ಕೋಲಾರದಲ್ಲಿ ಅಕ್ಕ ತಂಗಿಯನ್ನು ಒಂದೇ ಮುಹೂರ್ತದಲ್ಲಿ ವರಿಸಿದ್ದ ಮದುಮಗ ಜೈಲಿಗೆ!
ಕೋಲಾರ (ಮೇ 16); ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡಗು ಗ್ರಾಮದಲ್ಲಿ ನಿನ್ನೆ ಒಂದೇ ದಿನ, ಒಂದೇ ಮುಹೂರ್ತದಲ್ಲಿ ಅಕ್ಕ-ತಂಗಿ ಇಬ್ಬರನ್ನೂ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದ ಮದುಮಗನನ್ನು ಪೊಲೀಸರು ಇಂದು ಬಂಧಿಸಿ ಜೈಲಿಗೆ ಕಳುಹಿಸಿರುವ ಘಟನೆ ನಡೆದಿದೆ. ಮದುಮಗನನ್ನು ಉಮಾಪತಿ ಎಂದು ಗುರುತಿಸಲಾಗಿದೆ. ಈತ ನಿನ್ನೆಯ ಮದುವೆ ಕಾರ್ಯಕ್ರಮದಲ್ಲಿ ಸುಪ್ರಿಯಾ ಮತ್ತು ಲಲಿತ ಎನ್ನುವ ಅಕ್ಕ ತಂಗಿಯರನ್ನ ಮದುವೆಯಾಗಿದ್ದ. ಆದರೆ, ಲಲಿತ ಅಪ್ರಾಪ್ತೆ (16) ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಅಕ್ಕ ಸುಪ್ರಿಯಾ ಮಾತು ಬಾರದ ಹುಟ್ಟು ಮೂಕಿಯಾದರೆ ತಂಗಿ ಸುಪ್ರಿಯಾ ಅಪ್ರಾಪ್ತೆ. ಮದುಮಗ ಇಬ್ಬರನ್ನೂ ಮದುವೆಯಾಗಿದ್ದ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಹೀಗಾಗಿ ಮದುವೆ ಕುರಿತು ಪರಿಶೀಲನೆ ಮಾಡಲು ಆದೇಶಿಸಿದ್ದ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ, ಪರಿಶೀಲನೆ ವೇಳೆ ಲಲಿತ ಅಪ್ರಾಪ್ತೆ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಉಮಾಪತಿ ಸೇರಿ 7 ಜನರ ವಿರುದ್ದ ಪ್ರಕರಣ ದಾಖಲಿಸಿರುವ ನಂಗಲಿ ಪೊಲೀಸರು ಪ್ರಮುಖ ಆರೋಪಿ ಉಮಾಪತಿಯನ್ನು ಬಂಧಿಸಿದ್ದಾರೆ.
ಘಟನೆಯ ವಿವರ:
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿನ ಸುಪ್ರಿಯಾ ಮತ್ತು ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಎಂಬ ವ್ಯಕ್ತಿ ಒಂದೇ ಮುಹೂರ್ತದಲ್ಲಿ ನಿನ್ನೆ ಮದುವೆ ಮಾಡಿಕೊಂಡಿದ್ದ. ಕೋಲಾರದ ಪ್ರಸಿದ್ದ ಕುರುಡುಮಲೆ ದೇಗುಲದಲ್ಲಿ ಮದುವೆ ನಡೆದಿದ್ದು, ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಆರತಕ್ಷತೆಯು ನೆರವೇರಿದೆ.
ಇನ್ನು ಉಮಾಪತಿ ವರಿಸಿರುವ ಅಕ್ಕ ಸುಪ್ರಿಯಾ ಹುಟ್ಟು ಮೂಕಿಯಾಗಿದ್ದು, ಮಾತು ಬರುವುದಿಲ್ಲ. ಹೀಗಾಗಿ ಸುಪ್ರಿಯಾ ತಂಗಿ ಲಲಿತಾಳನ್ನು ಮದುವೆಯಾಗಿದ್ದಾನೆ ವರ ಉಮಾಪತಿ. ಇನ್ನು ಮಾತು ಬಾರದ ಕಾರಣ ಸುಪ್ರಿಯಾಳನ್ನ ಯಾರು ಮದುವೆಯಾಗಲು ಮುಂದೆ ಬಂದಿಲ್ಲ ಎಂದು ತಿಳಿದುಬಂದಿದೆ.
ಇನ್ನು ಅಕ್ಕನಿಗೆ ಎಲ್ಲಿ ಮದುವೆಯಾಗುವುದಿಲ್ಲವೋ ಎಂಬ ಯೋಚನೆಯಲ್ಲಿ ಲಲಿತಾ ಸಹ ಇದ್ದಳು, ಹೀಗಾಗಿ ತಂಗಿಯೊಂದಿಗೆ ಅಕ್ಕ ಸುಪ್ರಿಯಾಳನ್ನು ಮದುವೆಯಾಗು ಎನ್ನುವ ಮಾತನ್ನ ಪೋಷಕರು ಹೇಳಿದ್ದಾರೆ. ಸ್ವಂತ ಅಕ್ಕ ರಾಣೇಮ್ಮ ಹೇಳಿದಂತೆ ಅಕ್ಕನ ಮಕ್ಕಳನ್ನೆ ಮದುವೆಯಾಗಿ ಈಗ ಮೂವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಬ್ಬರು ಯುವತಿಯರನ್ನ ಮದುವೆಯಾದ ಫೋಟೋ ಹಾಗೂ ಮದುವೆ ಲಗ್ನಪತ್ರಿಕೆ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿತ್ತು. ಜೊತೆಗೆ ಸಾಕಷ್ಟು ಮಂದಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದರು. ಇನ್ನು ಸುಪ್ರಿಯಾ, ಲಲಿತಾ ಕುಟುಂಬದಲ್ಲಿ ಎರಡೆರಡು ಯುವತಿಯನ್ನ ವರಿಸಿರುವುದು ಇದೇ ಮೊದಲಲ್ಲ.
ಬದಲಾಗಿ ಇವರ ತಂದೆ ನಾಗರಾಜಪ್ಪ ಸಹ ಇಬ್ಬರು ಅಕ್ಕ ತಂಗಿಯರನ್ನು ಮದುವೆ ಮಾಡಿಕೊಂಡಿದ್ದರು. ವಿಶೇಷವೆಂದರು, ರಾಣೇಮ್ಮ ಮತ್ತು ನಾಗರಾಜಪ್ಪ ದಂಪತಿಗು ಹುಟ್ಟಿದ ಮೂವರು ಮಕ್ಕಳಲ್ಲಿ ಒಂದು ಮಗುವಿಗೆ ಮಾತು ಬರುತ್ತಿರಲಿಲ್ಲ. ಇದೀಗ ಅಂತದ್ದೇ ರೀತಿಯಲ್ಲಿ ಇಬ್ಬರನ್ನ ಉಮಾಪತಿ ಮದುವೆ ಆಗಿದ್ದಾರೆ.
ಆರ್ಥಿಕವಾಗಿ ಸದೃಡತೆ ಇಲ್ಲದಿದ್ದರು, ಇಬ್ಬರನ್ನ ಸಮಾನವಾಗಿ ನೋಡಿಕೊಳ್ಳಿವುದಾಗಿ ಉಮಾಪತಿ ತಿಳಿಸಿದ್ದು, ಹಿರಿಯರ ಹಾಗು ಇಬ್ಬರು ಯುವತಿಯರ ಒಪ್ಪಿಗೆ ಮೇರೆಗೆ, ಮದುವೆಯಾಗಿರುವುದಾಗಿ ತಿಳಿಸಿದ್ದರು. ಆದರೆ, ಇದೇ ಪ್ರಕರಣ ಇದೀಗ ಮದುಮಗ ಮತ್ತು ಸಂಬಂಧಪಟ್ಟವರ ಪಾಲಿಗೆ ಕಂಟಕವಾಗಿ ಪರಿಣಮಿಸಿರುವುದು ಮಾತ್ರ ಸುಳ್ಳಲ್ಲ.