‘ರಾಜ್ಯದಲ್ಲಿ ಕೊರೊನಾದಿಂದಾದ ಅಷ್ಟೂ ಸಾವು ನೋವಿಗೆ ಕಾಂಗ್ರೆಸ್‌ನವರೇ ನೇರ ಕಾರಣ’; ಶ್ರೀರಾಮುಲು

ಚಿತ್ರದುರ್ಗ: ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅವಿರತ ಶ್ರಮಿಸುತ್ತಿವೆ. ಈ ವಿಚಾರದಲ್ಲಿ ಸರಕಾರಕ್ಕೆ ಸಹಕಾರ, ಬೆಂಬಲ ನೀಡುವ ಬದಲು ರಾಜ್ಯ ಕಾಂಗ್ರೆಸ್‌ ಪಕ್ಷದ ನಾಯಕರು ಅಪಪ್ರಚಾರ ಮಾಡುವ ಮೂಲಕ ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಇತರೆ ರಾಜ್ಯಗಳಲ್ಲಿ ವಿರೋಧ ಪಕ್ಷದವರು ಸರಕಾರಗಳ ಜತೆ ಕೈಜೋಡಿಸಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿ, ಜನರನ್ನು ಗೊಂದಲದಲ್ಲಿ ಸಿಲುಕಿಸಿ ರಾಜ್ಯದಲ್ಲಿ ಇಷ್ಟು ಮಂದಿ ಸಾವಿಗೆ ಕಾಂಗ್ರೆಸ್‌ನವರೇ ನೇರ ಹೊಣೆ ಎಂದು ದೂರಿದರು. ಜನರಿಗೆ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಭಯ ಮೂಡಿಸಿರುವ ಕಾಂಗ್ರೆಸ್‌ ನವರೇ ತಮ್ಮ ಕುಟುಂಬ ಸಮೇತ ಲಸಿಕೆ ಹಾಕಿಸಿಕೊಂಡು ಬಂದಿದ್ದಾರೆ ಲೇವಡಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಇತರೆ ಕಾಂಗ್ರೆಸ್‌ ನಾಯಕರು ಹೊಲಸು ರಾಜಕಾರಣ ಮಾಡುತ್ತಿದ್ದಾರೆ. ಆದರೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕೊರೊನಾ ವಿಚಾರದಲ್ಲಿ ಈ ರೀತಿಯ ರಾಜಕಾರಣ ಮಾಡಿಲ್ಲ ಎಂದರು. ರಾಜ್ಯದಲ್ಲಿ ಈಗ 33405 ಆಕ್ಸಿಜನೇಟೆಡ್‌ ಬೆಡ್‌ಗಳಿಗೆ ಏರಿಕೆ ಮಾಡಲಾಗಿದೆ. 444 ಐಸಿಯು ಬೆಡ್‌ಗಳಿಂದ 1145ಕ್ಕೆ ಹೆಚ್ಚಿಸಲಾಗಿದೆ. 951 ವೆಂಟಿಲೇಟರ್‌ ಬೆಡ್‌ ಗಳಿಂದ 2705ಕ್ಕೆ ಏರಿಸಿರುವುದು ಸೇರಿದಂತೆ ಮತ್ತಿತರ ವೈದ್ಯಕೀಯ ಸೌಲಭ್ಯ ಒದಗಿಸಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಲಾಗುತ್ತಿದೆ ಎಂದರು.

ಸಂಸದ ಎ.ನಾರಾಯಣಸ್ವಾಮಿ, ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ವೈ.ಎ. ನಾರಾಯಣಸ್ವಾಮಿ, ಎ.ಮುರಳಿ ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *