ಜಿಮ್ಸ್ಗೆ ಹೋದ್ರೆ ಆರಾಮಾಗಿ ಮನೆಗೆ ಬರಲ್ಲ, ಸೀದಾ ಸ್ಮಶಾನಕ್ಕೆ: ತಾಯಿ ಕಳೆದುಕೊಂಡ ಮಗನ ಆಕ್ರೋಶ
ಸರ್ಕಾರಿ ಆಸ್ಪತ್ರೆಯಾದ್ದರಿಂದ ಇಲ್ಲಿ ಬಡ ರೋಗಿಗಳು ಹೆಚ್ಚಾಗಿ ಬರ್ತಾರೆ. ಆದರೆ ಇಲ್ಲಿ ಸರಿಯಾಗಿ ಚಿಕಿತ್ಸೆ ಕೊಡ್ತಿಲ್ಲ. ಇದೇ ಕಾರಣಕ್ಕೆ ನಾನು ನಮ್ಮ ತಾಯಿಯನ್ನು ಕಳೆದುಕೊಳ್ಳಬೇಕಾಯಿತು. ನಮ್ಮ ಸ್ನೇಹಿತರು ಕೂಡ ಕೆಲವರನ್ನು ದಾಖಲಿಸಿದ್ದರು. ಅವರು ಕೂಡ ಬದುಕಲಿಲ್ಲ ಎಂದು ವ್ಯಕ್ತಿಯೊಬ್ಬರು ತಮ್ಮ ದುಃಖ ಹಂಚಿಕೊಂಡಿದ್ದಾರೆ.
ಕಲಬುರಗಿ: ದೊಡ್ಡ ಆಸ್ಪತ್ರೆ ಅಂತಾ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಅವರು ಆರಾಮಾಗಿ ಮನೆಗೆ ಬರೋದಿಲ್ಲ. ಬದಲಾಗಿ ಸೀದಾ ಸ್ಮಶಾನಕ್ಕೆ ಹೆಣವಾಗಿ ಹೋಗ್ತಾರೆ ಅಂತ ತಾಯಿಯನ್ನು ಕಳೆದುಕೊಂಡ ಮಗನೋರ್ವ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ..
ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲಹಂಗರಗಾ ಗ್ರಾಮದ ನಿವಾಸಿ ಬಸವರಾಜ್ ಎಂಬುವರು ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ಜಿಮ್ಸ್ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಲ್ಲಿ ಅಡ್ಮಿಟ್ ಆದರೆ ಹೆಣವಾಗಿಯೇ ಹೊರ ಬರುವ ಸ್ಥಿತಿ ಇದೆ.. ಜಿಮ್ಸ್ ಆಸ್ಪತ್ರೆ ವಿರುದ್ಧ ಸೋಂಕಿತ, ರೋಗಿಗಳ ಸಂಬಂಧಿಕರು ಕಿಡಿ..” ಎಂದು ಇತ್ತೀಚೆಗೆ ಈಟಿವಿ ಭಾರತದಲ್ಲಿ ವರದಿ ಪ್ರಸಾರವಾಗಿತ್ತು. ಇದೀಗ ಆಸ್ಪತ್ರೆಯ ನಿರ್ಲಕ್ಷ್ಯದಿಂದ ತಾಯಿಯನ್ನು ಕಳೆದುಕೊಂಡ ಬಸವರಾಜ ನೇರಾನೇರವಾಗಿ ಆರೋಪ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಉಸಿರಾಟದ ಸಮಸ್ಯೆ ಹಿನ್ನೆಲೆ 65 ವರ್ಷದ ತಾಯಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದೆ. ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ನೀಡಲಿಲ್ಲ. ಹೀಗಾಗಿ ನಮ್ಮ ತಾಯಿ ಮೃತಪಟ್ಟಿದ್ದಾರೆ. ಹೀಗೆ ಅನೇಕರು ಜಿಮ್ಸ್ ಆಸ್ಪತ್ರೆಯಲ್ಲಿ ಸಾಯುತ್ತಿದ್ದಾರೆ. ಜಿಮ್ಸ್ ಸಾವಿನ ಮನೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬಸವರಾಜ್, ಜಿಮ್ಸ್ ಆಸ್ಪತ್ರೆಗೆ ರೋಗಿಗಳನ್ನು ಸೇರಿಸಬೇಡಿ ಎಂದು ಮನವಿ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಎಲ್ಲಡೆ ವೈರಲ್ ಆಗಿದೆ.
ಸರ್ಕಾರಿ ಆಸ್ಪತ್ರೆಯಾದ್ದರಿಂದ ಇಲ್ಲಿ ಬಡ ರೋಗಿಗಳು ಹೆಚ್ಚಾಗಿ ಬರ್ತಾರೆ. ಆದರೆ ಇಲ್ಲಿ ಸರಿಯಾಗಿ ಚಿಕಿತ್ಸೆ ಕೊಡ್ತಿಲ್ಲ. ಇದೇ ಕಾರಣಕ್ಕೆ ನಾನು ನಮ್ಮ ತಾಯಿಯನ್ನು ಕಳೆದುಕೊಳ್ಳಬೇಕಾಯಿತು. ನಮ್ಮ ಸ್ನೇಹಿತರು ಕೂಡ ಕೆಲವರನ್ನು ದಾಖಲಿಸಿದ್ದರು. ಅವರು ಕೂಡ ಬದುಕಲಿಲ್ಲ. ರೋಗಿಗಳ ಬಗ್ಗೆ ಜಿಮ್ಸ್‌ನಲ್ಲಿ ಯಾರಿಗೂ ಕೂಡ ಕಾಳಜಿಯಿಲ್ಲ. ಹೀಗಾಗಿ ನೊಂದಿದ್ದೇನೆ. ನನಗೆ ಆದ ಪರಿಸ್ಥಿತಿ ಬೇರೆಯವರಿಗೆ ಆಗಬಾರದು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದೇನೆ ಎಂದು ಬಸವರಾಜ್ ಹೇಳಿಕೊಂಡಿದ್ದಾರೆ.
ಇವರ ಪೋಸ್ಟ್ಗೆ ಸ್ಪಂದಿಸಿರುವ ಹಲವರು ಸಹ ಜಿಮ್ಸ್ ಆಸ್ಪತ್ರೆ ವಿರುದ್ಧ ಕಿಡಿಕಾರಿದ್ದಾರೆ. ಇಲ್ಲಿನ ಆಡಳಿತ ಅಧಿಕಾರಿಗಳನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿದ್ದಾರೆ. ಜಿಮ್ಸ್ ಆಸ್ಪತ್ರೆಗೇ ಚಿಕಿತ್ಸೆ ಆಗಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕಿದೆ.