ಕಲಬುರಗಿ ಜಿಮ್ಸ್ನಲ್ಲಿ ಪ್ಲಾಸ್ಮಾ ಥೆರಪಿ ಆರಂಭಕ್ಕೆ ಡಾ. ಅಜಯಸಿಂಗ್ ಆಗ್ರಹ
ನಗರದ ಕಲಬುರ್ಗಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಿಮ್ಸ್ನಲ್ಲಿ ಕೊರೋನಾ ಸೋಂಕಿತರ ಜೀವ ಉಳಿಸಲು ಆದಷ್ಟು ಬೇಗ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರಂಭಿಸಬೇಕು. ಇಂತಹ ಅತ್ಯಾಧುನಿಕ ಚಿಕಿತ್ಸೆಗಳೊಂದಿಗೆ ಸೋಂಕಿತರ ಜೀವ ಉಳಿಸುವ ಕೆಲಸಕ್ಕೆ ಜಿಮ್ಸ್ ವೈದ್ಯರು ಬರುವ ದಿನಗಳಲ್ಲಿ ಸನ್ನದ್ದರಾಗಬೇಕು ಎಂದು ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಅಜಯಸಿಂಗ್ ಅವರು ಒತ್ತಾಯಿಸಿದರು.
ಜಿಮ್ಸ್ ಕೋವಿಡ್ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿಗೆ ತುತ್ತಾಗಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳ ಉಭಯ ಕುಶಲೋಪರಿ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಲಾಸ್ಮಾ ಥೆರಪಿ ಆರಂಭಿಸುವ ಉದ್ದೇಶಕ್ಕೆಂದೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯವರು 40 ಲಕ್ಷ ರೂ.ಗಳನ್ನು ಜಿಮ್ಸ್ಗೆ ಕಳೆದ ವರ್ಷವೇ ಬಿಡುಗಡೆ ಮಾಡಿದ್ದಾರೆ. ಆದಾಗ್ಯೂ, ಈ ಅನುದಾನ ಸದ್ಬಳಕೆ ಆಗಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಹಣ ಬಳಕೆ ಮಾಡುವಲ್ಲಿ ಯಾಕೆ ವಿಳಂಬ? ಎಂದು ಪ್ರಶ್ನಿಸಿದ ಅವರು, ಪ್ಲಾಸ್ಮಾ ಥೆರಪಿ ಆರಂಭಕ್ಕೆ ಅಗತರ್ಯ ತಯಾರಿ ಮಾಡಿಕೊಂಡು ಜಿಮ್ಸ್ ಕ್ರಿಯಾಶೀಲವಾಗಲಿ. ಸೋಂಕಿತರ ಜೀವ ಉಳಿಸುವ ಕೆಲಸಕ್ಕೆ ಆದ್ಯತೆ ನೀಡಲಿ ಎಂದು ಒತ್ತಾಯಿಸಿದರು.
ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲ್ ಅವರೊಂದಿಗೂ ಚರ್ಚಿಸಿರುವೆ. ಅವರು ಪ್ಲಾಸ್ಮಾ ಥೆರಪಿ ಆರಂಭಕ್ಕೆ ಸೂಕ್ತ ಮಾರ್ಗಸೂಚಿ ಇನ್ನೂ ಹೊಂದಿಲ್ಲವೆಂದು ಹೇಳಿದ್ದಾರೆ. ಅದಕ್ಕೆ ಏನೆಲ್ಲ ಸಿದ್ದತೆಗಳು ಬೇಕೋ ಮಾಡಿಕೊಂಡು ಆ ಚಿಕಿತ್ಸಾ ವಿಧಾನ ಇಲ್ಲಿ ಬೇಗ ಆರಂಭಿಸಲಿ. ಇದರಿಂದ ನೂರಾರು ಸೋಂಕಿತರಿಗೆ ಚಿಕಿತ್ಸೆ ನೀಡುವ ಕೆಲಸ ಬೇಗ ಆರಂಭವಾಗಲಿ ಎಂದು ಅವರು ಹೇಳಿದರು.
ಕೋವಿಡ್ ಕಾಳಜಿ ಕೇಂದ್ರಗಳಲ್ಲಿ ಇರುವ ಕರ್ತವ್ಯನಿರತ ವೈದ್ಯರ ತಂಡದೊಂದಿಗೆ ಮಾತುಕತೆ ನಡೆಸಿ ಅಲ್ಲಿ ನೀಡಲ್ಪಡುತ್ತಿರುವ ಚಿಕಿತ್ಸೆ, ಲಭ್ಯ ಔಷಧಿಗಳು, ಆಮ್ಲಜನಕ ಪೂರೈಕೆ ಮುಂತಾದ ವಿಷಯಗಳ ಮಾಹಿತಿ ಪಡೆದುಕೊಂಡಿರುವೆ. ಸಾಕಷ್ಟು ಕೆಲಸ ಇಲ್ಲಿ ನಡೆದಿದೆ. ಇನ್ನೂ ಹೆಚ್ಚಿನ ಸಿಬ್ಬಂದಿ ಇಲ್ಲಿ ನೇಮಕಗೊಂಡಲ್ಲಿ ಸೋಂಕಿತರಿಗೆ ಇನ್ನೂ ಅನುಕೂಲ ಆಗುವಂತಹ ಚಿಕಿತ್ಸೆ ನೀಡಬಹುದಾಗಿದೆ ಎಂದು ಅವರು ತಿಳಿಸಿದರು.
404 ಹಾಸಿಗೆಗಳ ಕೋವಿಡ್ ಕಾಳಜಿ ಕೇಂದ್ರದಲ್ಲಿ 40 ವೆಂಟಿಲೇಟರ್ಗಳಿವೆ. ಆದಾಗ್ಯೂ, ಇಲ್ಲಿ ಸ್ಟಾಫ್ ನರ್ಸ್, ಡಿ ಗುಂಪಿನ ನೌಕರರ ಕೊರತೆ ಇರುವುದು ನಾನು ಭೇಟಿ ಕೊಟ್ಟ ಕಾಲಕ್ಕೆ ಕಂಡುಬಂತು. ಆರೋಗ್ಯ ಸಿಬ್ಬಂದಿಗಳ ಕೊರತೆಯಿಂದಾಗಿ ಅಗತ್ಯ ಚಿಕಿತ್ಸೆ ನೀಡುವಲ್ಲಿ ಕೆಲವೊಮ್ಮೆ ತೊಂದರೆಗಳು ಎದುರಾಗುತ್ತಿವೆ. ತಕ್ಷಣ ಸರ್ಕಾರ ಇಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
90 ಜನ ಡಿ ಗುಂಪಿನ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಇನ್ನೂ ಕೆಲಸಕ್ಕೆ ಬಂದಿಲ್ಲವೆಂಬ ಮಾಹಿತಿ ದೊರಕಿದೆ. ನೇಮಕಗೊಂಡವರು ಬೇಗ ಕೆಲಸಕ್ಕೆ ಬರಲಿ. ಇದಲ್ಲದೇ ಹೆಚ್ಚಿನ ಸಿಬ್ಬಂದಿ ನೇಮಕದ ಕೆಲಸವೂ ಆಗಬೇಕು. ಹೀಗಾದಲ್ಲಿ ಆಸ್ಪತ್ರೆ ಕಾರ್ಯ, ಕೋವಿಡ್ ವಾರ್ಡ್ ನಿರ್ವಹಣೆ ಸುಗಮವಾಗಲಿದೆ ಎಂದು ಅವರು ಹೇಳಿದರು.
ಕಲಬುರ್ಗಿಯಲ್ಲಿ ಸೋಂಕಿತರ ಪ್ರಮಾಣ ಈ ವಾರ ಶೇಕಡಾ 22.68ರಷ್ಟು ತಲುಪಿದರೆ, ಮರಣ ದರ ಶೇಕಡಾ 0.98 ತಲುಪಿದೆ. ಇದು ಆತಂಕದ ಸಂಗತಿ. ಸಕ್ರೀಯ 15.836 ಪ್ರಕರಣಗಳು ಜಿಲ್ಲೆಯಲ್ಲಿವೆ. ಹೀಗಾಗಿ ಕಲಬುರ್ಗಿಯಲ್ಲಿ ಯಾವುದೇ ಸಂದರ್ಭದಲ್ಲಿ ಸೋಂಕಿನ ಸ್ಫೋಟವಾಗಬಹುದು. ಅದನ್ನು ಸಮರ್ಥವಾಗಿ ನಿಭಾಯಿಸುವ ಕೆಲಸಕ್ಕೆ ಜಿಮ್ಸ್ ಇನ್ನೂ ಹೆಚ್ಚಿನ ಸಿಬ್ಬಂದಿ, ಹೊಸ, ಹೊಸ ಚಿಕಿತ್ಸಾ ವಿಧಾನಗಳೊಂದಿಗೆ ಅಣಿಗೊಳ್ಳುವುದು. ಇಂದಿನ ತುರ್ತು ಅಗತ್ಯವಾಗಿದೆ. ಸರ್ಕಾರವೂ ಈ ಕೇಂದ್ರಕ್ಕೆ ಬಲ ತುಂಬುವ ಕೆಲಸ ಮಾಡಲಿ ಎಂದು ಅವರು ಆಗ್ರಹಿಸಿದರು.