ಬೆಂಗಳೂರು ವೈದ್ಯನ ಮೇಲೆ ಹಲ್ಲೆ ಪ್ರಕರಣ: ಇನ್ಸ್‌ಪೆಕ್ಟರ್‌ ಕಾತ್ಯಾಯಿನಿ ಆಳ್ವ ಸೇರಿ ಇಬ್ಬರು ಹೆಡ್‌ಕಾನ್ಸ್‌ಟೆಬಲ್‌ ಸಸ್ಪೆಂಡ್‌

ಹೈಲೈಟ್ಸ್‌:

  • ರೆಮ್‌ಡೆಸಿವಿರ್‌ ಸಂಬಂಧ ಬೆಂಗಳೂರು ವೈದ್ಯನ ಮೇಲೆ ಹಲ್ಲೆ ಪ್ರಕರಣ
  • ಸಂಜಯನಗರ ಠಾಣೆಯ ಇನ್ಸ್‌ಪೆಕ್ಟರ್‌ ಕಾತ್ಯಾಯಿನಿ ಆಳ್ವ ಅಮಾನತು
  • ವೈದ್ಯನಿಗೆ ಹಲ್ಲೆ ನಡೆಸಿದಲ್ಲದೆ ಹಣ ಕಿತ್ತ ಆರೋಪವು ಇದೆ

ಬೆಂಗಳೂರು: ಕಾಳಸಂತೆಯಲ್ಲಿ ರೆಮ್‌ಡೆಸಿವಿರ್‌ ಇಂಜೆಕ್ಷನ್‌ ಮಾರಾಟ ಮಾಡಿದ ದೂರಿನ ಮೇರೆಗೆ ವೈದ್ಯರೊಬ್ಬರನ್ನು ಅಕ್ರಮ ಬಂಧನದಲ್ಲಿಟ್ಟು ಥಳಿಸಿದ ಆರೋಪದ ಮೇರೆಗೆ ಸಂಜಯನಗರ ಠಾಣೆ ಇನ್ಸ್‌ಪೆಕ್ಟರ್‌ ಕಾತ್ಯಾಯಿನಿ ಆಳ್ವ ಹಾಗೂ ಇಬ್ಬರು ಹೆಡ್‌ ಕಾನ್‌ಸ್ಟೆಬಲ್‌ಗಳನ್ನು ಸಸ್ಪೆಂಡ್‌ ಮಾಡಲಾಗಿದೆ.

ಇನ್ಸ್‌ಪೆಕ್ಟರ್‌ ಕಾತ್ಯಾಯಿನಿ, ಹೆಡ್‌ ಕಾನ್ಸ್‌ಟೆಬಲ್‌ಗಳಾದ ಮಂಜುನಾಥ್‌ ಹಾಗೂ ಪಾಂಡುರಂಗ ಅವರನ್ನು ಪೊಲೀಸ್‌ ಕಮಿಷನರ್‌ ಕಮಲ್‌ಪಂತ್‌ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಶ್ರೀ ಸಾಯಿ ಆಸ್ಪತ್ರೆ ವೈದ್ಯ ಡಾ. ನಾಗರಾಜ್‌ ಅವರನ್ನು ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಸಿ ಅಕ್ರಮ ಬಂಧನದಲ್ಲಿರಿಸಿ ಥಳಿಸಲಾಗಿತ್ತು.

ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಡಾ. ನಾಗರಾಜ್‌ ತಮ್ಮ ಮೇಲಾದ ಹಲ್ಲೆ ಬಗ್ಗೆ ವಿಡಿಯೊ ಹರಿಬಿಟ್ಟಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್‌ ಮೀನಾ ಅವರು ಜೆ.ಸಿ.ನಗರ ಎಸಿಪಿ ರೀನಾ ಸುವರ್ಣ ಅವರಿಗೆ ಸೂಚಿಸಿದ್ದರು.

ಪ್ರಾಥಮಿಕ ತನಿಖೆಯಲ್ಲಿ ಇನ್ಸ್‌ಪೆಕ್ಟರ್‌ ಹಾಗೂ ಇಬ್ಬರು ಹೆಡ್‌ಕಾನ್ಸ್‌ಟೆಬಲ್‌ಗಳು ತಪ್ಪೆಸಗಿರುವುದು ಸಾಬೀತಾಗಿತ್ತು. ಎಸಿಪಿ ತನಿಖಾ ವರದಿಯನ್ನು ಡಿಸಿಪಿ ಮೂಲಕ ಪೊಲೀಸ್‌ ಕಮಿಷನರ್‌ ಕಮಲ್‌ಪಂತ್‌ಗೆ ಸಲ್ಲಿಸಲಾಗಿತ್ತು. ತನಿಖಾ ವರದಿ ಆಧರಿಸಿ ಕಮಿಷನರ್‌ ಮೂವರನ್ನು ಅಮಾನತು ಗೊಳಿಸಿದ್ದಾರೆ.ಮೂವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಪಂತ್‌ ತಿಳಿಸಿದ್ದಾರೆ.

ಠಾಣೆಯಿಂದ ಎತ್ತಂಗಡಿ!
ಈ ನಡುವೆ, ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ಸಂಜಯನಗರ ಠಾಣೆ ಇನ್ಸ್‌ಪೆಕ್ಟರ್‌ ಕಾತ್ಯಾಯಿನಿ ಹಾಗೂ ಇಬ್ಬರು ಹೆಡ್‌ ಕಾನ್ಸ್‌ಟೆಬಲ್‌ಗಳನ್ನು ಎತ್ತಂಗಡಿ ಮಾಡಿ ಡಿಸಿಪಿ ಕಚೇರಿಗೆ ನಿಯುಕ್ತಿಗೊಳಿಸಲಾಗಿತ್ತು. ಶ್ರೀ ಸಾಯಿ ಆಸ್ಪತ್ರೆ ವೈದ್ಯರಾದ ಡಾ. ನಾಗರಾಜ್‌ ಅವರು ತಮ್ಮ ಮೇಲೆ ನಡೆದ ಹಲ್ಲೆಕುರಿತು ವಿವರಣೆ ನೀಡಿ ವಿಡಿಯೋ ಮತ್ತೊ ಪೋಟೊ ಹರಿಬಿಟ್ಟಿದ್ದರು.

”ಸಾಗರ್‌ ಎಂಬಾತ ನನ್ನ ಹೆಸರು ಹೇಳಿದ್ದಾನೆಂಬ ಕಾರಣಕ್ಕೆ ನನ್ನನ್ನು ಎರಡು ದಿನ ಠಾಣೆಯಲ್ಲಿಟ್ಟುಕೊಂಡು ದೌರ್ಜನ್ಯ ನಡೆಸಿದ್ದಾರೆ. ಹಣ ಕಿತ್ತುಕೊಂಡಿದ್ದಾರೆ. ಯಾರಿಗಾದರೂ ಹೇಳಿದರೆ ಮತ್ತೆ ಇದೇ ರೀತಿಯ ಶಿಕ್ಷೆ ಕಾದಿದೆ ಎಂದು ಬೆದರಿಕೆ ಹಾಕಿದ್ದಾರೆ,” ಎಂದು ಡಾ. ನಾಗರಾಜ್‌ ಆರೋಪಿಸಿದ್ದರು. ಪೃಷ್ಠದ ಮೇಲೆ ದೌರ್ಜನ್ಯ ನಡೆಸಿರುವ ಕಾರಣ ಕುಳಿತುಕೊಳ್ಳಲಾಗದ ಸ್ಥಿತಿಯಲ್ಲಿರುವ ವೈದ್ಯ, ಬೋರಲು ಮಲಗಿದ ಸ್ಥಿತಿಯಲ್ಲೇ ಮಾತನಾಡಿದ್ದರು. ದೌರ್ಜನ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *