ಬಾಳ ನೌಕೆಯ ಪಯಣ ಮುಗಿಸಿದ ಹವ್ಯಾಸಿ ರಂಗಕರ್ಮಿ ಶೋಭಾ ರಂಜೋಳಕರ್
ಹಿರಿಯ ಹವ್ಯಾಸಿ ರಂಗ ಕಲಾವಿದೆ ಶ್ರೀಮತಿ ಶೋಭಾ ರಂಜೋಳಕರ್ ಅವರು ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯಕ್ರಿಯೆಯು ಸಂಜೆಯೇ ಅಟಲ್ ಬಿಹಾರಿ ವಾಜಪೇಯಿ ನಗರದಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ಹೇಳಿವೆ.
ಕಳೆದ ಕೆಲವು ದಿನಗಳಿಂದ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಅವರು ಭಾನುವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಗರದ ಪಿಆಂಡ್‍ಟಿ ನ್ಯೂ ರಾಘವೇಂದ್ರ ಕಾಲೋನಿ ನಿವಾಸಿಯಾಗಿರುವ ರಂಜೋಳಕರ್ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ರಂಗ ಪ್ರವೇಶ ಮಾಡಿದ್ದ ಅವರು, ನಾಲ್ಕು ದಶಕಗಳಿಂದ ರಂಗ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ.
ಸಿನೇಮಾ, ನಾಟಕ, ಧಾರವಾಹಿಗಳಲ್ಲಿ ಅಭಿನಯಿಸುವುದರ ಜೊತೆ, ಜೊತೆಗೆ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಹಲವು ಕಿರುತೆರೆ ಧಾರವಾಹಿಗಳೂ ಸೇರಿದಂತೆ ನಾಡಿನ ಶ್ರೇಷ್ಠ ಸಾಹಿತಿ, ಕವಿ ಚಂದ್ರಶೇಖರ್ ಕಂಬಾರ್ ಅವರೊಂದಿಗೆ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ಹಲವು ನಾಟಕಗಳನ್ನು ಸಹ ರಂಜೋಳಕರ್ ಅವರು ನಿರ್ದೇಶನ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ನ ಚಟುವಟಿಕೆಗಳಲ್ಲಿಯೂ ಅವರು ಸಕ್ರೀಯವಾಗಿ ಭಾಗಿಯಾಗುತ್ತಿದ್ದರು.
ಮಹಿಳೆಯ ಜಾಗೃತಿಯ ಕುರಿತು ಸಾಕಷ್ಟು ಆಸಕ್ತಿ ಹೊಂದಿದ್ದ ಅವರು, ನಗರದ ಸಂಗಮೇಶ್ವರ್ ಕಾಲೋನಿಯಲ್ಲಿ ಶ್ರೀ ಸಂಗಮೇಶ್ವರ್ ಮಹಿಳಾ ಮಂಡಳದ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದ್ದರು.
ಮಹಿಳಾ ಸಂಘದಲ್ಲಿ ಎಲ್ಲರೊಳಗೊಬ್ಬರಾಗಿ ಬೆರೆತು, ಮಹಿಳೆಯರಿಗಾಗಿ ಅನೇಕ ಮಹಿಳಾಪರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಮಹಿಳೆಯರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಶ್ರೀಮತಿ ಶೋಭಾ ರಂಜೋಳಕರ್ ಅವರ ನಿಧನಕ್ಕೆ ಹಲವಾರು ಸಾಹಿತಿಗಳು, ಕವಿಗಳು, ಕಲಾವಿದರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ತಾಯಿಯ ಸ್ಥಾನದಲ್ಲಿದ್ದು, ಅವ್ವ ಎಂದೇ ಕರೆಸಿಕೊಳ್ಳುತ್ತಿದ್ದ ಶ್ರೀಮತಿ ಶೋಭಾ ರಂಜೋಳಕರ್ ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ. ಅವರ ಕುಟುಂಬ ಹಾಗೂ ಒಂದೇ ಕುಟುಂಬದಂತಿರುವ ರಂಗ ಮಾಧ್ಯಮದ ಎಲ್ಲ ಬಾಂಧವರಿಗೂ ಅವರ ಅಗಲಿಕೆಯ ದು:ಖ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅವರು ಪ್ರಾರ್ಥಿಸಿದ್ದಾರೆ.
ಶ್ರೀಮತಿ ಶೋಭಾ ರಂಜೋಳಕರ್ ಅವರು ಆದರ್ಶ ಮಹಿಳೆ. ನಿಜವಾದ ರಂಗಕರ್ಮಿ. ಸ್ವಾಭಿಮಾನದ ಸಂಕೇತ. ಎಲ್ಲಕ್ಕಿಂತ ಹೆಚ್ಚು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ನನ್ನ ಪ್ರೀತಿಯ ಅಜ್ಜಿ ಇಲ್ಲ ಅನ್ನೋದೆ ಇನ್ನೂ ನನಗೆ ತಿಳಿಯದಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ್ ಬಡಿಗೇರ್ ಅವರು ಕಂಬನಿ ಮಿಡಿದಿದ್ದಾರೆ.
ಜನಪರ ಕಾಳಜಿ, ಸಾಮಾಜಿಕ ಧೋರಣೆಯ ಸಂಘಟಕಿ, ರಂಗಭೂಮಿ, ಆಕಾಶವಾಣಿ, ಚಲನಚಿತ್ರ ನಟಿ, ಪರೋಪಕಾರಿ ಗುಣದ ದಿಟ್ಟ ಮಹಿಳೆ ಶೋಭಾ ರಂಜೋಳಕರ್ ಅವರ ಆಕಸ್ಮಿಕ ಅಗಲಿಕೆ ಅತ್ಯಂತ ದು:ಖದ ಸಂಗತಿ ಎಂದು ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಅವರು ಶೋಕ ವ್ಯಕ್ತಪಡಿಸಿದ್ದಾರೆ.
ಅವರ ಆತ್ಮಕ್ಕೆ ಸದ್ಗತಿಯನ್ನು ಹಾಗೂ ಅವರ ಕುಟುಂಬದವರಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಅವರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ಅದೇ ರೀತಿ ಸಾಹಿತಿಗಳಾದ ಬಿ.ಎಚ್. ನಿರಗುಡಿ, ನ್ಯಾಯವಾದಿಗಳಾದ ವಿನೋದಕುಮಾರ್ ಜನೇವರಿ, ರಮೇಶ್ ಕಡಾಳೆ, ಬಿಜೆಪಿ ಮಾಧ್ಯಮ ವಕ್ತಾರ ಅರುಣ್ ಕುಲಕರ್ಣಿ, ಹೈದ್ರಾಬಾದ್ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಉಮಾಕಾಂತ್ ನಿಗ್ಗುಡಗಿ, ಪ್ರಿನ್ಸಿಪಾಲ್ ಡಾ. ಪ್ರಲ್ಹಾದ್ ಬುರ್ಲಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಂಬಾರಾಯ್ ಅಷ್ಟಗಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ್, ಪ್ರಕಾಶಕ ಬಸವರಾಜ್ ಕೋನೆಕ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಸೂರಜಸಿಂಗ್ ತಿವಾರಿ, ಮಡಿವಾಳಪ್ಪ ನಾಗರಹಳ್ಳಿ, ವಿಜಯಕುಮಾರ್ ತೇಗಲತಿಪ್ಪಿ ಮುಂತಾದವರು ಶೋಭಾ ರಂಜೋಳಕರ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.