ದೇಶದಲ್ಲಿ ಕೊರೋನಾ ಪರಿಸ್ಥಿತಿ ಮಿತಿ ಮೀರಿದೆ. ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನು ಭಾರತೀಯ ಕ್ರಿಕೇಟ್ ತಂಡದ ತಾರೆಯರನ್ನೂ ಕೋವಿಡ್ ಬಿಟ್ಟಂತೆ ಕಾಣುತ್ತಿಲ್ಲ. ಕೇವಲ ಎರಡು ವಾರದ ಅಂತರದಲ್ಲಿ ತನ್ನ ಸಹೋದರಿ ಮತ್ತು ತನ್ನ ತಾಯಿಯನ್ನು ಭಾರತ ಮಹಿಳಾ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕಳೆದುಕೊಂಡಿದ್ದರು. ಇನ್ನು ಈ ಸಮಯದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಲಿ ನೀಡಿರುವ ಸಹಾಯವನ್ನು ವೇದಾ ನೆನೆದು ಬಿಸಿಸಿಐಗೆ ಧನ್ಯವಾದ ಸಮರ್ಪಿಸಿದ್ದಾರೆ.

ವೇದಾ ದು:ಖದ ಮಡುವಿನಲ್ಲಿದ್ದಾಗ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ತಂಡವನ್ನು ಆಯ್ಕೆ ಮಾಡಲಾಗಿತ್ತು. ವೇದಾ ಅವರನ್ನು ಕೈಬಿಡಲಾಗಿತ್ತು. ಆದರೆ ಇದಕ್ಕೂ ಮುನ್ನ ಸೌಜನ್ಯಕ್ಕಾದರೂ ಅವರ ಅಭಿಪ್ರಾಯ ತಿಳಿಯಲು ಬಿಸಿಸಿಐ ಮುಂದಾಗಲಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕಿ ಲಿಸಾ ಸ್ಥಳೇಕರ್ ದೂರಿದ್ದರು.
ಇದರ ಬೆನ್ನಲ್ಲೇ ವೇದಾ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದು ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಸಿಸಿಐ ತೋರಿದ ಕಾಳಜಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮಂಡಳಿಯ ಕಾರ್ಯದರ್ಶಿ ಜಯ ಶಾ ಅವರಿಗೂ ಅಭಾರಿ ಎಂದು ತಿಳಿಸಿದ್ದಾರೆ.
ವೇದಾ, ಭಾರತ ಮಹಿಳಾ ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಭಾರತ ತಂಡದ ಆಧಾರ ಸ್ಥಂಭಗಳಲ್ಲೊಬ್ಬರು.