ಇನ್ಮುಂದೆ ಫುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸಿದ್ರೆ ಕ್ರಿಮಿನಲ್‌ ಕೇಸ್‌; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

ಹೈಲೈಟ್ಸ್‌:

  • ಫುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸಿದ್ರೆ ಕ್ರಿಮಿನಲ್‌ ಕೇಸ್‌
  • ಪಿಐಎಲ್‌ ವಿಚಾರಣೆ ವೇಳೆ ಹೈಕೋರ್ಟ್‌ ನಿರ್ದೇಶನ
  • ಸುತ್ತೋಲೆ ಹೊರಡಿಸುವಂತೆ ಸರಕಾರಕ್ಕೆ ಆದೇಶ

ಬೆಂಗಳೂರು: ಮುಂದಿನ ದಿನಗಳಲ್ಲಿ ಬೆಂಗಳೂರು ಮಹಾನಗರದಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಯಾರೂ ವಾಹನಗಳನ್ನು ನಿಲುಗಡೆ ಮಾಡುವಂತಿಲ್ಲ. ಒಂದು ವೇಳೆ ನಿಲ್ಲಿಸಿದರೆ ಅದಕ್ಕೆ ದಂಡ ತೆರಬೇಕಾಗುತ್ತದೆ ಮತ್ತು ಕ್ರಿಮಿನಲ್‌ ಕೇಸ್‌ ಕೂಡ ಎದುರಿಸಬೇಕಾಗುತ್ತದೆ. ನಗರದ ವಕೀಲ ಡಿ.ಎಸ್‌. ರಾಮಚಂದ್ರ ರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮನವಿ ಆಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರನ್ನೊಳಗೊಂಡ ವಿಭಾಗೀಯ ಪೀಠ, ಈ ಮಹತ್ವದ ತೀರ್ಪು ನೀಡಿದೆ. ಕೊರೊನಾ ಕಾರಣದಿಂದಾಗಿ ಸದ್ಯಕ್ಕೆ ಇದು ಜಾರಿಯಾಗುವುದು ಸ್ವಲ್ಪ ವಿಳಂಬವಾಗಲಿದೆಯಾದರೂ ನಂತರ ಅನುಷ್ಠಾನಕ್ಕೆ ಬರಲಿದೆ. ‘ಪುಟ್‌ಪಾತ್‌ ಇರುವುದು ಪಾದಚಾರಿಗಳಿಗೆ. ಪಾದಚಾರಿಗಳು ಯಾವುದೇ ಅಡೆತಡೆ ಇಲ್ಲದೆ ಸುರಕ್ಷಿತವಾಗಿ ನಡೆದಾಡುವುದಕ್ಕಾಗಿ. ಆ ಜಾಗದಲ್ಲಿ ವಾಹನಗಳ ಪಾರ್ಕಿಂಗ್‌ ಮಾಡುವುದು ಅಕ್ರಮ ಮತ್ತು ಕಾನೂನುಬಾಹಿರ ಹಾಗೂ ಅದು ಸಂವಿಧಾನದ ಕಲಂ 21ರ ಪ್ರಕಾರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ’ ಎಂದು ಕೋರ್ಟ್‌ ಆದೇಶಿಸಿದೆ.

ಅಲ್ಲದೆ, ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡಿದವರ ವಿರುದ್ಧ ದಂಡನಾ ಕ್ರಮವನ್ನು ಕೈಗೊಳ್ಳಲು ಪೊಲೀಸರು ಮತ್ತು ಬಿಬಿಎಂಪಿಗೆ ಸೂಕ್ತ ಆದೇಶ ನೀಡಬೇಕು ಎಂದು ಸರಕಾರಕ್ಕೆ ನಿರ್ದೇಶನ ನೀಡಿದೆ. ಮೋಟಾರು ವಾಹನ ಕಾಯಿದೆ 1988, ಮೋಟಾರು ವಾಹನ ನಿಯಮ 2017ರ ಚಾಲನಾ ನಿಯಮ, ಕರ್ನಾಟಕ ಮುನಿಸಿಪಲ್‌ ಕಾರ್ಪೋರೇಷನ್‌ ಕಾಯಿದೆ- 1976 ಸೇರಿ ಹಲವು ಕಾಯಿದೆ ಮತ್ತು ನಿಯಮಗಳನ್ನು ನ್ಯಾಯಪೀಠ ಉಲ್ಲೇಖಿಸಿದೆ. ಸಾರ್ವಜನಿಕರು ಸಂಚಾರಕ್ಕೆ ಅಡ್ಡಿಯಾಗುವಂತೆಯೂ ಪಾರ್ಕಿಂಗ್‌ ಮಾಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಸರಕಾರ ಆದೇಶಿಸಬೇಕು. ಪೊಲೀಸರು ಮೋಟಾರು ವಾಹನ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯಡಿ ಕಾನೂನು ಕ್ರಮ ಕೈಗೊಳ್ಳಬಹುದು. ಈ ಬಗ್ಗೆ ಬಿಬಿಎಂಪಿ ಮತ್ತು ಪೊಲೀಸರಿಗೆ ಸೂಚಿಸಿ ಸುತ್ತೋಲೆ ಹೊರಡಿಸುವಂತೆ ನ್ಯಾಯಾಲಯ ಸರಕಾರಕ್ಕೆ ನಿರ್ದೇಶನ ನೀಡಿದೆ.

  • ಸಾರ್ವಜನಿಕ ರಸ್ತೆ ಮತ್ತು ಪಾದಚಾರಿ ಮಾರ್ಗಗಳು ಅಕ್ರಮ ವಾಹನ ಪಾರ್ಕಿಂಗ್‌ ಸೇರಿ ಯಾವುದೇ ಅಡೆತಡೆಗಳಿಂದ ಮುಕ್ತವಾಗಿರಬೇಕು.
  • ಪಾದಚಾರಿ ಮಾರ್ಗ, ರಸ್ತೆ ಒತ್ತುವರಿ ಸಂವಿಧಾನದ ಕಲಂ 21ರಡಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ.
  • ನಿಯಮ ಉಲ್ಲಂಘನೆಯನ್ನು ಲಘುವಾಗಿ ಪರಿಗಣಿಸುವಂತಿಲ್ಲ, ಕ್ರಿಮಿನಲ್‌ ಕಾನೂನು ಕ್ರಮ ಜರುಗಿಸಬೇಕು.
  • ಪಾದಚಾರಿ ಮಾರ್ಗ ಅಥವಾ ರಸ್ತೆಗಳಲ್ಲಿಅನಧಿಧಿಕೃತವಾಗಿ ಪಾರ್ಕ್ ಮಾಡಿರುವ ಕುರಿತು ನಾಗರಿಕರು ದೂರು ನೀಡಿದರೆ, 1988ರ ಮೋಟಾರು ವಾಹನ ಕಾಯಿದೆ ಸೆಕ್ಷನ್‌ 177, 122, 127, 177ಎ ಮತ್ತು 201ರಡಿ ಕ್ರಮ ಜರುಗಿಸಬೇಕು.
  • ಪಾದಚಾರಿ ಮಾರ್ಗದ ಮೇಲೆ ಅಕ್ರಮವಾಗಿ ವಾಹನ ನಿಲ್ಲಿಸಿರುವುದು ಕಂಡು ಬಂದರೆ ತಕ್ಷಣವೇ ಅಂತಹ ವಾಹನಗಳನ್ನು ತೆರವುಗೊಳಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಕಾನೂನು ಕ್ರಮ ಆರಂಭಿಸಬೇಕು.
  • ಸರಕಾರ, ಬಿಬಿಎಂಪಿ, ಪೊಲೀಸ್‌ ಸೇರಿ ಪ್ರತಿವಾದಿಗಳು ಕೇಂದ್ರ ಮೋಟಾರು ವಾಹನ ಕಾಯಿದೆ, ಪೊಲೀಸ್‌ ಕಾಯಿದೆ ಸೇರಿ ಎಲ್ಲನಿಯಮಗಳಡಿ ಕ್ರಮ ಜರುಗಿಸಬೇಕು.
  • ಸರಕಾರ ಮತ್ತು ಬಿಬಿಎಂಪಿ ಈ ಬಗ್ಗೆ ಕೆಳಹಂತದ ಅಧಿಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಅಗತ್ಯ ಸುತ್ತೋಲೆ ಹೊರಡಿಸಬೇಕು

ಕಾನೂನು ಸೇವಾ ಪ್ರಾಧಿಕಾರದ ವರದಿ
ನಗರದಲ್ಲಿ ಫುಟ್‌ಪಾತ್‌ ಮೇಲೆ ವಾಹನಗಳನ್ನು ಪಾರ್ಕ್ ಮಾಡುವುದರ ಕುರಿತು ಅರ್ಜಿದಾರರು ಪಿಐಎಲ್‌ ಹೂಡಿದ್ದರು. ಅದರ ವಿಚಾರಣೆ ವೇಳೆ ನ್ಯಾಯಪೀಠ, ಅರ್ಜಿದಾರರು ಪ್ರಸ್ತಾಪಿಸಿರುವ ಅಂಶದ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕಾನೂನು ಸೇವಾ ಪ್ರಾಧಿಧಿಕಾರಕ್ಕೆ ಸೂಚನೆ ನೀಡಿತ್ತು. ಪ್ರಾಧಿಕಾರದ ಸದಸ್ಯರು ಹಲವು ಪ್ರದೇಶಗಳಿಗೆ ಭೇಟಿ ನೀಡಿ ಫುಟ್‌ಪಾತ್‌ ಮೇಲೆ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಪಾರ್ಕ್ ಮಾಡಿರುವ ಕುರಿತು ಫೋಟೋ ಸಹಿತ ವರದಿ ಸಲ್ಲಿಸಿದ್ದರು. ಅದನ್ನು ಆಧರಿಸಿ ನ್ಯಾಯಾಲಯ ಸಮಗ್ರ ಆದೇಶ ಹೊರಡಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *