ಇಸ್ರೇಲ್-ಪ್ಯಾಲೆಸ್ತೇನ್ ಸಂಘರ್ಷ: ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೇನ್‌ಗೆ ಬೆಂಬಲ ಸೂಚಿಸಿದ ಭಾರತ
ಹೈಲೈಟ್ಸ್:
- ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವೆ ತೀವ್ರಗೊಂಡಿರುವ ಸಂಘರ್ಷ
- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಹೇಳಿಕೆ ನೀಡಿದ ಭಾರತ
- ಇಸ್ರೇಲ್ ಮೇಲಿನ ಹಮಾಸ್ ದಾಳಿಗೆ ಖಂಡನೆ
- ಪ್ಯಾಲೆಸ್ತೇನ್ ಉದ್ದೇಶಕ್ಕೆ ಭಾರತದ ಬೆಂಬಲ, ಮಾತುಕತೆಗೆ ಸಲಹೆ
ವಿಶ್ವಸಂಸ್ಥೆ: ಇಸ್ರೇಲ್ ಹಾಗೂ ಪ್ಯಾಲೆಸ್ತೇನ್‌ನ ಹಮಾಸ್ ಉಗ್ರರ ನಡುವಿನ ಕಾದಾಟ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಪರ ಭಾರತೀಯರು ಸಮರ ನಡೆಸಿದ್ದರು. ಆದರೆ ವಿಶ್ವಸಂಸ್ಥೆಯಲ್ಲಿ ಭಾರತವು ಪ್ಯಾಲೆಸ್ತೇನ್ ಪರ ಧ್ವನಿ ಎತ್ತಿದೆ.
ಮಧ್ಯಪ್ರಾಚ್ಯದಲ್ಲಿರುವ ಪರಿಸ್ಥಿತಿಯ ಕುರಿತಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಭಾನುವಾರ ತನ್ನ ಹೇಳಿಕೆ ದಾಖಲಿಸಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವಣ ಸಂಘರ್ಷದ ಸಂದರ್ಭದಲ್ಲಿ ಎರಡೂ ಕಡೆ ಸಮತೋಲನದ ನಿಲುವನ್ನು ಪ್ರದರ್ಶಿಸುವ ರೀತಿಯಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ, ರಾಯಭಾರಿ ಟಿಎಸ್ ತಿರುಮೂರ್ತಿ ಹೇಳಿಕೆ ನೀಡಿದ್ದಾರೆ.
ಎರಡು ದೇಶಗಳ ನಡುವಿನ ಮಾತುಕತೆ ಪರಿಹಾರವನ್ನು ಪುನರುಚ್ಚರಿಸಿರುವ ಭಾರತ, ಗಾಜಾದಿಂದ ನಡೆದ ವ್ಯಾಪಕ ರಾಕೆಟ್ ದಾಳಿಯನ್ನು ಖಂಡಿಸಿದೆ. ಜತೆಗೆ ಇಸ್ರೇಲ್‌ನ ದಾಳಿಯು ಪ್ರತಿಕಾರದ ಸ್ವರೂಪದ್ದಾಗಿದ್ದು, ಇದು ಆಕ್ರೋಶದ ಪ್ರತಿಕ್ರಿಯೆಯಂತೆ ಕಾಣಿಸುತ್ತಿಲ್ಲ ಎಂದಿದೆ.
ಇಸ್ರೇಲ್‌ನ ಆಶ್ಕೆಲನ್‌ನಲ್ಲಿ ರಾಕೆಟ್ ದಾಳಿಯಿಂದ ಭಾರತದ ಸೌಮ್ಯಾ ಸಂತೋಷ್ ಅವರು ಹತ್ಯೆಯಾಗಿದ್ದು ಸೇರಿದಂತೆ, ಈ ಹಿಂಸಾಚಾರದಲ್ಲಿ ಅಪಾರ ಪ್ರಮಾಣದ ಸಾವುನೋವುಗಳು ಉಂಟಾಗಿವೆ ಎಂದು ತಿರುಮೂರ್ತಿ ವಿಷಾದಿಸಿದ್ದಾರೆ.
‘ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರವು ಭದ್ರತಾ ಸನ್ನಿವೇಶವನ್ನು ತೀವ್ರಮಟ್ಟದಲ್ಲಿ ಕುಸಿಯುವಂತೆ ಮಾಡಿದೆ’ ಎಂದಿರುವ ತಿರುಮೂರ್ತಿ, ಪ್ಯಾಲೆಸ್ತೇನ್ ಪ್ರತಿಪಾದಿಸುತ್ತಿರುವ ಹಕ್ಕನ್ನು ಭಾರತ ಬೆಂಬಲಿಸುತ್ತದೆ ಹಾಗೂ ದ್ವಿಪಕ್ಷೀಯ ಪರಿಹಾರದ ಕುರಿತಾದ ತನ್ನ ನಿಲುವಿಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ.
‘ತಕ್ಷಣವೇ ಸಂಘರ್ಷವನ್ನು ಸ್ಥಗಿತಗೊಳಿಸುವುದು ಈ ಸಮಯದ ತುರ್ತು ಅಗತ್ಯವಾಗಿದೆ. ಎರಡೂ ದೇಶಗಳು ನಿಯಂತ್ರಣ ಪ್ರದರ್ಶಿಸಬೇಕು, ಉದ್ವಿಗ್ನತೆಯನ್ನು ಹೆಚ್ಚಿಸುವ ಕ್ರಿಯೆಗಳಿಂದ ದೂರವಿರಬೇಕು. ಪೂರ್ವ ಜೆರುಸಲೆಂ ಮತ್ತು ಅದರ ನೆರೆಯ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಸ್ಥಿತಿಗತಿಯನ್ನು ಏಕಪಕ್ಷೀಯವಾಗಿ ಬದಲಿಸುವ ಪ್ರಯತ್ನಗಳನ್ನು ನಡೆಸಬಾರದು’ ಎಂದು ಭಾರತ ಸಲಹೆ ನೀಡಿದೆ.