. ಆದ್ದರಿಂದ ಮುಸ್ಲಿಂ ಬಾಂಧವರು ರಂಜಾನ್ ನಿಮಿತ್ಯ ಸಾರ್ವಜನಿಕ ಸ್ಥಳಗಳಲ್ಲಿ, ಈದಗಾ ಮೈದಾನಗಳಲ್ಲಿ ಹಾಗೂ ಖಬರಸ್ತಾನ್‍ಗಳಲ್ಲಿ ಗುಂಪುಗೂಡಿ ಸಾಮೂಹಿಕವಾಗಿ ಪ್ರಾರ್ಥನೆಯಲ್ಲಿ ತೊಡಗಬಾರದು ಎಂದರು.
ರಂಜಾನ್ ಹಬ್ಬದ ನಿಮಿತ್ಯ ಸೂಕ್ತ ಬಂದೋಬಸ್ತ್‍ಗಾಗಿ ನಾಲ್ಕು ಕೆಎಸ್‍ಆರ್‍ಪಿ ತುಕುಡಿಗಳು, 200 ಗೃಹ ರಕ್ಷಕದಳದ ಸಿಬ್ಬಂದಿಗಳು ಹಾಗೂ 1000 ಪೋಲಿಸ್ ಸಿಬ್ಬಂದಿಗಳನ್ನೂ ಸಹ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.