ಲಾಕ್ಡೌನ್ ವೇಳೆ ಅರಳಿತು ಪ್ರತಿಭೆ; ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಬರೆದ ಉಡುಪಿಯ ಮಹಿಳೆ
ಉಡುಪಿ(ಮೇ 14): ಕಳೆದ ಬಾರಿಯ ಲಾಕ್ಡೌನ್ ವೇಳೆ ಅನೇಕ ಪ್ರತಿಭೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿ ಬಂದಿದ್ದವು. ಅದರಂತೆ ಉಡುಪಿಯ ಮಹಿಳೆಯೊಬ್ಬರು ಲಾಕ್ಡೌನ್ ಅಂತ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೇ ಯೂಟ್ಯೂಬ್ನಲ್ಲಿ ನೋಡಿ ಕಲಿತು ಹೊಸ ದಾಖಲೆ ಬರೆದಿದ್ದಾರೆ. ಅತೀ ಹೆಚ್ಚು ಸೂರ್ಯನಮಸ್ಕಾರ ಮಾಡಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ.
ಯೋಗ ಮಾಡಿದರೆ ರೋಗವಿಲ್ಲ ಎಂಬ ನಾಣ್ಣುಡಿ ಇದೆ. ದೇಶದಲ್ಲಿ ಈಗ ಯೋಗ ಕೇವಲ ಯೋಗವಾಗಿ ಉಳಿದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಜನರನ್ನ ಭಾರತದತ್ತ ಸೆಳೆಯುವ ಮಾಧ್ಯಮವಾಗಿದೆ. ಅದರಂತೆ ಉಡುಪಿಯ ಗೃಹಿಣಿ ಯೋಗ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ.
ಕಳೆದ ವರ್ಷ ಕೊರೋನಾ ಲಾಕ್ಡೌನ್ ವೇಳೆ ಸಾಮಾಜಿಕ ಜಾಲತಾಣ ನೋಡಿ ಯೋಗ ಕಲಿತಿದ್ದರು. ಮುಂಜಾನೆ ಸೂರ್ಯೋದಯ ಸೂರ್ಯಾಸ್ತದ ಸಂದರ್ಭ ಸಮುದ್ರ ತೀರದಲ್ಲಿ ನಿರಂತರ ಯೋಗಾಭ್ಯಾಸ ಮಾಡುವ ರೇಣುಕಾ, ಯೋಗದಲ್ಲೊಂದು ಸಾಧನೆ ಮಾಡಬೇಕು ಎಂಬ ಕನಸಿಟ್ಟುಕೊಂಡಿದ್ದರು. ಆ ಕನಸೀಗ ನನಸಾಗಿದೆ. 170 ಸೂರ್ಯನಮಸ್ಕಾರವನ್ನು 17.48 ನಿಮಿಷದಲ್ಲಿ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರು ಬರೆದಿದ್ದಾರೆ.
ನಿರಂತರ ಕಠಿಣ ಅಭ್ಯಾಸ ಮಾಡಿ ದಾಖಲೆಯನ್ನ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಯೋಗಾಭ್ಯಾಸದ ನಡುವೆ ಎಲ್ಲೂ ವಿರಮಿಸದೆ, ನಿಧಾನವಾಗಿ ಯೋಗದ ಭಂಗಿಗಳನ್ನು ಪ್ರದರ್ಶಿಸದೆ ಅತಿ ವೇಗವಾಗಿ ಬರೋಬ್ಬರಿ 170 ಬಾರಿ ಸೂರ್ಯ ನಮಸ್ಕಾರ ಮಾಡಿದ್ದಾರೆ. ರೇಣುಕಾ ಅವರಿಗೆ ಪೊಲೀಸ್ ಸಿಬ್ಬಂದಿಯಾಗಿರುವ ಪತಿ ಗೋಪಾಲಕೃಷ್ಣ ಸದಾ ಬೆಂಬಲವಾಗಿ ನಿಂತಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ಜೊತೆ, ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ ಕೂಡಾ ರೇಣುಕಾ ಹೆಸರಲ್ಲಿದೆ. ಇದೀಗ ಸಂಸ್ಥೆ ಪ್ರಾಥಮಿಕ ಪ್ರಮಾಣ ಪತ್ರವನ್ನು ಸ್ಥಳದಲ್ಲೇ ನೀಡಿ ಗೌರವಿಸಿದೆ. ಮುಂದಿನ ತಿಂಗಳು ದಾಖಲೆ ಪತ್ರ ದ ಜೊತೆಗೆ ಪದಕ ತಲುಪಲಿದೆ. ಸಾಧನೆ ಮಾಡಲು ವಯಸ್ಸು ಅಡ್ಡಿ ಬರುವುದಿಲ್ಲ ಎಂಬುದನ್ನು ಗೃಹಿಣಿ ರೇಣುಕಾ ಗೋಪಾಲಕೃಷ್ಣ ಸಾಬೀತುಪಡಿಸಿದ್ದಾರೆ.