ಅಸ್ಸಾಂನಲ್ಲಿ ಬೆಳ್ಳಂ ಬೆಳಿಗ್ಗೆ ನಡುಗಿನ ಭೂಮಿ: 3.9 ರಿಕ್ಟರ್ ಮಾಪನದಲ್ಲಿ ತೀವ್ರತೆಯ ಭೂಕಂಪ
ಹೈಲೈಟ್ಸ್:
- ಅಸ್ಸಾಂನ ಸೋನಿತ್ಪುರ ಜಿಲ್ಲೆಯಲ್ಲಿ ನಡುಗಿದ ಭೂಮಿ
- ಶನಿವಾರ ಬೆಳಿಗ್ಗೆಯೇ ಭೂಕಂಪನದ ಆಘಾತ
- ಕಳೆದ ತಿಂಗಳಿನಿಂದ ಹಲವು ಬಾರಿ ಭೂಕಂಪನ
ಗುವಾಹಟಿ: ಅಸ್ಸಾಂನಲ್ಲಿ ಶನಿವಾರ ಬೆಳಿಗ್ಗೆ 8.33ರ ವೇಳೆಗೆ ರಿಕ್ಟರ್ ಮಾಪನದಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಕೇಂದ್ರ ಅಸ್ಸಾಂನ ಸೋನಿತ್ಪುರ್ ಜಿಲ್ಲೆಯ ಪೂರ್ವ-ವಾಯವ್ಯ ಭಾಗದಿಂದ 41 ಕಿಮೀ ದೂರದಲ್ಲಿನ ತೇಜ್ಪುರದಲ್ಲಿ, ರಿಕ್ಟರ್ ಮಾಪನದಲ್ಲಿ 3.9 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಎನ್‌ಸಿಎಸ್ ಹೇಳಿದೆ. ಈ ಕಂಪನದ ಆಳ 16 ಕಿಮೀ ಎಂದು ಅಂದಾಜಿಸಲಾಗಿದೆ.
ಈ ಭೂಕಂಪನವು ಲಘು ಪ್ರಮಾಣದ್ದಾಗಿರುವುದರಿಂದ ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಭೂಕಂಪನದ ಮೂಲ ಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ನಡುಗಿನ ಅನುಭವ ಆಗಿದ್ದರಿಂದ ಜನರು ಭೀತಿಯಿಂದ ಮನೆಗಳಿಂದ ಹೊರಗೆ ಓಡಿ ಬಂದರು.
ಅಸ್ಸಾಂನಲ್ಲಿ ಕಳೆದ ಕೆಲವು ಸಮಯದಿಂದ ಹಲವು ಬಾರಿ ಭೂಮಿ ನಡುಗಿದೆ. ಕಳೆದ ತಿಂಗಳು ಸೋನಿತ್ಪುರ್‌ನಲ್ಲಿ ಒಂದೇ ದಿನದಲ್ಲಿ ಹತ್ತು ಸಲ ಭೂಕಂಪನವಾಗಿತ್ತು. ಏಪ್ರಿಲ್ 28ರಂದು ಸೋನಿತ್ಪುರದಲ್ಲಿ ರಿಕ್ಟರ್ ಮಾಪನದಲ್ಲಿ 6.4 ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು. ಇದರ ಸಾಮರ್ಥ್ಯ ಬಲವಾಗಿದ್ದರಿಂದ ನೆರೆಯ ಪಶ್ಚಿಮ ಬಂಗಾಳದ ಹಲವು ಭಾಗಗಳು ಮತ್ತು ನೆರೆಯ ಭೂತಾನ್ ಹಾಗೂ ಬಾಂಗ್ಲಾದೇಶಗಳಲ್ಲಿಯೂ ಭೂಮಿ ನಡುಗಿತ್ತು. ಭೂಕಂಪನದ ತೀವ್ರತೆಗೆ ಗುವಾಹಟಿಯಲ್ಲಿ ಹಲವು ಕಟ್ಟಡಗಳು ಹಾನಿಗೊಳಗಾಗಿದ್ದವು.