ಇಸ್ರೇಲ್-ಪ್ಯಾಲೆಸ್ಟೈನ್ ನಡುವೆ ಯುದ್ಧದ ಕಾರ್ಮೋಡ: ಹಮಾಸ್ ದಾಳಿಗೆ ಪ್ರತಿಯಾಗಿ ವಾಯುದಾಳಿಗೆ ಮುಂದಾದ ಇಸ್ರೇಲ್!
ಹೈಲೈಟ್ಸ್:
- ಮುಂದುವರಿದ ಇಸ್ರೇಲ್-ಪ್ಯಾಲೆಸ್ಟೈನ್ ನಡುವಿನ ಬಿಕ್ಕಟ್ಟು
- ಇಸ್ರೇಲ್ನಿಂದ ವಾಯುದಾಳಿ, ಗಡಿಯಲ್ಲಿ ಟ್ಯಾಂಕರ್ಗಳ ನಿಯೋಜನೆ
- ಭಾನುವಾರ ವಿಶ್ವಸಂಸ್ಥೆಯಿಂದ ತುರ್ತು ಸಭೆ
ಜೆರುಸಲೇಂ: ಗಾಜಾ ಗಡಿಯುದ್ದಕ್ಕೂ ಗುರುವಾರದಿಂದ ಇಸ್ರೇಲ್ ತನ್ನ ಸೈನ್ಯವನ್ನು ಒಟ್ಟುಗೂಡಿಸುತ್ತಿದೆ.
ಹಮಾಸ್ ದಾಳಿಗೆ ಪ್ರತಿಯಾಗಿ ಈಗಾಗಲೇ ನಡೆಸಿರುವ ವಾಯುದಾಳಿಗೆ ಮತ್ತಷ್ಟು ಶಕ್ತಿ ತುಂಬಲು ಭೂಪ್ರದೇಶದ ಮೂಲಕ ಆಕ್ರಮಣಕ್ಕೆ ಗಡಿಯಲ್ಲಿ ಟ್ಯಾಂಕರ್ಗಳನ್ನು ಸಜ್ಜುಗೊಳಿಸಲಾಗುತ್ತಿದೆ.
ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ 9 ಸಾವಿರ ಸೈನಿಕರಿಗೆ ದಾಳಿ ನಡೆಸಲು ಸನ್ನದ್ಧವಾಗಿರುವಂತೆ ಆದೇಶಿಸಲಾಗಿದೆ. ಕಳೆದ ಐದು ದಿನಗಳಿಂದ ನಡೆಯುತ್ತಿರುವ ಈ ಘರ್ಷಣೆಯಲ್ಲಿ 29 ಮಕ್ಕಳು ಸೇರಿದಂತೆ ಒಟ್ಟು 109 ಮಂದಿ ಇದುವರೆಗೂ ಮೃತಪಟ್ಟಿದ್ದಾರೆ. ”ಭೂಸೇನಾ ಪಡೆಗಳು ಹಮಾಸ್ ಮೇಲೆ ಭೀಕರ ದಾಳಿಗೆ ಸಜ್ಜಾಗಿವೆ. ಗುಡ್ಡಗಾಡುಗಳ ಮೂಲಕ ದಾಳಿಗೆ ಮುಂದಾಗುವ ಬಗ್ಗೆ ಭೌಗೋಳಿಕ ಅಧ್ಯಯನ, ರಣತಂತ್ರ ರೂಪಿಸಲಾಗಿದೆ,” ಎಂದು ಇಸ್ರೇಲ್ ಸೇನೆ ವಕ್ತಾರ ಬ್ರಿಗೇಡಿಯರ್ ಜನರಲ್ ಹಿದಾದಿ ಜಿಲ್ಬೆರ್ಮನ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈಜಿಪ್ಟಿನ ಸಂಧಾನಕಾರರು ಕದನ ವಿರಾಮದ ಪ್ರಯತ್ನಗಳಿಗಾಗಿ ಇಸ್ರೇಲಿಗೆ ಧಾವಿಸಿದ್ದಾರೆ. ಆದರೆ ಇದರಲ್ಲಿ ಅಂತಹ ಪ್ರಗತಿ ಇದುವರೆಗೆ ಕಂಡಿಲ್ಲ. ಇಸ್ರೇಲ್ನಲ್ಲಿ ಯಹೂದಿ ಮತ್ತು ಅರಬ್ ಮೂಲದ ಜನರ ಗುಂಪುಗಳ ನಡುವೆ ನಡುವೆ ಘರ್ಷಣೆ ನಡೆದಿದ್ದು, ಕೋಮು ಹಿಂಸಾಚಾರ ಹೆಚ್ಚಾಗುತ್ತಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಘರ್ಷಣೆ ಅಂತ್ಯಕ್ಕಾಗಿ ತುರ್ತು ಸಭೆಯನ್ನು ಭಾನುವಾರ ಆಯೋಜಿಸಿದೆ.
ನೆತನ್ಯಾಹು ಖಡಕ್ ಎಚ್ಚರಿಕೆ!
ತನ್ನ ದುಷ್ಕೃತ್ಯಕ್ಕೆ ಹಮಾಸ್ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಖಡಕ್ ಎಚ್ಚರಿಕೆಯನ್ನು ಫೇಸ್ಬುಕ್ ಮೂಲಕ ರವಾನಿಸಿದ್ದಾರೆ.