‘ಮೋದಿಜಿ, ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಯಾಕೆ ಕೊಟ್ಟಿರಿ?’ ಎಂದು ಪೋಸ್ಟರ್ ಅಂಟಿಸಿದ್ದ 15 ಮಂದಿ ಬಂಧನ!
ಹೈಲೈಟ್ಸ್:
- ಪ್ರಧಾನಿ ಮೋದಿ ನಡೆ ಟೀಕಿಸಿದ್ದ 17 ಮಂದಿ ವಿರುದ್ಧ ಎಫ್‌ಐಆರ್, 15 ಮಂದಿ ಬಂಧನ
- ‘ಮೋದಿಜಿ, ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಯಾಕೆ ಕೊಟ್ಟಿರಿ?’ ಪೋಸ್ಟರ್ ಅಂಟಿಸಿದ್ದರು
- ಭಾರತಕ್ಕೆ ಆದ್ಯತೆ ನೀಡದೆ ವಿದೇಶಕ್ಕೆ ಲಸಿಕೆ ಕಳುಹಿಸಿದ್ದನ್ನು ಟೀಕಿಸಿದ್ದ ದಿಲ್ಲಿಯ ಯುವಕರು
- ದೂರು ಬಂದರೆ ಮತ್ತಷ್ಟು ಎಫ್‌ಐಆರ್ ದಾಖಲಿಸಲಾಗುವುದು ಎಂದ ದಿಲ್ಲಿಯ ಹಿರಿಯ ಪೊಲೀಸ್ ಅಧಿಕಾರಿ
ಹೊಸದಿಲ್ಲಿ: ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಟೀಕಿಸಿ ದಿಲ್ಲಿಯ ಬೀದಿಗಳಲ್ಲಿ ಭಿತ್ತಿಪತ್ರ ಅಂಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹದಿನೈದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ 17 ಎಫ್‌ಐಆರ್‌ಗಳನ್ನು ದಾಖಲಿಸಿ, 15 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಬಂಧಿತರು, ‘ಮೋದೀಜಿ ನಮ್ಮ ಮಕ್ಕಳ ಲಸಿಕೆಗಳನ್ನು ವಿದೇಶಗಳಿಗೆ ಯಾಕೆ ಕಳಿಸಿಕೊಟ್ಟಿರಿ?’ ಎಂದು ಪ್ರಶ್ನಿಸಿದ್ದ ಭಿತ್ತಿಪತ್ರಗಳನ್ನು ರಾಜಧಾನಿ ದಿಲ್ಲಿಯ ಅನೇಕ ಕಡೆಗಳಲ್ಲಿ ಅಂಟಿಸಿದ್ದರು. ಗುರುವಾರ ಈ ಬಗ್ಗೆ ಮಾಹಿತಿ ಪಡೆದ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು, ಆರೋಪಿಗಳ ಪತ್ತೆಗೆ ಆದೇಶ ನೀಡಿದ್ದರು. ತರುವಾಯ ಬಂದ ದೂರುಗಳನ್ನು ಆಧರಿಸಿ 17 ಎಫ್‌ಐಆರ್ ದಾಖಲಿಸಿ, 15 ಮಂದಿಯನ್ನು ಬಂಧಿಸಲಾಗಿದೆ.
ಸಾರ್ವಜನಿಕ ಸೇವಕರಿಂದ ಘೋಷಿಸಲ್ಪಟ್ಟ ಆದೇಶ ಉಲ್ಲಂಘನೆ ಮಾಡಿದ ಆರೋಪವನ್ನು ಭಿತ್ತಿಪತ್ರ ಅಂಟಿಸಿದವರ ವಿರುದ್ಧ ಹೊರಿಸಲಾಗಿದೆ. ಪ್ರಕರಣದ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ. ಇನ್ನಷ್ಟು ದೂರುಗಳು ಬರುವ ಸಾಧ್ಯತೆ ಇದೆ. ಅದನ್ನು ನೋಡಿಕೊಂಡು ಮತ್ತಷ್ಟು ಎಫ್‌ಐಆರ್‌ಗಳನ್ನು ದಾಖಲಿಸಲಾಗುವುದು ಎಂದು ದಿಲ್ಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.