ರಾಜ್ಯದಲ್ಲಿ ಕಠಿಣ ಕರ್ಫ್ಯೂ ವಿಸ್ತರಣೆ ಸಾಧ್ಯತೆ: ಲಾಕ್‌ಡೌನ್‌ ಮುಂದುವರಿಸುವ ಅಗತ್ಯವಿದೆ ಎಂದ ಸಚಿವರುಗಳು!

ಹೈಲೈಟ್ಸ್‌:

  • ಮೇ 24 ರ ನಂತರವೂ ಮುಂದುವರಿಯಲಿದೆ ಲಾಕ್‌ಡೌನ್‌.?
  • ಸಚಿವರುಗಳ ಹೇಳಿಕೆಯಿಂದ ಲಾಕ್‌ಡೌನ್‌ ಕನ್ಫರ್ಮ್‌.?
  • ಕರ್ನಾಟಕ ಲಾಕ್‌ಡೌನ್‌ ಮುಂದುವರಿಸಲು ಕಾರಣವೇನು?

ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಕಠಿಣ ಕರ್ಫ್ಯೂ ಅಂತ್ಯಗೊಳ್ಳಲು ಹತ್ತು ದಿನ ಬಾಕಿಯಿದೆ. ಆದರೆ, ಇದಕ್ಕೆ ಮುನ್ನವೇ ಇದರ ವಿಸ್ತರಣೆ ಸೂಕ್ತ ಎಂಬ ಚರ್ಚೆ ಪ್ರಾರಂಭವಾಗಿದೆ. ಕಂದಾಯ ಸಚಿವ ಆರ್‌. ಅಶೋಕ್‌ ಹಾಗೂ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರೂ ಲಾಕ್‌ಡೌನ್‌ ವಿಸ್ತರಣೆ ಅಗತ್ಯವೆಂದು ಪ್ರತಿಪಾದಿಸಿದ್ದಾರೆ.

ಜನತಾ ಕರ್ಫ್ಯೂ, ಕಠಿಣ ನಿರ್ಬಂಧದ ಬಳಿಕವೂ ಕೋವಿಡ್‌ ಸೋಂಕು ಇಳಿಮುಖವಾಗಿಲ್ಲ. ಸೋಂಕಿನ ಅಬ್ಬರ ತಗ್ಗಿರುವುದಾಗಿ ಸರಕಾರವೇ ಹೇಳಿದ್ದರೂ ಜನರಲ್ಲಿ ಆತಂಕ ದೂರವಾಗಿಲ್ಲ. ಆಮ್ಲಜನಕ, ಹಾಸಿಗೆ ಇನ್ನಿತರ ಮೆಡಿಕಲ್‌ ಸೌಕರ್ಯಗಳ ಕೊರತೆ ನೀಗಿಲ್ಲ. ಇಷ್ಟು ಸಾಲದೆಂಬಂತೆ ಗ್ರಾಮೀಣ ಪ್ರದೇಶಕ್ಕೂ ಸೋಂಕು ಹರಡುತ್ತಿದೆ. ಹಾಗಾಗಿ ವೈರಸ್‌ ಪ್ರಸರಣದ ಚೈನ್‌ ಕಟ್‌ ಮಾಡಲು ಲಾಕ್‌ಡೌನ್‌ ವಿಸ್ತರಣೆ ಅತ್ಯವಶ್ಯಕ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ದೇಶದಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಾರದಿರುವುದರಿಂದ ಲಾಕ್‌ಡೌನ್‌ ಅನಿವಾರ್ಯವೆಂದು ಐಸಿಎಂಆರ್‌ ಕೂಡ ಹೇಳಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಅವಲೋಕನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನಾನಾ ರಾಜ್ಯಗಳೊಂದಿಗೆ ಮತ್ತೊಂದ ಸುತ್ತಿನ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಹಾಗಾಗಿ ಲಾಕ್‌ಡೌನ್‌ನಂತಹ ಬಿಗಿ ಕ್ರಮ ಜಾರಿಗೊಳಿಸಲು ಪ್ರಧಾನಿ ಕಡೆಯಿಂದಲೂ ಸಲಹೆ ಬರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಚಿವರ ಒಲವು
ಈ ಮಧ್ಯೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕಂದಾಯ ಸಚಿವ ಆರ್‌. ಅಶೋಕ್‌ ”ಲಾಕ್‌ಡೌನ್‌ ಮುಂದುವರಿಸುವ ಅಗತ್ಯವಿದೆ. ಬೆಂಗಳೂರಿನಲ್ಲೂ ಲಾಕ್‌ಡೌನ್‌ ವಿಸ್ತರಿಸಬೇಕಾಗುತ್ತದೆ. ಈ ಬಗ್ಗೆ ಸಿಎಂ ಗಮನಕ್ಕೆ ತರಲಾಗುವುದು,” ಎಂದು ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿರುವ ಸಚಿವ ಎಸ್‌.ಟಿ.ಸೋಮಶೇಖರ್‌ ಅವರೂ ಲಾಕ್‌ಡೌನ್‌ಗೆ ಪರ ಒಲವು ತೋರಿದ್ದಾರೆ. ಇನ್ನು ಡಿಸಿಎಂ ಗೋವಿಂದ ಕಾರಜೋಳ ಈ ವಿಚಾರದಲ್ಲಿ ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದಿದ್ದಾರೆ.

ಮುಂದಿನ ವಾರ ಸಭೆ
ಲಾಕ್‌ಡೌನ್‌ ವಿಸ್ತರಿಸಬೇಕೊ ಬೇಡವೊ ಎಂಬ ಬಗ್ಗೆ ಮುಂದಿನ ವಾರ ಸರಕಾರ ಸಭೆ ನಡೆಸಲಿದೆ. ತಜ್ಞರು ಹಾಗೂ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯವನ್ನೂ ಪಡೆಯಲಾಗುತ್ತದೆ. ಮೇ 24ಕ್ಕೆ ಕಠಿಣ ಕರ್ಫ್ಯೂ ಅಂತ್ಯಗೊಳ್ಳಲಿದೆ. ಇದಕ್ಕೆ ಮುನ್ನ ತಜ್ಞರೊಂದಿಗೆ ಸಿಎಂ ಅವರು ಸಭೆ ನಡೆಸಲಿದ್ದಾರೆ. ಅದಾದ ಬಳಿಕ ಸಚಿವ ಸಂಪುಟ ಸಭೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರುವ ನಿರೀಕ್ಷೆಯಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *