ಶಹಾಬಾದ ಇ.ಎಸ್.ಐ.ಸಿ. ಆಸ್ಪತ್ರೆ‌ 3 ವಾರದಲ್ಲಿ ಕೋವಿಡ್ ಕೇರ್ ಸೆಂಟರ್ ಅಗಿ ಪರಿವರ್ತನೆ -ಮುರುಗೇಶ‌ ನಿರಾಣಿ

 

ಕಲಬುರಗಿ,ಮೇ.17(ಕ.ವಾ) ದಶಕದಿಂದ ಕಾರ್ಯಾಚರಣೆವಿಲ್ಲದೆ ಹಾಳು ಬಿದ್ದಿರುವ ಶಹಾಬಾದ ಇ.ಎಸ್.ಐ.ಸಿ ಆಸ್ಪತ್ರೆಯನ್ನು ಮುಂದಿನ 3 ವಾರದಲ್ಲಿ ದುರಸ್ತಿ ಮಾಡಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಹೇಳಿದರು.

ಸೋಮವಾರ ಶಹಾಬಾದ-ವಾಡಿ ರಸ್ತೆಯಲ್ಲಿರುವ ಇ.ಎಸ್.ಐ.ಸಿ. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.

ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಕುರಿತಂತೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಜೊತೆ ಮಾತನಾಡಿದ್ದು, ಕಾರ್ಮಿಕ ಇಲಾಖೆಯಿಂದಲೆ ಆಸ್ಪತ್ರೆ ದುರಸ್ತಿ ಮಾಡಿಸಲಾಗುವುದು. ವೈದ್ಯ ಸಿಬ್ಬಂದಿ ಸೇವೆ ಜೊತೆಗೆ ಔಷಧಿಗಳನ್ನು ಸಹ ನೀಡುವುದಾಗಿ ಅವರು ತಿಳಿಸಿದ್ದಾರೆ. ಹೀಗಾಗಿ ಪ್ಲೋರಿಂಗ್ ದುರಸ್ತಿ, ವಿದ್ಯುತ್ತೀಕರಣ, ಸುಣ್ಣ-ಬಣ್ಣ, ಬೋರವೆಲ್ ರೀಚಾರ್ಜ್ ಸೇರಿದಂತೆ ಸ್ವಚ್ಛತಾ ಕಾರ್ಯ ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆಯ ಎ.ಇ.ಇ. ಅಣ್ಣೆಪ್ಪ‌ ಕುದರಿ ಅವರಿಗೆ ಸಚಿವರು‌ ನಿರ್ದೇಶನ ನೀಡಿದರು.

4.5 ಎಕರೆ‌ ವಿಶಾಲ ಪ್ರದೇಶ ಮತ್ತು ಉತ್ತಮ ಹವಾಗುಣ ಹೊಂದಿರುವ ಇಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲು ಸೂಕ್ತ ಸ್ಥಳವಾಗಿದೆ. ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ಬೇಕಾದ ವೈದ್ಯಕೀಯ ಉಪಕರಣಗಳು ಹಾಗೂ ಇನ್ನಿತರ ಮೂಲಸೌಕರ್ಯಗಳ ಅವಶ್ಯಕತೆ ಬಗ್ಗೆ ಇಂದೇ‌ ನನಗೆ ಪಟ್ಟಿ ಕೊಡಬೇಕು. ಇನ್ನೂ ಕೇಂದ್ರ ಸರ್ಕಾರದೊಂದಿಗೆ ‌ಚರ್ಚಿಸಿ ಮುಂದಿನ 2 ತಿಂಗಳಿನಲ್ಲಿ ಇದನ್ನು ಪೂರ್ಣ ಪ್ರಮಾಣದ ಅಸ್ಪತ್ರೆಯಾಗಿ ಮಾರ್ಪಡಿಸಲು ಪ್ರಯತ್ನಿಸಲಾಗುವುದು. ಈ ನಿಟ್ಟಿನಲ್ಲಿಯೂ ಇದಕ್ಕೆ ಅವಶ್ಯವಿರುವ ಸಿಬ್ಬಂದಿ,‌ ಉಪಕರಣಗಳ ಬಗ್ಗೆ ಮಾಹಿತಿ‌ ನೀಡುವಂತೆ ತಾಲೂಕಾ ಅರೋಗ್ಯಾಧಿಕಾರಿ ಡಾ.ದೀಪಕ ಪಾಟೀಲ ಅವರಿಗೆ ಸಚಿವರು ಸೂಚನೆ‌ ನೀಡಿದರು.

ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಅಸ್ಪತ್ರೆಯಲ್ಲಿ ಆಕ್ಸಿಜನ್, ರೆಮಿಡಿಸಿವಿರ್ ಇಂಜೆಕ್ಷನ್ ಕೊರತೆಯಿಲ್ಲ. ಜಿಲ್ಲೆಯಲ್ಲಿ ರೆಮಿಡಿಸಿವಿರ್ ಕಾಳ ಸಂತೆಯಲ್ಲಿ ಮಾರಾಟಕ್ಕೆ ಕಡಿವಾಣ ಹಾಕಲಾಗಿದೆ. ತಮ್ಮ ಇಲಾಖೆಯಿಂದಲೆ ರಾಜ್ಯದ ‌ಪ್ರತಿ ವಿಭಾಗದಲ್ಲಿ ಎರಡರಂತೆ‌ 10 ಆಕ್ಸಿಜನ್‌ ಜನರೇಷನ್ ಪ್ಲ್ಯಾಂಟ್ ಸ್ಥಾಪಿಸಲಾಗುತ್ತಿದೆ. ಇದಲ್ಲದೆ 45 ಕೆ.ಎಲ್. ಸಾಮರ್ಥ್ಯದ 10 ಅಕ್ಸಿಜನ್ ಕಂಟೇನರ್ ಖರೀದಿಸಿ ಕಲಬುರಗಿ, ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಮಂಗಳೂರು ವಿಭಾಗಕ್ಕೆ ತಲಾ ಎರಡರಂತೆ‌ ನೀಡಲಾಗುತ್ತಿದೆ. ಕೋವಿಡ್ ನಿರ್ವಹಣೆಗೆ ಯಾವುದೇ ಹಣಕಾಸಿನ ಕೊರತೆಯಿಲ್ಲ. ಡಿ.ಎಂ.ಎಫ್ ನಿಧಿ ಬಳಸುವುದರ‌ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯಡಿ ಜಿಲ್ಲೆಯ ಕಾರ್ಪೋರೆಟ್ ಗಳ ನೆರವು ಸಹ ಪಡೆಯಲಾಗುವುದು ಎಂದರು.

ಡಿ.ಅರ್.ಡಿ.ಓ.ದಿಂದ 500 ಜಂಬೋ ಸಿಲೆಂಡರ್: ಕಲಬುರಗಿ ಜಿಲ್ಲೆಗೆ ಡಿ.ಆರ್.ಡಿ.ಓ ಮತ್ತು ಎನ್.ಹೆಚ್.ಎ.ಐ.‌ಸಂಸ್ಥೆ ಒಟ್ಟು 500 ಜಂಬೋ‌ ಸಿಲೆಂಡರ್ ನೀಡಲು ಒಪ್ಪಿಗೆ ಸೂಚಿಸಿವೆ ಎಂದು ಸಚಿವರು ತಿಳಿಸಿದರು.

250 ಆಕ್ಸಿಜನ್ ಬೆಡ್ ಅಸ್ಪತ್ರೆಯಾಗಿ ಪರಿವರ್ತನೆಗೂ ಚಿಂತನೆ:

ಬೋಯಿಂಗ್ ಇಂಡಿಯಾ ಸಂಸ್ಥೆ‌ಯು ಕಲಬುರಗಿ ಜಿಲ್ಲೆಯಲ್ಲಿ 250 ಆಕ್ಸಿಜನ್ ಬೆಡ್ ಆಸ್ಪತ್ರೆ ಸ್ಥಾಪಿಸಲು‌ ಮುಂದೆ ಬಂದಿದ್ದು, ಪ್ರಸ್ತುತ ಜಾಗ ಹುಡುಕಾಟದಲ್ಲಿದ್ದೇವೆ. ಶಹಾಬಾದ ಇ.ಎಸ್.ಐ.ಸಿ. ಅಸ್ಪತ್ರೆ ಇದಕ್ಕೆ ಸೂಕ್ತವಾಗಿದ್ದು, ಇದನ್ನು 250 ಅಕ್ಸಿಜನ್ ಬೆಡ್ ಅಸ್ಪತ್ರೆಯಾಗಿ ಪರಿವರ್ತನೆಗೂ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಚಿಂತನೆ‌ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಚಿತ್ತಾಪೂರ ಸಹಾಯಕ ಅಭಿಯಂತ ಅಣ್ಣೆಪ್ಪ‌ ಕುದರಿ ಅವರು ಮಾತನಾಡಿ 4.5 ಎಕರೆ ಪ್ರದೇಶ ವಿಸ್ತೀರ್ಣ ಹೊಂದಿರುವ ಈ ಆಸ್ಪತ್ರೆ 1997 ರಲ್ಲಿ ನಿರ್ಮಾಣಗೊಂಡು 1998ರಲ್ಲಿ ಹೊರ‌ ರೋಗಿ ಚಿಕಿತ್ಸೆಯೊಂದಿಗೆ ಆರಂಭಗೊಂಡಿತ್ತು. ಅರಂಭಿಕ 120 ಹುದ್ದೆ ಸೃಜಿಸಿ 30 ಹುದ್ದೆಗಳನ್ನು ತುಂಬಲಾಗಿತ್ತು. ಕಾಲಾಂತರದಲ್ಲಿ ಸಿಬ್ಬಂದಿ ಕೊರತೆ ಇನ್ನೀತರ ಕಾರಣದಿಂದ 2005ರಲ್ಲಿ ಆಸ್ಪತ್ರೆ‌ ಮುಚ್ಚಲಾಗಿದೆ. ಪ್ಲೋರಿಂಗ್, ವಿದ್ಯುತ್ತೀಕರಣ, ಸುಣ್ಣ‌-ಬಣ್ಣ ಹಾಳಾಗಿದ್ದು, ದುರಸ್ತಿ‌ ಮಾಡಿಸಬೇಕಿದೆ. ನೀರಿನ ಬೋರವೆಲ್ ಇದ್ದು, ರೀಚಾರ್ಜ್ ಮಾಡಬೇಕಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಸದ‌ ಡಾ.ಉಮೇಶ‌ ಜಾಧವ, ಶಾಸಕ‌ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ತಿನ ಶಾಸಕರಾದ ಬಿ.ಜಿ.ಪಾಟೀಲ, ಶಶೀಲ ಜಿ.ನಮೋಶಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಮಾಜಿ ಎಂ.ಎಲ್.ಸಿ. ಅಮರನಾಥ ಪಾಟೀಲ, ಸಹಾಯಕ ಆಯುಕ್ತ ರಮೇಶ ಕೋಲಾರ, ಡಿ.ಹೆಚ್.ಓ ಡಾ.ಶರಣಬಸಪ್ಪ ಗಣಜಲಖೇಡ್,
ಶಹಾಬಾದ ತಹಶೀಲ್ದಾರ ಸುರೇಶ ವರ್ಮಾ ಮತ್ತಿತರು ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *